‘ಕೂಲ್ ಬ್ರದರ್’ ಅಂತಿದ್ದಾರೆ ಶ್ರೇಯಸ್‍; ‘ದಿಲ್‍ದಾರ್’ ಹಾಡು ಬಿಡುಗಡೆ

ಚಂದನವನ, ಸಿನಿ ಸುದ್ದಿ

ಶ್ರೇಯಸ್‍ ಮಂಜು ಅಭಿನಯದ ‘ದಿಲ್‍ದಾರ್‍’ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಒಂದು ವರ್ಷವೇ ಆಗಿತ್ತು, ಶ್ರೇಯಸ್‍ ಅಭಿನಯದ ಚಿತ್ರವೊಂದು ಬಿಡುಗಡೆ ಆಗಿ. ‘ಮಾರುತ’ ನಂತರ ಅವರು ‘ದಿಲ್‍ದಾರ್’ ಆಗಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದೆ.

‘ದಿಲ್‍ದಾರ್‍’ ಚಿತ್ರದ ‘ಕೂಲ್‍ ಬ್ರದರ್‍ …’ ಎಂಬ ಹಾಡನ್ನು ಇತ್ತೀಚೆಗೆ ಶ್ರೀಮುರಳಿ ಬಿಡುಗಡೆ ಮಾಡಿದರು. ಅರ್ಜುನ್‍ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡನ್ನು ಚಂದನ್‍ ಶೆಟ್ಟಿ ಬಿಡುಗಡೆ ಹಾಡಿದ್ದಾರೆ. ಇನ್ನು, ‘ಬಹದ್ದೂರ್‍’ ಚೇತನ್‍ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಸಮಾರಂಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ನಿರ್ಮಾಪಕರಾದ ಕೆ. ಮಂಜು, ರಮೇಶ್‍ ಯಾದವ್‍ ಮುಂತಾದವರಿದ್ದರು.

ಏನ್ಸಿಯಂಟ್ ಮೂವೀಸ್ ಬ್ಯಾನರ್ ಅಡಿ ಆರ್. ಸಂತೋಷ್ ಕುಮಾರ್ ನಿರ್ಮಿಸಿರುವ ‘ದಿಲ್‍ದಾರ್‍’ ಚಿತ್ರಕ್ಕೆ ಮಧು ಗೌಡ ಗಂಗೂರ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರೆ. ಶ್ರೇಯಸ್‍ಗೆ ನಾಯಕಿಯಾಗಿ ಕೀರ್ತಿ ಕೃಷ್ಣ ನಟಿಸಿದ್ದಾರೆ. ಶರಣ್ ಮತ್ತು ಶೃತಿ ಅವರ ಸಹೋದರಿಯ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಶ್ರೇಯಸ್‍ಗೆ ಒಳ್ಳೆಯ ಭವಿಷ್ಯವಿದೆ ಎಂದ ಶ್ರೀಮುರಳಿ, ‘ನನಗೆ ಈ ಹಾಡಿನಲ್ಲಿ ನಟಿಸಲು ಕೇಳಿದರು. ನನಗೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಶ್ರೇಯಸ್ ತುಂಬಾ ಚೆನ್ನಾಗಿ ಸ್ಟೆಪ್ಸ್ ಹಾಕಿದ್ದಾನೆ’ ಎಂದರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ, ಚಂದನ್ ಈ ಹಾಡನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರೆ, ಚಂದನ್ ಮಾತನಾಡಿ, ‘ಶ್ರೇಯಸ್ ಮೊದಲ ಚಿತ್ರದಿಂದಲೂ ನಾನು ಹಾಡಿದ್ದೇನೆ. ಹಾಡು ಚೆನ್ನಾಗಿ ಬಂದಿದೆ’ ಎಂದರು.

ನಾಯಕ ಶ್ರೇಯಸ್ ಮಾತನಾಡಿ, ‘ಎರಡು ಗಂಟೆ ಕೂತು ಎಂಜಾಯ್ ಮಾಡುವಂತಹ ಸಿನಿಮಾ ಇದು. ಇದರಲ್ಲಿ ಯಾವುದೇ ಮೆಸೇಜ್‍ ಹೇಳಿಲ್ಲ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈ ಹಾಡಿನಿಂದ ಪ್ರಚಾರ ಶುರು ಮಾಡಿದ್ದೇವೆ. ಈಗಿನ ಕಾಲದ ಹುಡುಗ, ಹುಡುಗಿ ಏನು ಮಾಡ್ತಾರೆ ಅದನ್ನೇ ಸಿನಿಮಾದಲ್ಲಿ ತೋರಿಸಿದ್ದೇವೆ. ಕೀರ್ತಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ನಿರ್ಮಾಪಕ ಸಂತೋಷ್ ಅವರು ನನಗೋಸ್ಕರ ಈ ಸಿನಿಮಾ ಮಾಡಿದ್ದಾರೆ’ ಎಂದು ಹೇಳಿದರು.

ನಿರ್ದೇಶಕ ಮಧುಗೌಡ ಮಾತನಾಡಿ, ‘ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ನಾಯಕ ಯಾವುದಕ್ಕೂ ಕೇರ್ ಮಾಡದಂಥ ಹುಡುಗ. ಸಂಬಂಧಗಳಿಗೆ ಬೆಲೆ ಕೊಡದಿದ್ದರೆ ಏನಾಗುತ್ತದೆ ಅಂತ ತೋರಿಸಿದ್ದೇವೆ. ಶೇ. 80ರಷ್ಟು ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡಿದ್ದೇವೆ. ಮಿಕ್ಕಂತೆ ಬೆಂಗಳೂರು, ಸಕಲೇಶಪುರ, ಮರವಂತೆಯಲ್ಲಿ ಚಿತ್ರೀಕರಿಸಿದ್ದೇವೆ’ ಎಂದರು.

‘ದಿಲ್‍ದಾರ್‍’ ಚಿತ್ರದಲ್ಲಿ ಶ್ರೇಯಸ್‍ ಮತ್ತು ಕೀರ್ತಿ ಜೊತೆಗೆ ‘ಭಜರಂಗಿ’ ಲೋಕಿ, ಸಾಧು ಕೋಕಿಲ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದವರು ನಟಿಸಿದ್ದಾರೆ.

‘ರೊಲೆಕ್ಸ್’ ಈಗ ‘ರಿಲ್ಯಾಕ್ಸ್’ ಆಯ್ತು; ಕೋಮಲ್‍ ಚಿತ್ರದ ಹೆಸರು ಬದಲು

Discover more from KannadaScreens

Subscribe now to keep reading and get access to the full archive.

Continue reading