ಕಡಿಮೆ ಬಜೆಟ್‍ನಲ್ಲಿ ಗುಣಮಟ್ಟಕ್ಕೆ ರಾಜಿಯಾಗದಂತೆ ಚಿತ್ರ ಮಾಡುವ ಬಗ್ಗೆ ಮೊದಲು ಗಮನಹರಿಸಬೇಕು ಎಂದು ನಟ-ನಿರ್ದೇಶಕ ರಾಜ್ ಶೆಟ್ಟಿ ಹೇಳಿದ್ದಾರೆ.
ಇತ್ತೀಚೆಗೆ ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೊಳ್’ ಚಿತ್ರ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಚಿತ್ರದ ಬಜೆಟ್ ಕುರಿತೂ ಚರ್ಚೆ ಆಯಿತು. ಸಿನಿಮಾ ಯಾವತ್ತಿದ್ದರೂ ಇತಿಮಿತಿಯಲ್ಲಿ ಆಗಬೇಕು ಎಂದು ರಾಜ್ ಈ ಸಂದರ್ಭದಲ್ಲಿ ಹೇಳಿದರು.
‘ನಾನು ಯಾವುದೇ ಚಿತ್ರವಾದರೂ ಮೊದಲು ಬಜೆಟ್ ಎಷ್ಟು ಎಂದು ಕೇಳುತ್ತೀನಿ. ನನಗೆ ಬಜೆಟ್ ದೊಡ್ಡದಾಗಬೇಕು ಎಂದಲ್ಲ. ಕಡಿಮೆ ಬಜೆಟ್‍ನಲ್ಲಿ, ಉತ್ತಮ ಗುಣಮಟ್ಟದ ಚಿತ್ರಗಳನ್ನು ಹೇಗೆ ಮಾಡುವುದು ಎಂದು ನಾನು ತಲೆ ಕೆಡಿಸಿಕೊಳ್ಳುತ್ತೇನೆ. ರವಿ ವರ್ಮ ಅವರು ಮೊದಲು ಫೋನ್ ಮಾಡಿದಾಗಲೂ ಅದೇ ಮಾತನ್ನು ಹೇಳಿದೆ. ಸಿನಿಮಾ ನಮ್ಮ ಇತಿಮಿತಿಯಲ್ಲಿ ಆಗಬೇಕು ಎಂದು. ನಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದರೆ ನಮ್ಮ ಮದುವೆ ಫೋಟೋಶೂಟ್‍ನಲ್ಲಿ ಕಾಣಿಸಿಕೊಳ್ಳೋಣ. ಇದು ಸಿನಿಮಾ. ಇದೊಂದು ವ್ಯಾಪಾರ. ಹಾಗಾಗಿ, ನಿರ್ಮಾಪಕರು ಗೆಲ್ಲಬೇಕು. ಇತಿಮಿತಿಯಲ್ಲಿ ಚಿತ್ರ ಮಾಡಿದಾಗ ಅರ್ಧ ಗೆದ್ದಂತಾಗುತ್ತದೆ’ ಎಂದರು.
ನಿರ್ಮಾಪಕರು ಗೆದ್ದರೆ ನಾವು ಗೆದ್ದಂತೆ ಎನ್ನುವ ರಾಜ್ ಶೆಟ್ಟಿ, ‘ಜನ ನಮಗೆ ಹೇಗೆ ಬೇಕಾದರೂ ಬೈದುಕೊಳ್ಳಲಿ. ಆದರೆ, ಒಬ್ಬ ನಿರ್ಮಾಪಕ ಉಳಿಯುವುದು ಹೆಚ್ಚು ಮುಖ್ಯ. ಒಬ್ಬ ನಿರ್ಮಾಪಕ ಗೆದ್ದಾಗ ಅವರು ಇನ್ನಷ್ಟು ಚಿತ್ರಗಳನ್ನು ಮಾಡುತ್ತಾರೆ. ಅದರಿಂದ ಎಲ್ಲರೂ ಬೆಳೆಯುತ್ತಾರೆ. ಅದೇ ಸೋತರೆ, ಅವರು ಮುಂದೆ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ, ನಮ್ಮ ಇತಿಮಿತಿಯಲ್ಲಿ ಹೇಗೆ ಚಿತ್ರ ಮಾಡಬೇಕು ಎಂಬುದರ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. 45 ದಿನಗಳಲ್ಲಿ ಒಂದು ಚಿತ್ರ ಆಗುತ್ತದೆ ಎಂದರೆ, 42 ದಿನಗಳಲ್ಲಿ ಹೇಗೆ ಮುಗಿಸಬೇಕು ಎಂದು ನೋಡೋಣ. ಬೆಳಿಗ್ಗೆ ಆರು ಗಂಟೆಯಿಂದಲೇ ಚಿತ್ರೀಕರಣ ಮಾಡೋಣ. ಬಜೆಟ್‍ನ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂಬುದು ಮೊದಲು ನಮ್ಮಗಮನದಲ್ಲಿರಬೇಕು. ಸುಮ್ಮನೆ ಪ್ರೇಕ್ಷಕರ ಮೇಲೆ ಭಾರ ಹಾಕಬಹುದು. ಕಡಿಮೆ ಬಜೆಟ್‍ನಲ್ಲಿ ಗುಣಮಟ್ಟಕ್ಕೆ ರಾಜಿಯಾಗದಂತೆ ಚಿತ್ರ ಮಾಡುವ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ’ ಎಂದರು.
‘ರಕ್ಕಸಪುರದೊಳ್’ ಚಿತ್ರವನ್ನು ಸಾಹಸ ನಿರ್ದೇಶಕ ಕೆ. ರವಿವರ್ಮ ನಿರ್ಮಿಸುತ್ತಿದ್ದು, ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಜ್, ಸಾತ್ವಿಕಾ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತವಿದೆ.


