ಎರಡು ವರ್ಷಗಳೇ ಆಗಿವೆ ಗಣೇಶ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಅವರು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯಾವೊಂದು ಚಿತ್ರ ಸಹ ಇದುವರೆಗೂ ಬಿಡುಗಡೆಯಾಗಿಲ್ಲ. ಸ್ಟಾರ್ ನಟರ ಚಿತ್ರಗಳೇ ಇಲ್ಲ ಎನ್ನುವ ಪರಿಸ್ಥತಿ ಇರುವಾಗ, ಜನ ಚಿತ್ರಮಂದಿರದಿಂದ ದೂರಾಗುತ್ತಿರುವ ಸಮಯದಲ್ಲಿ ಯಾಕೆ ಗಣೇಶ್ ಅಭಿನಯದ ಒಂದು ಚಿತ್ರವಾದರೂ ಬಿಡುಗಡೆ ಆಗುತ್ತಿಲ್ಲ. ಈ ಪ್ರಶ್ನೆಯನ್ನು ಸಿಕ್ಕಿದವರೆಲ್ಲಾ ಕೇಳುತ್ತಿದ್ದಾರಂತೆ. ಎರಡು ವರ್ಷಗಳಿಂದ ಎಲ್ಲಿದ್ದೀರಿ? ಏನಾಗುತ್ತಿದೆ? ಎನ್ನುತ್ತಿದ್ದಾರಂತೆ. ಹೌದು, ಯಾಕೆ ಗಣೇಶ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆ ಆಗುತ್ತಿಲ್ಲ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ?
‘ಪ್ಲಾನಿಂಗ್ ನಡೆಯುತ್ತಿದೆ. ‘ಬೃಂದಾ ವಿಹಾರಿ’ ಮೊದಲು ಬರುವ ಸಾಧ್ಯತೆ ಇದೆ. ‘ಪಿನಾಕ’ ಸಹ ಮುಗಿದಿದೆ. ಈ ವರ್ಷ ಅವೆರಡೂ ಚಿತ್ರಗಳು ಬಿಡುಗಡೆಯಾಗಲಿವೆ’ ಎನ್ನುತ್ತಾರೆ ಗಣೇಶ್.
ಈ ಕುರಿತು ಮಾತನಾಡುವ ಅವರು, ‘‘ಪಿನಾಕ’ ಮತ್ತು ‘ರಾಮ್’ ಚಿತ್ರಗಳು ದೊಡ್ಡ ಸ್ಕೇಲ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಗಳು. ಆ ಚಿತ್ರಗಳಿಗೆ ಸಾಕಷ್ಟು ಸಮಯವಾಗಿದೆ. ಹಾಗಂತ ಬೇರೆ ಚಿತ್ರಗಳನ್ನು ಮಾಡಬಾರದು ಎಂದೇನಿಲ್ಲ. ಚಿತ್ರರಂಗ ಉಳಿಯಬೇಕು ಎಂದರೆ ಹೆಚ್ಚು ಸಿನಿಮಾಗಳು ಬರಬೇಕು. ಈ ಸಮಯದಲ್ಲಿ ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಸದ್ಯ ಕೈಯಲ್ಲಿ ನಾಲ್ಕು ಚಿತ್ರಗಳಿರುವುದರಿಂದ ಮೊದಲು ಅದು ಬಿಡುಗಡೆಯಾದ ಮೇಲೆ, ಆ ನಂತರ ಹೊಸ ಚಿತ್ರಗಳನ್ನು ಶುರು ಮಾಡಲಿದ್ದೇನೆ’ ಎನ್ನುತ್ತಾರೆ.
ಈ ನಾಲ್ಕೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಎನ್ನುವುದು ಗಣೇಶ್ ಅಭಿಪ್ರಾಯ. ‘’ಪಿನಾಕ’ ಬೇರೆ ತರಹದ ಜಾನರ್‍ನ ಚಿತ್ರ. ಅದೊಂದು ಫ್ಯಾಂಟಸಿ ಚಿತ್ರ. ‘ಬೃಂದಾ ವಿಹಾರಿ’ ಮಾನವೀಯ ಸಂಬಂಧಗಳ ಸುತ್ತ ಸಾಗುವ ಸಿನಿಮಾ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಒಂದು ಜರ್ನಿ ಚಿತ್ರ. ‘ತಮ್ಮ ಸುಖಾಗಮನ ಬಯಸುವ’ ಚಿತ್ರವು ಒಂದು ಫ್ಯಾಮಿಲಿ ಡ್ರಾಮಾ. ಒಂದಕ್ಕಿಂತ ಒಂದು ವಿಭಿನ್ನವಾದ ಸಿನಿಮಾಗಳನ್ನು ಮಾಡುತ್ತಿದ್ದೇನೆ. ನನಗೆ ಗ್ಯಾಪ್ ಆಗಬೇಕು ಅಂತ ಖಂಡಿತಾ ಇಷ್ಟವಿಲ್ಲ. ವರ್ಷಕ್ಕೆ ಎರಡು ಚಿತ್ರಗಳಾದರೂ ಬರಬೇಕು ಎನ್ನುವುದು ನನ್ನ ಆಸೆ. ಆದರೆ, ಕೆಲವೊಮ್ಮೆ ಅಂದುಕೊಂಡಂತೆ ಆಗುವುದಿಲ್ಲ. ದೊಡ್ಡ ಮಟ್ಟದಲ್ಲಿ ಚಿತ್ರ ಮಾಡುವಾಗ, ಇಷ್ಟೇ ಸಮಯದಲ್ಲಿ ಮುಗಿಸಿ, ಬೇಗ ಬಿಡುಗಡೆ ಮಾಡಿ ಎಂದು ಹೇಳುವುದು ಕಷ್ಟ. ನಾವು ಮನವಿ ಮಾಡಿಕೊಳ್ಳಬಹುದು ಅಷ್ಟೇ. ಮಿಕ್ಕಿದ್ದು ಅವರ ವಿವೇಚನೆ ಮತ್ತು ನಿರ್ಧಾರಕ್ಕೆ ಬಿಟ್ಟಿದ್ದು. ಒಬ್ಬ ನಟನಾಗಿ ನಾನು ಏನು ಬೆಸ್ಟ್ ಮಾಡಬಹುದೋ, ಅದನ್ನು ಖಂಡಿತಾ ಮಾಡುತ್ತೇನೆ’ ಎನ್ನುತ್ತಾರೆ.
‘ಬೃಂದಾವಿಹಾರಿ’ ಚಿತ್ರ ಮುಗಿದಿದ್ದರೂ ಬಿಡುಗಡೆಯಾಗುತ್ತಿಲ್ಲ ಯಾಕೆ ಎಂದರೆ? ‘ಚಿತ್ರತಂಡದವರು ಒಂದೊಳ್ಳೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ನನಗೆ ಯಾವುದೇ ದಿನವಾದರೂ ಪರವಾಗಿಲ್ಲ. Every date is good date for me. ನನಗೆ ಯಾವುದೇ ಚಿತ್ರದ ಭಯವಿಲ್ಲ. ಈ ವಾರ ನನ್ನ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ. ಅದು ಅವರ ತೀರ್ಮಾನ. ನಾನು ಅವರಿಗೆ ಹೇಳಬಹುದು. ಆದರೆ, ಯಾವ ದಿನ ಬಂದರೆ ಚಿತ್ರಕ್ಕೆ ಒಳ್ಳೆಯದಾಗುತ್ತದೆ ಎಂಬುದು ಅವರಿಗೆ ಗೊತ್ತಿರುತ್ತದೆ. ನಾಳೆ ಏನಾದರೂ ತಪ್ಪಾದರೆ, ಅವರು ನನ್ನನ್ನು ಕೇಳುತ್ತಾರೆ’ ಎಂಬುದು ಗಣೇಶ್ ವಾದ.
ಪ್ರತಿಯೊಬ್ಬ ಜನಪ್ರಿಯ ನಟರು ವರ್ಷಕ್ಕೆ ಎರಡು ಚಿತ್ರಗಳಾದರೂ ಮಾಡಬೇಕು ಎಂದು ಹೇಳುತ್ತಲೇ ಬಂದಿದ್ದೇನೆ ಎನ್ನುವ ಗಣೇಶ್, ‘ಒಬ್ಬ ನಟನಾಗಿ ಎರಡು ವರ್ಷಗಳಿಂದ ನನ್ನ ಸಿನಿಮಾ ಬಂದಿಲ್ಲ ಎಂಬ ವಿಷಯ ನನಗೇ ಬೇಸರವಾಗುತ್ತಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಎಂಟು ತಿಂಗಳಲ್ಲಿ ನನ್ನ ಇನ್ನೊಂದು ಚಿತ್ರ ಬರಬಹುದು ಅಂತಂದುಕೊಂಡಿದ್ದೆ. ಕಾರಣಾಂತರಗಳಿಂದ ತಡವಾಯ್ತು. ವರ್ಷಕ್ಕೆ ಎರಡು ಸಿನಿಮಾಗಳು ಬರಬೇಕಿತ್ತು. ಆದರೆ, ಚಿತ್ರಗಳು ತಡವಾದ್ದರಿಂದ ಬಿಡುಗಡೆಗೂ ತಡವಾಯ್ತು. ‘ಪಿನಾಕ’ ಚಿತ್ರ ದೊಡ್ಡ ಮಟ್ಟದಲ್ಲಿ ಮಾಡಿದ್ದೇವೆ, ಎಲ್ಲಾ ಚಿತ್ರಗಳನ್ನು ಅದೇ ರೀತಿ ಮಾಡಿ ಎಂದು ನಾನು ಖಂಡಿತಾ ಹೇಳುತ್ತಿಲ್ಲ. ಕಥೆಗೆ ಏನು ಬೇಕೋ, ಆ ಬಜೆಟ್ ಹಾಕಿದರೆ ಸಾಕು’ ಎಂಬುದು ಗಣೇಶ್ ಮಾತು.
‘ಒಬ್ಬ ನಟನ ದೃಷ್ಟಿಕೋನದಲ್ಲಿ ನೋಡಿದರೆ, ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡಿದರೆ, ಹೆಚ್ಚುಹೆಚ್ಚು ಪಾತ್ರಗಳನ್ನು ಮಾಡಬಹುದು. ಹೆಚ್ಚು ಸವಾಲುಗಳನ್ನು ಸ್ವೀಕರಿಸಬಹುದು. ಇಲ್ಲಿ ಬರೀ ನಟನ ದೃಷ್ಟಿಕೋನದಿಂದ ನೋಡದೆ, ಕೆಲವೊಮ್ಮೆ ನಿರ್ಮಾಪಕರ ದೃಷ್ಟಿಕೋನದಿಂದ ಯೋಚಿಸಬೇಕಾಗುತ್ತದೆ. ಹಾಗಾಗಿ, ಕೆಲವೊಮ್ಮೆ ತಡವಾಗುತ್ತದೆ’ ಎನ್ನುತ್ತಾರೆ.


