ಕಾನೂನು ಹೋರಾಟದಲ್ಲಿ ಗೆದ್ದು ಸೋತ ಕಮಲ್‍ ಹಾಸನ್‍

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಕಮಲ್ ಹಾಸನ್ ಅಭಿನಯದ ‌’ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಚಿತ್ರವನ್ನು ಯಾವುದೇ ಸಮಸ್ಯೆ ಇಲ್ಲದೆ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದೆ. ಈ ಆದೇಶದಿಂದ ಕಮಲ್‍ ಹಾಸನ್‍ ಅವರಿಗೆ ಗೆಲುವು ಸಿಕ್ಕಂತಾಗಿದೆ. ಆದರೆ, ‘ಥಗ್‍ ಲೈಫ್‍’ ಚಿತ್ರವು ಕರ್ನಾಟಕದಲ್ಲಿ ಬಿಡುಗಡ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಕಮಲ್‍ ಹಾಸನ್‍ ಸೋತಿದ್ದಾರೆ.

‘ಥಗ್‍ ಲೈಫ್‍’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ‘ನಿಮಮ ಭಾಷೆಯೂ ತ್ಮಿಳಿನಿಂದ ಹುಟ್ಟಿದ್ದು …’ ಎಂದು ಕಮಲ್‍ ಹಾಸನ್‍ ಹೇಳಿದ್ದರು. ಈ ಹೇಳಿಕೆಯು ಕರ್ನಾಟಕದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಯ್ತು. ಕನ್ನಡ ವಿರೋಧಿ ಹೇಳಿಕೆ ನೀಡಿದ ಕಮಲ್ ಹಾಸನ್‍ ಅವರ ‘ಥಗ್‍ ಲೈಫ್‍’ ಚಿತ್ರವನ್ನು ಕರ್ನಾಟಕದಲ್ಲಿ ಬಹಿಷ್ಕರಿಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಸಂಬಂಧ ಕಮಲ್‍ ಹಾಸನ್‍, ಹೈಕೋರ್ಟ್ ಮೊರೆ ಹೋದರು. ಕಮಲ್‍ ಹಾಸನ್‍ ಕ್ಷಮೆ ಕೇಳಬೇಕೆಂದು ಎಂದು ನ್ಯಾಯಮೂರ್ತ ನಾಗಪ್ರಸನ್ನ ಅವರಿದ್ದ ಪೀಠ ಹೇಳಿದಾಗ, ಕಮಲ್ ಹಾಸನ್ ಪರ ವಕೀಲರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಯಲ್ಲಿ ಮಾತುಕತೆ ನಡೆಸಿ, ವಿವಾದ ಇತ್ಯರ್ಥ ಮಾಡಿಕೊಳ್ಳುವುದಾಗಿ ಹೇಳಿದರು.

ಆದರೆ, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಗುರುವಾರ ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸುವುದರ ಜೊತೆಗೆ, ಕಮಲ್‍ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕಿಲ್ಲ ಎಂದು ಆದೇಶಿಸಿದೆ. ಅಲ್ಲಿಗೆ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆಗೆ ಇದ್ದ ಎಲ್ಲಾ ಅಡೆತಡೆಗಳು ಬಗೆಹರಿದಿದ್ದು, ಚಿತ್ರವನ್ನು ಬಿಡುಗಡೆ ಮಾಡಬಹುದಾಗಿದೆ.

ಚಿತ್ರದ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ, ‘ಥಗ್‍ ಲೈಫ್‍’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ವಿತರಕರು ತೀರ್ಮಾನಿಸಿದ್ದಾರೆ. ಅದಕ್ಕೆ ಕಾರಣ ಚಿತ್ರದ ಸೋಲು ಮತ್ತು ಹುಸಿಯಾದ ನಿರೀಕ್ಷೆಗಳು. ‘ಥಗ್ ಲೈಫ್‍’ ಚಿತ್ರವು ಬಿಡುಗಡೆಯಾಗಿ ಎರಡು ವಾರಗಳಾಗಿದ್ದು, ಈ ಎರಡು ವಾರಗಳಲ್ಲಿ 50 ಕೋಟಿ ರೂ. ಸಹ ಗಳಿಕೆ ಮಾಡಿಲ್ಲ. ಈ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಚಿತ್ರ ಪ್ರೇಕ್ಷಕರ ನಿರೀಕ್ಷೆಗಳಿಗೆ ನಿಲುಕದೆ ಫ್ಲಾಪ್‍ ಆಗಿದೆ. ಜೊತೆಗೆ ಕಮಲ್‍ ಹಾಸನ್‍ ತಮ್ಮ ಮಾತುಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದ ವೆಂಕಟೇಶ್‍, ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿದ್ದಾರೆ.

ಈ ವಿಷಯ ಯಾಕೆ ಕೆಲವರಿಗೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ?

Discover more from KannadaScreens

Subscribe now to keep reading and get access to the full archive.

Continue reading