ಈ ಹಿಂದೆ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಯುವಾನ್ ಪ್ರತಾಪ್, ಇದೀಗ ಸದ್ದಿಲ್ಲದೆ ಒಂದು ಚಿತ್ರದ ಹೀರೋ ಆಗಿದ್ದಾರೆ. ಅವರೀಗ ‘ಕಲುಷ’ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ.
ಎಸ್.ಪಿ.ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರತಾಪ್ ಆರ್, ನರಹರಿ ನಿರ್ಮಿಸಿರುವ, ಯುವಾನ್ ಪ್ರತಾಪ್ ಮತ್ತು ಐಶ್ವರ್ಯ ಮುತ್ತುರಾಜ್ ನಾಯಕ – ನಾಯಕಿಯಾಗಿ ನಟಿಸಿರುವ ‘ಕಲುಷ’ ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ‘ಜಾಲಿ ಡೇಸ್’ ಖ್ಯಾತಿಯ ನಟಿ ಐಶ್ವರ್ಯ ನಾಗ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ದೇವ್ ಗ್ರೂಪ್ಸ್ ಹಾಗೂ ಡಿ ಮ್ಯೂಸಿಕ್ ಮುಖ್ಯಸ್ಥ ದೇವರಾಜ್, ಉದ್ಯಮಿ ಸಚಿನ್ ಗೌಡ ಮುಂತಾದರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಕಲುಷ’ ಚಿತ್ರದ ಕುರಿತು ಮಾತನಾಡುವ ಯುವಾನ್, ‘ನಾನು ಮೂಲತಃ ಸಾಫ್ಟ್‌ವೇರ್ ಉದ್ಯೋಗಿ. ಜೊತೆಗೆ 2013ರಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿದೆ. ‘ರಾಬರ್ಟ್’, ‘ಗಾಳ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ನಾನೇ ಬರೆದಿದ್ದು, ನಿರ್ಮಾಣವನ್ನೂ ಮಾಡಿದ್ದೇನೆ. ನರಹರಿ ಅವರು ನಿರ್ಮಾಣಕ್ಕೆ ಬೆಂಬಲ ನೀಡಿದ್ದಾರೆ. ಷಣ್ಮುಖ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಇಷ್ಟಕ್ಕೂ ‘ಕಲುಷ’ ಎಂದರೆ ಏನು? ಕೋಪ, ಆಕ್ರೋಶ ಎಂಬ ಅರ್ಥ ಬರುತ್ತದೆ ಎನ್ನುತ್ತಾರೆ ಯುವಾನನ್. ಇದೊಂದು ಮೆಡಿಕಲ್ ಮಾಫಿಯಾ ಸುತ್ತ ಹೆಣೆದಿರುವ ಕಥೆಯಂತೆ. ‘ಯಾರೂ ಇಲ್ಲದ ಅನೇಕರು ಇದಕ್ಕೆ ಇದ್ದ ಹಾಗೆ ನಾಪತ್ತೆಯಾಗುತ್ತಾರೆ. ನಾಪತ್ತೆಯಾದವರು ಏನಾಗುತ್ತಾರೆ? ಎಂಬುದನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು, ದಾವಣಗೆರೆ, ಹರಪನಹಳ್ಳಿ ಮುಂತದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುತ್ತೇವೆ’ ಎಂದರು ಯುವಾನ್ ಪ್ರತಾಪ್.
ನಾಯಕಿ ಐಶ್ವರ್ಯ ಈಗಾಗಲೇ ಐದು ಚಿತ್ರಗಳಲ್ಲಿ ಅಭಿನಯಿಸಿದ್ದಾರಂತೆ. ಆದರೆ, ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದು. ‘ಮರ್ಡರ್ ಮಾಫಿಯಾದ ಕಥಾಹಂದರ ಹೊಂದಿರುವ ಚಿತ್ರವಾದರೂ, ಪ್ರೇಮಕಥೆಯೂ ಇದೆ. ನಾನು ಮಧ್ಯಮವರ್ಗದ ಕುಟುಂಬದ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಐಶ್ವರ್ಯ ಮುತ್ತುರಾಜ್ ಹೇಳಿದರು.
‘ಕಲುಷ’ ಚಿತ್ರದಲ್ಲಿ ಯುವಾನ್ ಮತ್ತು ಐಶ್ವರ್ಯ ಮುತ್ತುರಾಜ್ ಜೊತೆಗೆ ಬಲ ರಾಜ್ ವಾಡಿ, ಕೆ.ಎಸ್ ಶ್ರೀಧರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನೋದ್ ಹಿರೇಮಠ ಹಾಗೂ ವಾಸೀಂ ಅಕ್ರಮ್ ಸಂಗೀತ ಸಂಯೋಜಿಸಿದ್ದಾರೆ.


