ಹೊಗಳಿಕೆ, ಬಹುಪರಾಕ್‍ಗಳ ಮಧ್ಯೆ ‘ಮಾರ್ಕ್’ ಟ್ರೇಲರ್ ಬಿಡುಗಡೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಸುದೀಪ್‍ ಅಭಿನಯದ ‘ಮಾರ್ಕ್’ ಚಿತ್ರವು ಡಿ. 25ರಂದು ಬಿಡುಗಡೆ ಆಗುತ್ತಿರುವ ವಿಚಾರ ಗೊತ್ತೇ ಇದೆ. ಚಿತ್ರದ ಕೆಲಸಗಳು ಬಹುತೇಕ ಮುಗಿಯುತ್ತಾ ಬಂದಿದ್ದು, ಅದಕ್ಕೂ ಮೊದಲು ಭಾನುವಾರ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

ಸುದೀಪ್‍ ಚಿತ್ರದ ಸಮಾರಂಭಗಳಂತೆ ಇಲ್ಲೂ ವಿಪರೀತ ಜನರಿದ್ದರು. ಚಿತ್ರತಂಡದವರಲ್ಲದೆ, ಸಿಸಿಎಲ್‍ ತಂಡದವರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ವೇದಿಕೆ ಮೇಲೆ 20ಕ್ಕೂ ಹೆಚ್ಚು ಜನ ಮಾತನಾಡಿದರು. ಬಂದವರೆಲ್ಲಾ ಸುದೀಪ್‍ ಕಾರ್ಯವೈಖರಿ, ಟ್ರೇಲರ್‍ ರೂಪುಗೊಂಡಿರುವ ಬಗ್ಗೆ ಮತ್ತು ಆರು ತಿಂಗಳಲ್ಲಿ ಚಿತ್ರ ಮುಗಿಸಿದ್ದರ ಬಗ್ಗೆ ಹೊಗಳಿದರು. ಕೆಲವೊಮ್ಮೆ ಕಿರಿಕಿರಿ ಎನ್ನುವಷ್ಟು ಹೊಗಳಿಕೆ, ಬಹುಪರಾಕ್‍ಗಳ ಮಧ್ಯೆ ‘ಮಾರ್ಕ್’ ಟ್ರೇಲರ್ ಬಿಡುಗಡೆ ನಡೆಯಿತು.

ಎಲ್ಲರೂ ಹೊಗಳಿ ಸುದೀಪ್‍ ಕೈಗೆ ಮೈಕು ಸೇರುವಷ್ಟರಲ್ಲಿ ಕಾರ್ಯಕ್ರಮ ಶುರುವಾಗಿ ಒಂದೂವರೆ ತಾಸಾಗಿತ್ತು. ಸುದೀಪ್ ಮಾತನಾಡಿ, ‘ಈ ಚಿತ್ರಕ್ಕೆ ಇಬ್ಬರು ಹೀರೋಗಳು. ಒಬ್ಬರು ನಿರ್ದೇಶಕ ವಿಜಯ್ ಕಾರ್ತಿಕೇಯ. ಇನ್ನೊಬ್ಬರು ಛಾಯಾಗ್ರಾಹಕ ಶೇಖರ್‍ ಚಂದ್ರು. ಅವರಿಬ್ಬರೂ ಮಲಗದೆ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನಾನೇನೋ ಈ ಚಿತ್ರವನ್ನು ಡಿ. 25ರಂದು ಬಿಡುಗಡೆ ಮಾಡಬೇಕು ಎಂದು ಆಸೆಪಟ್ಟೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ. ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ಐದು ದಿನ ಶೂಟಿಂಗ್ ನಡೆಸಲಾಗಿದೆ. 80 ಲೋಕೇಷನ್‍ಗಳಲ್ಲಿ, 15-20 ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಾರ್ಕ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾನವ ಕಳ್ಳ ಸಾಗಾಣಿಕೆ  ಕುರಿತಾದ ಈ ಕಥೆಯಲ್ಲಿ ಸುದೀಪ್‍, ಅಜಯ್ ಮಾರ್ಕಂಡೇಯ ಅಲಿಯಾಸ್ ‘ಮಾರ್ಕ್’ ಆಗಿ ನಟಿಸಿದ್ದಾರೆ. ಜೊತೆಗೆ ಯೋಗಿ ಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‍ ಅಡಿ ಸೆಂಧಿಲ್‍ ತ್ಯಾಗರಾಜನ್‍ ಮತ್ತು ಅರುಣ್‍ ತ್ಯಾಗರಾಜನ್‍ ಈ ಚಿತ್ರವನ್ನು ನಿರ್ಮಿಸಿದ್ದು, ನಿರ್ಮಾಣದಲ್ಲಿ ಸುದೀಪ್‍ ಸಹ ಕೈಜೋಡಿಸಿದ್ದಾರೆ.

ಈ ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ಮತ್ತು ಶೇಖರ್‍ ಚಂದ್ರು ಛಾಯಾಗ್ರಹಣವಿದೆ. ಈ ಚಿತ್ರದ ಮೂಲಕ ಸುದೀಪ್ ಪತ್ನಿ ಪ್ರಿಯಾ ಸುದೀಪ್ ವಿತರಣೆಗೆ ಕಾಲಿಟ್ಟಿದ್ದಾರೆ. ಕೆಆರ್ ಜೆ ಜೊತೆಗೂಡಿ ಪ್ರಿಯಾ ಸುದೀಪ್, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ‘ಮಾರ್ಕ್’ ವಿತರಣೆ ಮಾಡಲಿದ್ದಾರೆ.

ಡಿಸೆಂಬರ್ 15ರಂದು ‘45’ ಟ್ರೇಲರ್ ಬಿಡುಗಡೆ; ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ

Discover more from KannadaScreens

Subscribe now to keep reading and get access to the full archive.

Continue reading