ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರವು ಡಿಸೆಂಬರ್ 25ರಂದು ಕ್ರಿಸ್ಮಸ್ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು ‘ಯು/ಎ’ ಪ್ರಮಾಣ ಪತ್ರ ನೀಡಿದೆ.
ಈ ಮಧ್ಯೆ, ಡಿ. 15ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಈ ಬಾರಿ ವಿಭಿನ್ನವಾಗಿ ಟ್ರೇಲರ್ ಬಿಡುಗಡೆ ಮಾಡಲು ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ನವರಸನ್ ಜೊತೆಗೆ ಕೈಜೋಡಿಸಿದ್ದಾರೆ.
’45’ ಚಿತ್ರದ ಟ್ರೇಲರ್ ಬಿಡುಗಡೆ ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಈ ಕುರಿತು ಮಾತನಾಡುವ ಅರ್ಜುನ್ ಜನ್ಯ, ‘ಡಿಸೆಂಬರ್ 15 ರಂದು ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಇರುವ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಚಿತ್ರದ ಮೂವರು ಹೀರೋಗಳು ಸಹ ಇರುತ್ತಾರೆ. ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಹೊಸದೊಂದು ಪ್ರಯೋಗ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕದ ಏಳು ಪ್ರಮುಖ ಜಿಲ್ಲೆಗಳ ಚಿತ್ರಮಂದಿರದಲ್ಲಿ ಕ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುವುದು. ಅಲ್ಲಿರುವ ಜನ ನಮ್ಮ ತಂಡದವರ ಜೊತೆಗೆ ಮಾತನಾಡಬಹುದು’ ಎಂದರು.
ಬೆಂಗಳೂರಲ್ಲದೆ, ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ ಮತ್ತು ಹುಬ್ಬಳ್ಳಿಯ ಒಂದೊಂದು ಚಿತ್ರಮಂದಿರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ಆಯಾ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಉಚಿತ ಪ್ರವೇಶವಿರುತ್ತದೆ. ಏಕಕಾಲಕ್ಕೆ ಏಳು ಊರುಗಳಲ್ಲೂ ಟ್ರೇಲರ್ ಅನಾವರಣವಾಗಲಿದೆ. ಟ್ರೇಲರ್ ವೀಕ್ಷಣೆಯ ನಂತರ ಅಭಿಮಾನಿಗಳನ್ನುದ್ದೇಶಿಸಿ ಚಿತ್ರದ ಮೂವರು ನಾಯಕರು ಮಾತನಾಡಲಿದ್ದಾರೆ.
‘ಇಲ್ಲಿಯವರೆಗೂ ನಮಗೆ ತಿಳಿದ ಹಾಗೆ ಯಾರು ಈ ಪ್ರಯತ್ನ ಮಾಡಿಲ್ಲ. ಇದೇ ಮೊದಲು ಎನ್ನಬಹುದು. ಇಷ್ಟೇ ಅಲ್ಲದೆ ಟ್ರೇಲರ್ ಬಿಡುಗಡೆ ದಿನ ಮತ್ತೊಂದು ವಿಶೇಷತೆ ಕೂಡ ಇರಲಿದೆ. ಅದು ಏನೆಂದು ಎಲ್ಲರಿಗೂ ಆ ದಿನವೇ ತಿಳಿಯುತ್ತದೆ’ ಎಂದರು.
ಇದೊಂದು ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ ಟ್ರೇಲರ್ ಬಿಡುಗಡೆಯ ನಂತರ ಚಿತ್ರತಂಡದವರು ಮತ್ತೊಮ್ಮೆ ಮುಂಬೈ, ಹೈದರಾಬಾದ್, ಚೆನ್ನೈ ಮುಂತಾದ ನಗರಗಳಿಗೆ ಭೇಟಿ ಕೊಟ್ಟು ಚಿತ್ರದ ಬಗ್ಗೆ ಇನ್ನೊಂದಿಷ್ಟು ಪ್ರಚಾರ ಮಾಡಿ ಬರಲಿದ್ದಾರಂತೆ.
ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ‘ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಚಿತ್ರವನ್ನು ನಿರ್ಮಿಸಿರುವ ಹೆಮ್ಮೆ ಇದೆ. ಅದನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯೂ ಇದೆ. ಡಿಸೆಂಬರ್ 15 ರ ಟ್ರೇಲರ್ ಬಿಡುಗಡೆ ಸಮಾರಂಭ ವಿಭಿನ್ನವಾಗಿ ನಡೆಯಲಿದೆ’ ಎಂದರು.
ಇನ್ನು, ಈ ಕಾರ್ಯಕ್ರಮ ರೂಪಿಸುವುದಕ್ಕೆ ಸಹಾಯ ಮಾಡುತ್ತಿರುವ ಈಗಲ್ ಮೀಡಿಯಾ ಇವೆಂಟ್ ಮ್ಯಾನೇಜ್ಮೆಂಟ್‍ನ ನವರಸನ್ ಮಾತನಾಡಿ, ‘ಕ್ಯೂಬ್ ಬಳಸಿ ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿ ಆ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ. ಅವರು ಎಂಟು ಕಡೆ ಲೈವ್ ಮಾಡಬಹುದು ಎಂದರು. ನಿರ್ಮಾಪಕರು ತಮ್ಮ ಲಕ್ಕಿ ನಂಬರ್ ಏಳಾದ್ದರಿಂದ, ಎಂಟು ಕಡೆ ಬೇಡ, ಏಳು ಊರುಗಳಲ್ಲಿ ಮಾಡೋಣ ಎಂದರು. ಹಾಗಾಗಿ, ಏಳು ಊರುಗಳಲ್ಲಿ ಈ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಟೆಸ್ಟ್ ರನ್ ಮಾಡಿದ್ದೇವೆ. ಇಡೀ ಭಾರತದಲ್ಲೇ ಇದು ಮೊದಲ ಪ್ರಯತ್ನ ಎನ್ನಬಹುದು ಎಂದರು.


