200 ಕೋಟಿ ಕ್ಲಬ್‍ಗೆ ಸೇರಿದ ‘ಮಂಜುಮ್ಮೆಲ್‍ ಬಾಯ್ಸ್’ …

by | Mar 21, 2024 | ಪ್ಯಾನ್ ಇಂಡಿಯಾ, ವೀಡಿಯೋ, ಸಿನಿ ಸುದ್ದಿ | 0 comments

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಹವಾ ಎಬ್ಬಿಸಿದ ಚಿತ್ರವೆಂದರೆ ಅದು ‘ಮಂಜುಮ್ಮೆಲ್‍ ಬಾಯ್ಸ್’. 2006ರಲ್ಲಿ ಕೇರಳದ ಒಂದಿಷ್ಟು ಹುಡುಗರು ತಮಿಳುನಾಡಿನ ಕೊಡೈಕೆನಾಲ್‍ಗೆ ಹೋದಾಗ, ಅಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಸಾರುತ್ತದೆ. ಚಿದಂಬರಂ ನಿರ್ದೇಶನದ ಈ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವುದಷ್ಟೇ ಅಲ್ಲ, ಈ ಚಿತ್ರವು ಮಲಯಾಳಂ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ಬರೆಯುವುದಕ್ಕೆ ಸಜ್ಜಾಗಿದೆ.

ಕಳೆದ ಫೆಬ್ರವರಿ 22ರಂದು ಬಿಡಗುಡೆಯಾದ ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರ ಸದ್ಯದಲ್ಲೇ 200 ಕೋಟಿ ರೂ ಕ್ಲಬ್‍ ಸೇರುವುದಕ್ಕೆ ಸಜ್ಜಾಗಿದೆ. ಹಾಗೆ 200 ಕೋಟಿ ಕ್ಲಬ್‍ ಸೇರಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗುತ್ತಿದೆ. ಈ ಚಿತ್ರವು ಕೇರಳದಲ್ಲೀ 60 ಕೋಟಿ ರೂ. ಗಳಿಸಿದ್ದು, ಹೊರದೇಶಗಳಲ್ಲಿ 60 ಕೋಟಿ ರೂ. ಸಂಪಾದಿಸಿದೆ. ತಮಿಳುನಾಡಿನಲ್ಲೂ 50 ಕೋಟಿ ರೂ. ಗಳಿಕೆ ಮಾಡಿದೆ. ವಿಶೇಷವೆಂದರೆ, ತಮಿಳುನಾಡಿನಲ್ಲಿ 50 ಕೋಟಿ ರೂ. ಗಳಿಸಿದ ಮೊದಲ ಪರಭಾಷಾ ಚಿತ್ರ ಎಂಬ ಹೆಗ್ಗಳಿಕೆಗೆ ‘ಮಂಜುಮ್ಮೆಲ್‍ ಬಾಯ್ಸ್’ ಪಾತ್ರವಾಗಿದೆ. ಕರ್ನಾಟಕದಲ್ಲೂ ಈ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿದ್ದು 11 ಕೋಟಿ ರೂ ಬಾಚಿಕೊಂಡಿದೆಯಂತೆ.

ಒಟ್ಟಾರೆ, ‘ಮಂಜುಮ್ಮೆಲ್‍ ಬಾಯ್ಸ್’ ಚಿತ್ರವು 190 ಕೋಟಿಗೂ ಹೆಚ್ಚು ಕಲೆಕ್ಷನ್‍ ಮಾಡಿದ್ದು, ಸದ್ಯದಲ್ಲೇ 200 ಕೋಟಿ ಕ್ಲಬ್‍ ಸೇರಿದೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಮಲಯಾಳಂನಲ್ಲಿ ಅತೀ ಹೆಚ್ಚು ಕಲೆಕ್ಷನ್‍ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ‘ಜೂಡ್‍ ಆಂಟ್ಯೋನಿ’ ಮಾಡಿತ್ತು. ಬರೀ ‘ಜೂಡ್‍ ಆಂಟ್ಯೋನಿ’ ಅಷ್ಟೇ ಅಲ್ಲ, ಮಲಯಾಳಂನಲ್ಲಿ ಇದುವರೆಗೂ ಅತೀ ಹೆಚ್ಚು ಕಲೆಕ್ಷನ್‍ ಮಾಡಿರುವ ‘ಪುಲಿಮುರುಗನ್’, ‘ಲೂಸಿಫರ್‍’ ಮತ್ತು ‘ಪ್ರೇಮಲು’ ಚಿತ್ರಗಳನ್ನು ಸಹ ಹಿಂದಿಕ್ಕಿ, ‘ಮಂಜುಮ್ಮೆಲ್‍ ಬಾಯ್ಸ್’ ಅತೀ ಹೆಚ್ಚು ಕಲೆಕ್ಷನ್‍ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರ ಬಿಡುಗಡೆಯಾಗಿ ಇನ್ನೂ ಒಂದು ತಿಂಗಳು ಸಹ ಆಗಿಲ್ಲ. ಆಗಲೇ ‘ಮಂಜುಮ್ಮೆಲ್‍ ಬಾಯ್ಸ್’ ಚಿತ್ರವು ಮಲಯಾಳಂ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಒಟ್ಟಾರೆ, ಚಿತ್ರ ಇನ್ನೂ ಏನೇನು ಸಾಧನೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ಯುವ’, ತಂದೆ-ಮಗನ ಸಂಘರ್ಷದ ಕಥೆ: ಸಂತೋಷ್‍

Discover more from KannadaScreens

Subscribe now to keep reading and get access to the full archive.

Continue reading