ಚಲನಚಿತ್ರವನ್ನು ಒಬ್ಬೊಬ್ಬರು ಒಂದೊಂದು ರೀತಿ ಬಳಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ತಂಡವು ನಶಿಸುತ್ತಿರುವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಸಿನಿಮಾ ಮೂಲಕ ಹೋರಾಟ ಮಾಡುತ್ತಿದೆ. ಅದೇ ‘ಗುಂಮ್ಟಿ’.
ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯೊಂದು ತೆರೆಯ ಮೇಲೆ ಅನಾವರಣವಾಗಲಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ‘ಗುಂಮ್ಟಿ’ ಚಿತ್ರದ ಮೂಲಕ ಸೆರೆಹಿಡಿಯುವ ಪ್ರಯತ್ನವನ್ನು ಮಾಡಲಾಗಿದೆ. ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಚಿತ್ರಗಳನ್ನು ನಿರ್ದೇಶಿಸಿರುವ ಸಂದೇಶದ ಶೆಟ್ಟಿ ಆಜ್ರಿ, ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ‘ಗುಂಮ್ಟಿ’ ಚಿತ್ರದ ‘ಹಾಡುವ ಹಕ್ಕಿ’ ಎಂಬ ಲಿರಿಕಲ್ ಹಾಡನ್ನು ಬಿಡಗುಡೆ ಮಾಡಲಾಯಿತು. ಡುಂಡಿ ಮೋಹನ್ ಅವರು ಈ ಹಾಡನ್ನು ಬರೆಯುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಮೆಹಬೂಬ್ ಸಾಬ್ ಈ ಹಾಡನ್ನು ಹಾಡಿದ್ದಾರೆ. ಈ ಸಂದರ್ಭದಲ್ಲಿ ಕುಡುಬಿ ಜನಾಂಗದ ಕಲಾವಿದರು ಪ್ರದರ್ಶನ ನೀಡಿದರು.
‘ಗುಂಮ್ಟಿ’ ಚಿತ್ರದ ಕುರಿತು ಮಾತನಾಡುವ ನಾಯಕ-ನಿರ್ದೇಶಕ ಸಂದೇಶ್ ಶೆಟ್ಟಿ, ‘ಹಲವು ಕಡೆ ಹರಿದು ಹಂಚಿಹೋಗಿರುವ ಗುಂಮ್ಟಿ ಜನಾಂಗವನ್ನು ಒಗ್ಗೋಡಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ನಾನು ಈ ಚಿತ್ರದಲ್ಲಿ ಈ ಜನಾಂಗದ ಕಾಶಿ ಎಂಬ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಅವನು ತನ್ನ ನಶಿಸಿಹೋಗುತ್ತಿರುವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಏನೆಲ್ಲಾ ಹೋರಾಟ ನಡೆಸುತ್ತಾನೆ, ಎಲ್ಲಿಗೆಲ್ಲಾ ಹೋಗುತ್ತಾನೆ ಎನ್ನುವುದು ಕಥೆ. ಇದೊಂದು ಚಿತ್ರ ಎನ್ನುವುದಕ್ಕಿಂತ ಇದೊಂದು ಭಾವನಾತ್ಮಕ ಪಯಣ ಎನ್ನಬಹುದು’ ಎಂದರು.

ನಟನೆ-ನಿರ್ದೇಶನ ಎರಡೂ ಮಾಡಿದ್ದರ ಕುರಿತು ಮಾತನಾಡಿದ ಸಂದೇಶ್, ‘ನಿರ್ದೇಶನ ಮತ್ತು ನಟನೆ ಎರಡೂ ಮಾಡುವುದು ಕಷ್ಟ. ಈ ಚಿತ್ರಕ್ಕೆ ಸೂಕ್ತ ನಿರ್ದೇಶಕ ಸಿಗಲಿಲ್ಲ. ಒಳ್ಳೆಯ ನಿರ್ದೇಶಕರು ಸಿಕ್ಕರೆ ಬರೀ ನಟನೆ ಮಾಡುತ್ತಿದ್ದೆ. ನನಗೆ ನಟನೆ ಮಾಡುವುದಕ್ಕೆ ಬರುವುದಿಲ್ಲ ಎಂದು ಚಿತ್ರತಂಡದವರು ಹೇಳಿದರು. ನಾನೊಬ್ಬ ನಟ ಎಂದು ತೋರಿಸೋಕೆ, ಈ ಚಿತ್ರ ಮಾಡಿದೆ’ ಎಂದರು.
ಈಗಾಗಲೇ ಈ ಚಿತ್ರಕ್ಕೆ ಸದ್ದಿಲ್ಲದೆ ಉಡುಪಿ, ಕುಂದಾಪುರ, ಶಿರಸಿ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ.
ತಸ್ಮೈ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಚಿತ್ರವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಸಂದೇಶ್ ಶೆಟ್ಟಿಗೆ ನಾಯಕಿಯಾಗಿ ವೈಷ್ಣವಿ ನಾಡಿಗ್ ಅಭಿನಯಿಸುತ್ತಿದ್ದು, ಮಿಕ್ಕಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮುಂತಾದವರು ಅಭಿನಯಿಸಿದ್ದಾರೆ.
‘ಗುಂಮ್ಟಿ’ ಚಿತ್ರಕ್ಕೆ ಡುಂಡಿ ಮೋಹನ್ ಸಂಗೀತ ಸಂಯೋಜಿಸಿದ್ದು, ಅನೀಶ್ ಡಿಸೋಜಾ ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಸಂಕಲನವಿದೆ.


