ದೆವ್ವ ಬಳಸಿಕೊಂಡು ಸಮಸ್ಯೆ ಹೇಳುವ ಪ್ರಯತ್ನ ‘ಕಬಂಧ’

ಚಂದನವನ, ವೀಡಿಯೋ, ಸಿನಿ ಸುದ್ದಿ

ಕಿಶೋರ್, ಅವಿನಾಶ್‍, ಪ್ರಸಾದ್‍ ವಸಿಷ್ಠ ಮುಂತಾದವರು ಅಭಿನಯದ ‘ಕಬಂಧ’ ಎಂಬ ಚಿತ್ರದ ಟ್ರೇಲರ್‍ ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈಗ ಚಿತ್ರದ ಸರದಿ. ಚಿತ್ರವು ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಹೇಳುವುದರ ಜೊತೆಗೆ ಚಿತ್ರದ ಒಂದು ಲಿರಿಕಲ್‍ ಹಾಡು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದವರು ಬಂದಿದ್ದರು.

‘ಕಬಂಧ’ ಚಿತ್ರದ ‘ನೆನಪಿನ ಬುತ್ತಿ’ ಎಂಬ ಸ್ನೇಹಗೀತೆಯು ಡಿಬೀಟ್ಸ್ ಆಡಿಯೋದಲ್ಲಿ ಬಿಡುಗಡೆಯಾಗಿದೆ. ಶ್ರೇಯಸ್‍ ಬಿ ರಾವ್‍ ಮತ್ತು ರಘೋತ್ತಮ ಎನ್‍.ಎಸ್‍ ಸಂಗೀತ ಸಂಯೋಜಿಸಿದ್ದು, ವಾಸುಕಿ ವೈಭವ್‍ ಹಾಡಿದ್ದಾರೆ. ಇನ್ನು, ಕೆ. ಕಲ್ಯಾಣ್‍ ಸಾಹಿತ್ಯ ಬರೆದಿದ್ದಾರೆ.

ಈ ಹಾಡಿನ ಕುರಿತು ಮಾತನಾಡುವ ನಿರ್ದೇಶಕ ಸತ್ಯನಾಥ್‍, ‘ಚಿತ್ರದಲ್ಲಿ ಹಾಡಿಗೆ ಜಾಗ ಇರಲಿಲ್ಲ. ಇದೊಂದು ಹಾರರ್ ಚಿತ್ರ. ಹಾಗಾಗಿ, ಸ್ನೇಹದ ಸುತ್ತ ೊಂದು ಮಾಂಟೇಜ್‍ ಹಾಡು ಮಾಡಿಕೊಂಡಿದ್ದೇವೆ. ಹಾಡು ಕೇಳಿದವರೆಲ್ಲ ಖುಷಿಪಟ್ಟಿದ್ದಾರೆ. ಇದು ವ್ಯವಸಾಯದ ಸುತ್ತ ಇರುವ ಒಂದು ಸಮಸ್ಯೆಯ ಕುರಿತದ ಚಿತ್ರ. ಆ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಆದರೆ, ನಾವು ಅದರ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಅರಿವು ಮೂಡಿಸುತ್ತಿಲ್ಲ. ನಮಗ್ಯಾಕೆ ಎಂದು ಎಲ್ಲರೂ ಸುಮ್ಮನಿದ್ದುಬಿಟ್ಟಿದ್ದೇವೆ. ಇನ್ನೂ ಗಮನಹರಿಸದಿದ್ದರೆ ಬಹಳ ಕಷ್ಟವಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.

ನಿಜಜೀವನದಲ್ಲಿ ರೈತನಾಗಿರುವ ಕಿಶೋರ್, ಇದೇ ಮೊದಲ ಬಾರಿಗೆ ಈ ಚಿತ್ರದಲ್ಲೂ ರೈತನಾಗಿ ಕಾಣಿಸಿಕೊಂಡಿದ್ದು, ಹನುಮ ಎಂಬ ರೈತನ ಪಾತ್ರ ಮಾಡುತ್ತಿದ್ದಾರೆ. ‘ದೆವ್ವವನ್ನು ಬಳಸಿಕೊಂಡು ಒಂದು ಸಮಸ್ಯೆಯನ್ನು ಹೇಳುವ ಪ್ರಯತ್ನ ಇದು. ಸಾವಯವ ಕೃಷಿಯ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದೇವೆ. ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಗಟ್ಟಿ ಪ್ರಯತ್ನ ಕಾಣುತ್ತಿಲ್ಲ’ ಎಂದರು.

ಈ ಚಿತ್ರವನ್ನು ನಿರ್ಮಿಸುವ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲಿ ಪ್ರಸಾದ್‍ ವಸಿಷ್ಠ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ನಚಿಕೇತ ಎಂಬ ಜಮೀನ್ದಾರಿ ಕುಟುಂಬದ ಯುವಕನಾಗಿ ನಟಿಸಿದ್ದೇನೆ. ಮುಗ್ಧ ಯುವಕನ ಪಾತ್ರ ನನ್ನದು. ತುಂಬಾ ಭಯಸ್ತನಾದ ಅವನು, ಮುಂದೆ ಹೀಗಾಗಬಾರದು ಎಂದು ಎಚ್ಚೆತ್ತುಕೊಳ್ಳುತ್ತಾನೆ. ನಿಶ್ಯಕ್ತನಾದವನು ಶಕ್ತ್ಯನಾಗುವ ಕಥೆ ಇದು. ಮನರಂಜನೆಯ ಜೊತೆಗೆ ಸಂದೇಶವೂ ಇದೆ’ ಎಂದರು.

‘ಕಬಂಧ’ ಚಿತ್ರದಲ್ಲಿ ಪ್ರಸಾದ್ ವಸಿಷ್ಠ ಮತ್ತು ಪ್ರಿಯಾಂಕಾ ಮಳಲಿ ಜೊತೆಗೆ ಕಿಶೋರ್‍, ಅವಿನಾಶ್‍, ಯೋಗರಾಜ್‍ ಭಟ್‍, ಪ್ರಶಾಂತ್‍ ಸಿದ್ದಿ, ಛಾಯಾಶ್ರೀ, ಶ್ರುತಿ ನಾಯಕ್‍ ಮುಂತಾದವರು ನಟಿಸಿದ್ದಾರೆ. ರಘೋತ್ತಮ ಎನ್‍.ಎಸ್ ಮತ್ತು ಶ್ರೇಯಸ್‍ ಬಿ. ರಾವ್‍ ಅವರ ಸಂಗೀತ, ವಿಷ್ಣುಪ್ರಸಾದ್‍ ಛಾಯಾಗ್ರಹಣ, ಸತ್ಯಜಿತ್‍ ಸಿದ್ಧಕಟ್ಟಿ ಅವರ ಸಂಕಲನವಿದೆ.

ನಶಿಸುತ್ತಿರುವ ಸಂಸ್ಕೃತಿ ಉಳಿಸಿಕೊಳ್ಳಲು ಸಿನಿಮಾ ಮೂಲಕ ಹೋರಾಟ

Discover more from KannadaScreens

Subscribe now to keep reading and get access to the full archive.

Continue reading