ರವಿಚಂದ್ರನ್ ಅಭಿನಯದ ‘ದಿ ಜಡ್ಜ್ಮೆಂಟ್’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಮೇ 24ರಂದು ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಬುಧವಾರ ರಾತ್ರಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕ ಉದಯ್ ಕೆ. ಮಹ್ತಾ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಹಲವು ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.
ಚಿತ್ರದ ಕುರಿತು ಮಾತನಾಡುವ ನಟ ರವಿಚಂದ್ರನ್, ‘ಜಡ್ಜ್ಮೆಂಟ್ ಅನ್ನೋದು ನಮ್ಮ ಜೀವನದ ಬಹಳ ಮುಖ್ಯವಾದ ಪದ. ಯಾವುದೇ ವಿಷಯವಾಗಲೀ, ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಪ್ರೀತಿ, ಸಿನಿಮಾ … ಹೀಗೆ ಯಾವುದೇ ವಿಷಯವಾಗಿರಬಹುದು, ಜಡ್ಜ್ಮೆಂಟ್ ಎನ್ನುವ ಪದದ ಮೇಲೆ ನಮ್ಮ ಜೀವನ ನಿಂತಿರುತ್ತದೆ. ಇವೆಲ್ಲವೂ ಶುರುವಾಗಿದ್ದು ಶಿವ ಗೌಡ ಅವರಿಂದ. ಅವರೇ ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರನ್ನು ಕರೆದುಕೊಂಡು ಬಂದಿದ್ದು. ಅಲ್ಲಿಂದ ಶುರುವಾಯ್ತು. ಅವರು ದಿ ಗಿಲ್ಟ್ ಎಂಬ ಸಿನಿಮಾ ಮಾಡಬೇಕು ಅಂತ ಬಂದರು. ವಾಪಸ್ಸು ಹೋಗಿ ‘ದಿ ಜಡ್ಜ್ಮೆಂಟ್’ ಎಂಬ ಹೆಸರಿನೊಂದಿಗೆ ಬಂದರು. ಅಲ್ಲಿಂದ ಶುರುವಾಯ್ತು ಈ ಚಿತ್ರ. ಜಡ್ಜ್ಮೆಂಟ್ ನಿಮ್ದೂ ಅಲ್ಲ, ನಮ್ದೂ ಅಲ್ಲ, ಆ ಜನ ಕೊಡುವ ತೀರ್ಪೇ ಅಂತಿಮ’ ಎಂದರು.
ಬಹಳಷ್ಟು ಜನರ ಜೊತೆಗೆ ನಟಿಸಿದ್ದು ಖುಷಿಯಾಯಿತು ಎಂದ ಅವರು, ‘ಎಲ್ಲರೂ ನನ್ನ ಜೊತೆಗೆ ನಟಿಸಿದ್ದು ಬಹಳ ಖುಷಿಯಾಯ್ತು ಎಂದು ಹೇಳಿಕೊಂಡರು. ನನಗೂ ಎಲ್ಲರ ಜೊತೆಗೆ ಕೆಲಸ ಮಾಡಿದ್ದು ಖುಷಿ ಆಯ್ತು. ರವಿಚಂದ್ರನ್ ಅಂದರೆ ಹಂಗೆ, ಹಿಂಗೆ ಎಂದು ಜನರಲ್ಲಿ ಭಯ ಹುಟ್ಟಿಸಿಬಿಟ್ಟಿದ್ದರು. ಅದನ್ನೆಲ್ಲಾ ಕೇಳಿ ನನ್ನ ಬಗ್ಗೆ ಎಲ್ಲರೂ ಒಂದು ಕಲ್ಪನೆ ಕಟ್ಟಿಕೊಂಡಿದ್ದರು. ನಾನು ಸಿನಿಮಾದಲ್ಲಿ ಮೊದಲ ದಿನದಿಂದ ಇವತ್ತಿನವರೆಗೂ ಕ್ಯಾಮೆರಾ ಮುಂದೆ ಬಂದು ನಿಂತರೆ, ಅದರಷ್ಟು ಬಿಟ್ಟರೆ ಬೇರೆ ಯಾರನ್ನೂ ಪ್ರೀತಿಸುವುದಿಲ್ಲ ನಾನು. ಅಲ್ಲಿ ಯಾರು ಬಂದರೂ ಹಾಗೆ ಇರುತ್ತೀನಿ ನಾನು’ ಎಂದರು.
‘ದಿ ಜಡ್ಜ್ಮೆಂಟ್’ ಕುರಿತು ಮಾತನಾಡಿದ ನಿರ್ದೇಶಕ ಗುರುರಾಜ್ ಕುಲಕರ್ಣಿ, ‘ಮನುಷ್ಯನ ಪ್ರಾಯಶ್ಚಿತ್ತದ ಕಥೆ ಇದು. ನಾವು ತಿಳಿದೋ, ತಿಳಿಯದೆಯೋ ತಪ್ಪು ಮಾಡಿರುತ್ತೇವೆ. ಆ ತಪ್ಪನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಅದರನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಈ ಚಿತ್ರದಲ್ಲಿ ತಪ್ಪು ಮಾಡಿರುವ ವ್ಯಕ್ತಿ ಆ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಹೊರಟಾಗ, ಅವನಿಗಾಗುವ ಅಡೆತಡೆಗಳ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದೇವೆ. ಇದು ರವಿಚಂದ್ರನ್ ಅವರಿಗೆಂದೇ ಬರೆದ ಕಥೆ. ಎಲ್ಲರಂತ ನಾನು ಸಹ ಅವರ ಸ್ಟೈಲ್ ಮೆಚ್ಚಿಕೊಂಡವನು. ಅವರ ಮಾತಾಡುವ ಶೈಲಿ, ಸ್ಟೈಲ್ ಸಶಕ್ತವಾಗಿ ಬಳಸಿಕೊಳ್ಳುವ ಒಂದು ಕಥೆ ಬರೆದಿದ್ದೆ. ಇದು ನನ್ನ ಪ್ರಕಾರ, ಒಂದು ಅತ್ಯುತ್ತಮ ಸಿನಿಮಾ. ಚಿತ್ರ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಜಿ9 ಕಮ್ಯುನಿಕೇಶನ್ ಮೀಡಿಯಾ ಆ್ಯಂಡ್ ಎಂಟರ್‍ಟೈನ್‍ಮೆಂಟ್‍ನಡಿ ಶರದ್ ನಾಡಗೌಡ, ರಾಮು ರಾಯಚೂರು, ವಿಶ್ವನಾಥ್ ಗುಪ್ತ, ರಾಜಶೇಖರ ಪಾಟೀಲ್ ಮತ್ತು ಗುರುರಾಜ್ ಕುಲಕರ್ಣಿ ನಿರ್ಮಿಸಿದ್ದಾರೆ. ಗುರುರಾಜ್ ಕುಲಕರ್ಣಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ದಿ ಜಡ್ಜ್ಮೆಂಟ್’ ಚಿತ್ರದಲ್ಲಿ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಅವರ ಸಂಕಲನ ಮತ್ತು ಅನೂಪ್ ಸೀಳಿನ್ ಸಂಗೀತವಿದೆ.


