ನಾಲ್ಕು ಶೇಡ್‍ಗಳು, ಅದರಲ್ಲೊಂದಕ್ಕೆ ಮುಂಬೈನ ವಿಗ್‍; ಹೊಸ ಅವತಾರದಲ್ಲಿ ಅಜೇಯ್‍ ರಾವ್‍ …

ಚಂದನವನ, ಸಿನಿ ಸುದ್ದಿ

ಅಜೇಯ್‍ ರಾವ್‍ ಅಭಿನಯದ ‘ಯುದ್ಧಕಾಂಡ’ ಬಿಡುಗಡೆಯ ನಂತರ ಅವರು ‘ಸರಳ ಸುಬ್ಬರಾವ್‍’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾಗಿತ್ತು. ಇದೀಗ ಅವರು ಇನ್ನೂ ಒಂದು ಹೊಸ ಚಿತ್ರ ಒಪ್ಪಿಕೊಂಡಿದ್ದು, ಶನಿವಾರ ಆ ಚಿತ್ರದ ಮುಹೂರ್ತ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ದಿನಕರ್‍ ತೂಗುದೀಪ, ಎಸ್‍. ನಾರಾಯಣ್‍, ಯೋಗರಾಜ್‍ ಭಟ್‍ ಮುಂತಾದವರು ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರವನ್ನು ಪಿಕೆ ಪ್ರೊಡಕ್ಷನ್ಸ್ ಬ್ಯಾನರ್‍ ಅಡಿ ಕಿರಣ್ ನಿರ್ಮಿಸಿದರೆ, ಬಾಹುಬಲಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸಾಮಾನ್ಯವಾಗಿ ಲವ್ವರ್‍ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್‍ ರಾವ್, ಹೊಸ ಚಿತ್ರದಲ್ಲಿ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಬೋಳು ತಲೆಯ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ಪೋಸ್ಟರ್‍ ಬಿಡುಗಡೆಯಾಗಿದೆ. ಅರ್ಧ ಒಡೆದಿರುವ ಕೂಲಿಂಗ್‍ ಗ್ಲಾಸ್ ತೊಟ್ಟು, ಟಯರ್‍ ಮೇಲೆ ಬೇಸ್‍ ಬಾಲ್‍ ಬ್ಯಾಟ್‍ ಹಿಡಿದು ಕೂತಿರುವ ಅಜೇಯ್‍ ಅವರ ಹೊಸ ಪೋಸ್ಟರ್‍ ಗಮನ ಸೆಳೆಯುತ್ತಿದೆ.

ಇದರ ಕುರಿತು ಮಾತನಾಡುವ ನಿರ್ದೇಶಕ ಬಾಹುಬಲಿ, ‘ಈ ಲಕ್‍ಗಾಗಿ ಅಜೇಯ್‍ ತಲೆ ಬೋಳಿಸಿದ್ದಾರಾ? ಎಂದು ಹಲವರು ಕೇಳಿದರು. ಇಲ್ಲ, ಅದೊಂದು ವಿಗ್‍. ಚಿತ್ರದಲ್ಲಿ ಅಜೇಯ್‍ ಅವರ ಪಾತ್ರಕ್ಕೆ ನಾಲ್ಕು ಶೇಡ್‍ಗಳಿವೆ. ಅದರಲ್ಲಿ ಒಂದಕ್ಕೆ ಈ ತರಹದ ಗೆಟಪ್‍ ಬೇಕಿತ್ತು. ಅವರ ತಲೆಯ ಸುತ್ತಳತೆ ತೆಗೆದುಕೊಂಡು, ಮುಂಬೈನಲ್ಲಿ ವಿಗ್‍ ಮಾಡಿಸಿದ್ದೇವೆ. ‘ಜವಾನ್‍’ ಚಿತ್ರದಲ್ಲಿ ಶಾರುಖ್‍ ಖಾನ್‍ಗೆ ವಿಗ್‍ ಮಾಡಿಕೊಟ್ಟವರೇ, ನಮ್ಮ ಚಿತ್ರಕ್ಕೂ ಮಾಡುತ್ತಿದ್ದಾರೆ. ಈ ಮೇಕಪ್‍ಗೆ ಐದು ತಾಸು ತಗಲುತ್ತದೆ. ಈ ವಿಗ್‍ ಎರಡು ದಿನ ಮಾತ್ರ ಇರುತ್ತದೆ. ಒಂದು ವಿಗ್‍ಗೆ ಒಂದು ಲಕ್ಷ ಖರ್ಚಾಗುತ್ತದೆ. ಈ ಗೆಟಪ್‍ನಲ್ಲಿ 10ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಬೇಕಾಗುತ್ತದೆ. ಹಾಗಾಗಿ, ನಾಲ್ಕೈದು ವಿಗ್‍ಗಳನ್ನು ಮಾಡಿಸಿದ್ದೇವೆ. ಎಸಿಯಲ್ಲೇ ಕೆಲಸ ಮಾಡಬೇಕು. ಬೆವರು ಬಂದರೆ ವಿಗ್‍ ಹಾಳಾಗುತ್ತದೆ. ಹಾಗಾಗಿ, ಸಮಸ್ಯೆ ಆಗದಂತೆ ಚಿತ್ರೀಕರಣ ಮಾಡಬೇಕು’ ಎಂದರು.

ಇದೊಂದು ಫ್ಯಾಮಿಲಿ ಥ್ರಿಲ್ಲರ್‍ ಎನ್ನುವ ಬಾಹುಬಲಿ, ‘ಚಿತ್ರದಲ್ಲಿ ರಾಷ್ಟ್ರೀಯ ಮಟ್ಟದ ಕಥೆ ಇದೆ. ಇದೊಂದು ಮಧ್ಯಮ ವರ್ಗದ ಕುಟುಂಬದ ಕಥೆ ಇದೆ. ಅಜೇಯ್‍ ಅವರು ಮಧ್ಯಮ ವರ್ಗದವರಿಗೆ ಹೆಚ್ಚು ರೀಚ್‍ ಆಗುತ್ತಾರೆ. ಹಾಗಾಗಿ, ಈ ಕಥೆಯನ್ನು ಅವರಿಗೆ ಹೇಳಿದೆ. ಅವರು ಸಹ ಒಪ್ಪಿ, ಚಿತ್ರದಲ್ಲಿ ನಟಿಸುವುದಕ್ಕೆ ಮುಂದಾದರು. ಮೂರ್ನಾಲ್ಕು ಶೀರ್ಷಿಕೆಗಳನ್ನು ಅಂದುಕೊಂಡಿದ್ದೇವೆ. ಆ ಪೈಕಿ ಒಂದು ಫಿಕ್ಸ್ ಆಗಲಿದೆ. ಚಿತ್ರದಲ್ಲಿ ಅಜೇಯ್‍ ಅವರಿಗೆ ನಾಯಕಿಯಾಗಿ ಮಲೈಕಾ ವಸುಪಾಲ್‍ ಇದ್ದಾರೆ. ‘ಉಗ್ರಂ’ ಮಂಜು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಚಿತ್ರಕ್ಕೆ ಸಂಭಾಷಣೆಗಳನ್ನು ಬರೆದಿರುವ ಯೋಗಾನಂದ್‍ ಮುದ್ದಾನ್‍ ಮಾತನಾಡಿ, ‘ಇದು ಬಾಹುಬಲಿ ಅವರ ಜೊತೆಗೆ ನನ್ನ ಚಿತ್ರ. ಅವರು ಕೊಟ್ಟ ಟೆನ್ಶನ್‍ಗೆ ನಾನು ಸಹ ಪೋಸ್ಟರ್‍ನಲ್ಲಿರುವ ಅಜೇಯ್‍ ತರಹ ಆಗಬೇಕಿತ್ತು. ನಾನು ಅವರನ್ನು ಮೊದಲ ಬಾರಿಗೆ ಅವರ ಆಫೀಸಿನ ಬಳಿ ಭೇಟಿ ಮಾಡಿದಾಗ, ಪಕ್ಕದಲ್ಲಿ ಒಂದು ಕಟ್ಟಡ ನಿರ್ಮಾಣ ಶುರುವಾಗಿತ್ತು. ಆ ಕಟ್ಟಡ ಮುಗಿದರೂ, ಕೆಲಸ ಮಾತ್ರ ಮುಗಿಯಲಿಲ್ಲ. ಪ್ರತಿ ಬಾರಿ ಭೇಟಿಯಾದಾಗಲೂ ಒಂದೊಂದು ಕರೆಕ್ಷನ್‍ ಹೇಳುತ್ತಿದ್ದರು. ಇನ್ನೂ ಕೆಲಸ ಮಾಡಿಸುತ್ತಲೇ ಇದ್ದಾರೆ. ಆದರೆ, ಅವರ ಬದ್ಧತೆಯನ್ನು ಮೆಚ್ಚಬೇಕು’ ಎಂದರು.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸುಜ್ಞಾನ್‍ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‍ ಸಂಕಲನವಿದೆ.

ಪ್ರಚಾರ ಪ್ರಾರಂಭಿಸಿದ ‘ಎಕ್ಕ’; ಜುಲೈ 18ಕ್ಕೆ ಚಿತ್ರ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading