ಈ ವಿಷಯ ಯಾಕೆ ಕೆಲವರಿಗೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ?

ಚಂದನವನ, ಸಿನಿ ಸುದ್ದಿ, ಸಿನಿ ಸ್ವಾರಸ್ಯ

• ಚೇತನ್ ನಾಡಿಗೇರ್

ನಿಮ್ಮ ಸ್ನೇಹಿತನಿಗೆ ಮೊದಲು ಸಿನಿಮಾ ಮಾಡೋಕೆ ಹೇಳಿ …

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಯಬೇಕೆಂದರೆ ವರ್ಷಕ್ಕೆ ಎರಡಾದರೂ ಸಿನಿಮಾ ಮಾಡಲೇಬೇಕು. ಇಲ್ಲವಾದರೆ ನೀವು ಮಾಡಿರುವ ಸಿನಿಮಾಗಳು ಬಿಡುಗಡೆ ಮಾಡೋಕೆ ಥಿಯೇಟರ್‍ಗಳೇ ಮುಚ್ಚಿ ಹೋಗಿರ್ತವೆ …

ವರ್ಷಕ್ಕೆ ಒಂದು ಸಿನಿಮಾನಾದರೂ ಮಾಡೋಕೆ ಹೇಳಿ ನಿಮ್ಮ ಸ್ನೇಹಿತನಿಗೆ …

ರಕ್ಷಿತ್‍ ಶೆಟ್ಟಿ ಇತ್ತೀಚೆಗೆ (ಜೂನ್‍ 06) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಾಮಾನ್ಯವಾಗಿ ಹೀರೋಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಚಿತ್ರಗಳ ಕುರಿತಾಗಿ ಜಾಹೀರಾತುಗಳು ಬರುತ್ತವೆ. ಆದರೆ, ರಕ್ಷಿತ್‍ ವಿಷಯದಲ್ಲಿ ಒಂದೇ ಒಂದು ಜಾಹೀರಾತು ಕಾಣಲಿಲ್ಲ. ನಿಜ ಹೇಳಬೇಕೆಂದರೆ, ಅವರು ಯಾವ ಚಿತ್ರ ಮಾಡುತ್ತಿದ್ದಾರೆ ಎಂದೇ ಯಾರಿಗೂ ಗೊತ್ತಿಲ್ಲ. ಈ ಸಂದರ್ಭದಲ್ಲಿ ರಿಷಭ್‍ ಶೆಟ್ಟಿ, ತಮ್ಮ ಗೆಳೆಯನಿಗೆ ಶುಭ ಕೋರಿ ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ತಮ್ಮ ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನಿಂತಿದ್ದಕ್ಕೆ ಧನ್ಯವಾದಗಳನ್ನು ಕೋರಿದ್ದರು. ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದರು. ಈ ಪೋಸ್ಟ್ಗೆ ಬಂದ ಪ್ರತಿಕ್ರಿಯೆಗಳ ಪೈಕಿ ಮೇಲೆ ಮೂರು ಮಾತ್ರ ಮೇಲೆ ಕೊಡಲಾಗಿದೆ.

ರಿಷಭ್‍ ಪೋಸ್ಟ್ಗೆ ಸ್ಪಂದಿಸಿರುವ ಬಹುತೇಕರು ರಕ್ಷಿತ್‍ಗೆ ಬೇಗ ಚಿತ್ರ ಮಾಡೋದಕ್ಕೆ ಹೇಳಿ ಎಂದಿದ್ದಾರೆ. ಅದಕ್ಕೆ ಸರಿಯಾಗಿ, ರಕ್ಷಿತ್‍ ಶೆಟ್ಟಿ ಚಿತ್ರ ಬಿಡುಗಡೆಯಾಗದೆ ಒಂದೂವರೆ ವರ್ಷಗಳಾಗಿವೆ. 2023ರ ಕೊನೆಯಲ್ಲಿ ‘ಸಪ್ತ ಸಾಗರದಾಚೆ – 2’ ಚಿತ್ರ ಬಿಡುಗಡೆ ಆಗಿತ್ತು. ಈ ಒಂದೂವರೆ ವರ್ಷಗಳಲ್ಲಿ ರಕ್ಷಿತ್‍ ಅಭಿನಯದ ಚಿತ್ರ ಬಿಡುಗಡೆ ಆಗುವುದಿರಲಿ, ಮುಂದಿನ ಚಿತ್ರ ಯಾವುದು ಎಂಬ ಸ್ಪಷ್ಟತೆ ಸಹ ಇಲ್ಲ. ರಕ್ಷಿತ್‍ ಕೆಲವು ವರ್ಷಗಳಿಂದ ‘ರಿಚರ್ಡ್ ಆ್ಯಂಟೋನಿ’, ‘ಪುಣ್ಯಕೋಟಿ 1 ಮತ್ತು 2’, ‘ಮಿಡ್ವೆ ಟು ಮೋಕ್ಷ’ ಸೇರಿದಂತೆ ಐದು ಚಿತ್ರಗಳನ್ನು ಮಾಡುವ ಜಪ ಮಾಡುತ್ತಲೇ ಇದ್ದಾರೆ. ಈ ಪೈಕಿ, ಮೊದಲಿಗೆ ‘ರಿಚರ್ಡ್ ಆ್ಯಂಟೋನಿ’ ಚಿತ್ರದ ಚಿತ್ರೀಕರಣವನ್ನು ಮೇ ತಿಂಗಳಲ್ಲಿ ಪ್ರಾರಂಭ ಮಾಡುವುದಾಗಿ ಅವರು ಕಳೆದ ವರ್ಷದ ಏಪ್ರಿಲ್‍ನಲ್ಲಿ ಹೇಳಿಕೊಂಡಿದ್ದರು. ಆದರೆ, ಅಂದುಕೊಂಡಂತೆ ಚಿತ್ರೀಕರಣ ಶುರುವಾಗಲಿಲ್ಲ. ವರ್ಷದ ಕೊನೆಯಲ್ಲಿ ಕೆನಡಾದ ಟೊರೊಂಟೋ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಬರವಣಿಗೆ ಕೆಲಸ ಪೂರ್ತಿ ಆಗಿಲ್ಲ ಎಂದಿದ್ದರು. ಈಗ ಚಿತ್ರ ಯಾವ ಹಂತದಲ್ಲಿದೆಯೋ ಗೊತ್ತಿಲ್ಲ. ಯಾವಾಗ ಶುರು ಎಂದೂ ಗೊತ್ತಿಲ್ಲ. ಒಟ್ಟಿನಲ್ಲಿ ರಕ್ಷಿತ್‍ ಕಡೆಯಿಂದ ಯಾವುದೇ ಸುದ್ದಿ ಇಲ್ಲ. ರಕ್ಷಿತ್‍ ಶೆಟ್ಟಿ ಬಹಿರಂಗವಾಗಿ ಕಾಣಿಸಿಕೊಳ್ಳದೆಯೇ ಕೆಲವು ತಿಂಗಳುಗಳಾಗಿವೆ. ಅವರ ಬಗ್ಗೆ ಹಲವು ಇಲ್ಲಸಲ್ಲದ ಸುದ್ದಿಗಳು ಓಡಾಡುತ್ತಿವೆ. ಸಿನಿಮಾ ಬಗ್ಗೆ ಅಲ್ಲದಿದ್ದರೂ, ತಮ್ಮ ಬಗ್ಗೆ ಇರುವ ಸುದ್ದಿ ಸುಳ್ಳು ಎಂದು ಹೇಳುವುದಕ್ಕಾದರೂ ಒಮ್ಮೆ ರಕ್ಷಿತ್‍ ಕಾಣಿಸಿಕೊಂಡರೆ ಒಳ್ಳೆಯದು.

ಇದು ಬರೀ ರಕ್ಷಿತ್‍ ಶೆಟ್ಟಿ ಒಬ್ಬರ ವಿಷಯವಲ್ಲ. ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’ ಬಿಡುಗಡೆ ಆಗಿ ಎಂಟು ತಿಂಗಳಾಗಿವೆ. ಅದಾದ ಮೇಲೆ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ‘ಕೆಡಿ – ದಿ ಡೆವಿಲ್‍’ ಮುಗಿದಿದೆಯಾದರೂ, ಅದು ಈ ವರ್ಷ ಬಿಡುಗಡೆ ಎಂಬ ಸುದ್ದಿ ಇದೆಯಾದರೂ, ಯಾವಾಗ ಮಾಹಿತಿ ಇಲ್ಲ. ಧ್ರುವ ಅಭಿನಯದ ಮುಂದಿನ ಚಿತ್ರ ಯಾವುದು? ಯಾವಾಗ ಶುರು? ಬಿಡುಗಡೆ? ಗೊತ್ತಿಲ್ಲ. ಶ್ರೀಮುರಳಿ ಅಭಿನಯದ ‘ಬಘೀರ’ ಬಿಡುಗಡೆ ಆಗಿ ಏಳು ತಿಂಗಳಾದರೂ ಅವರ ಹೊಸ ಚಿತ್ರ ಶುರುವಾದಂತೆ ಕಾಣುತ್ತಿಲ್ಲ. ಮುರಳಿ ಕೈಯಲ್ಲಿ ಎರಡು ಚಿತ್ರಗಳಿದ್ದು, ಈ ಪೈಕಿ ಮೊದಲು ಯಾವುದು ಗೊತ್ತಿಲ್ಲ. ಶರಣ್‍ ಅಭಿನಯದ ಹಳೆಯ ಸ್ಟಾಕ್‍ಗಳೆಲ್ಲಾ ಮುಗಿದಿವೆ. ಯಶ್‍ ತಾಯಿ ನಿರ್ಮಾಣದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿರುವ ಸುದ್ದಿ ಇದ್ದು, ಆ ಚಿತ್ರ ಯಾವಾಗ ಶುರುವೋ ಗೊತ್ತಿಲ್ಲ. ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’ ಬಿಡುಗಡೆಗೆ ಎರಡು ವರ್ಷಗಳು ಬೇಕು. ‘ಟಾಕ್ಸಿಕ್‍’ ಮತ್ತು ‘ಕಾಂತಾರ – ಅಧ್ಯಾಯ 1’ ಚಿತ್ರಗಳ ನಂತರ ಯಶ್‍ ಮತ್ತು ರಿಷಭ್‍ ಶಟ್ಟಿ, ಕನ್ನಡಕ್ಕಿಂತ ಬೇರೆ ಭಾ಼ಷೆಗಳಲ್ಲೇ ಹೆಚ್ಚು ಬ್ಯುಸಿಯಾಗುತ್ತಾರೆ.

ಕನ್ನಡದಲ್ಲಿ ಚಿತ್ರಗಳಿಗೆ ಕಡಿಮೆ ಏನಿಲ್ಲ. ಆದರೆ, ಸ್ಟಾರ್ ಅಥವಾ ಜನಪ್ರಿಯ ಹೀರೋಗಳ ಚಿತ್ರಗಳಿಗೆ ಬರವಿದೆ. ಪ್ರೇಕ್ಷಕರು ಅದ್ಯಾಕೋ ಸ್ಟಾರ್‍ ಚಿತ್ರಗಳನ್ನು ಮಾತ್ರ ನೋಡುವುದು ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಇದಕ್ಕೆ ಸರಿಯಾಗಿ, ಕಳೆದ ವರ್ಷ ಜನ ಬಂದಿದ್ದು, ಆರು ಜನಪ್ರಿಯ ನಟರುಗಳ ಚಿತ್ರಗಳಿಗೆ ಮಾತ್ರ. ಈ ವರ್ಷವೂ ಅದು ಮುಂದುವರೆದಿದೆ. ಬಿಡುಗಡೆಯಾದ 100 ಚಿತ್ರಗಳ ಪೈಕಿ ಸ್ಟಾರ್‍ ಚಿತ್ರವಿಲ್ಲದ ಕಾರಣ, ಒಂದೇ ಒಂದು ಚಿತ್ರ ಗೆಲ್ಲುವುದಿರಲಿ, ಹಾಕಿದ ಬಂಡವಾಳ ಸಹ ಪಡೆಯುವುದಕ್ಕೆ ಹಲವು ಚಿತ್ರಗಳಿಗೆ ಆಗಿಲ್ಲ. ಹೀಗಿರುವಾಗ, ಸ್ಟಾರ್‍ ಅಥವಾ ಜನಪ್ರಿಯ ನಟರ ಮೇಲೆ ಹೆಚ್ಚು ಚಿತ್ರಗಳನ್ನು ಮಾಡುವ ಅವಶ್ಯಕತೆ ಹೆಚ್ಚಿದೆ. ಚಿತ್ರಮಂದಿರಗಳಿಗೆ ಜನರನ್ನು ಕರೆತರುವ ಮತ್ತು ಆ ಮೂಲಕ ಚಿತ್ರಮಂದಿರಗಳನ್ನು ಉಳಿಸುವ ಜವಾಬ್ದಾರಿ ಇದೆ. ಒಂದು ಕಡೆ ಚಿತ್ರಮಂದಿರಗಳನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಕೆಲವು ನಟರು ಎಂದು ಕೆಲವು ನಟರು ಸತತವಾಗಿ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದು ಕಡೆ ಅದ್ಯಾಕೋ ಈ ಯಾವುದೂ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲ ಎಂದು ಬಹಳಷ್ಟು ಹೀರೋಗಳು ಇದ್ದುಬಿಟ್ಟಿದ್ದಾರೆ.

ಇಷ್ಟಕ್ಕೂ ಯಾಕೆ ಕನ್ನಡದ ಬಹುತೇಕ ಹೀರೋಗಳು ಚಿತ್ರಗಳನ್ನು ಮಾಡುತ್ತಿಲ್ಲ? ಅವರಿಗೆ ನಟನೆ ಬಗ್ಗೆ ಆಸಕ್ತಿ ಕಡಿಮೆಯಾಗಿರಬಹುದು, ಪ್ಯಾನ್‍ ಇಂಡಿಯಾ ಮೋಹ ಹೆಚ್ಚಾಗಿರಬಹುದು, ಹೊಟ್ಟೆ ತುಂಬಿರಬಹುದು, ವಿಭಿನ್ನ ಪಾತ್ರಗಳನ್ನು ಮಾಡಬೇಕು ಎಂಬ ಹಸಿವು ಕಡಿಮೆಯಾಗಿರಬಹುದು, ಹೊಟ್ಟೆ ತುಂಬಿರುವುದರಿಂದ ಸಿನಿಮಾ ಮಾಡುವ ಅವಶ್ಯಕತೆ ಕಾಣುತ್ತಿರಲ್ಲದಿರಬಹುದು, ಸೋಲಿನ ರಿಸ್ಕ್ ಯಾಕೆ ಅಂತನಿಸುತ್ತಿರಬಹುದು, ಮಾಡಿದರೆ ದೊಡ್ಡ ಚಿತ್ರವನ್ನೇ ಮಾಡಬೇಕು ಎಂಬ ಹಠವಿರಬಹುದು, ಇದೆಲ್ಲವನ್ನೂ ಬಿಟ್ಟು ಇನ್ನೂ ಕಾರಣಗಳಿರಬಹುದು ಅಥವಾ ಇವೆಲ್ಲವೂ ಕಾರಣಗಳಿರಬಹುದು.

ಒಟ್ಟಿನಲ್ಲಿ ಜನಪ್ರಿಯ ನಟರು ಚಿತ್ರ ಮಾಡುವುದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ, ಒಳ್ಳೆಯ ಕಥೆ ಸಿಗಬೇಕು, ದೊಡ್ಡ ಕನಸುಗಳಿಗೆ ಸಮಯ ಬೇಕು ಎಂಬ ಉತ್ತರ ಸಿದ್ಧವಿರುತ್ತದೆ. ಸುಮ್ಮನೆ ನೀವು ಮಾಡಿರುವ ಇಷ್ಟು ಚಿತ್ರಗಳ ಪೈಕಿ ಎಷ್ಟರಲ್ಲಿ ಕಥೆ ಇತ್ತು, ಅಷ್ಟು ಸಮಯ ಹಾಕಿದರೂ ನಿಮ್ಮ ಯಾವುದೋ ಚಿತ್ರ ಯಾಕೆ ಗೆಲ್ಲಲಿಲ್ಲ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ. ಯಾವುದೇ ನಟ-ನಟಿ ವರ್ಷಕ್ಕೆ ಇಷ್ಟು ಚಿತ್ರಗಳನ್ನು ಮಾಡಬೇಕು, ನಟಿಸುತ್ತಲೇ ಇರಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ನಟಿಸುವುದು, ವಿಶ್ರಾಂತಿ ಪಡೆಯುವುದು ಅವರಿಗೆ ಬಿಟ್ಟಿದ್ದು. ಆದರೆ, ಒಬ್ಬ ಸ್ಟಾರ್‍ ಅಥವಾ ಜನಪ್ರಿಯ ನಟರೆಂದರೆ, ಅವರ ಸುತ್ತ ಹಲವು ವಿಷಯಗಳಿರುತ್ತವೆ. ಪ್ರಮುಖವಾಗಿ, ಚಿತ್ರಮಂದಿರಗಳು, ತಂತ್ರಜ್ಞರು, ಕಾರ್ಮಿಕರು … ಹೀಗೆ ಹಲವರು ಅವರನ್ನು ಅವಲಂಬಿಸಿರುತ್ತಾರೆ. ಹಾಗಾಗಿ, ತಮಗಾಗಿಯಲ್ಲದಿದ್ದರೂ, ಬೇರೆಯವರಿಗೆ ಕೆಲಸ ಮಾಡುತ್ತಿರಬೇಕಾಗುತ್ತದೆ. ದೊಡ್ಡ ಹೀರೋಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಅವರಿಗಷ್ಟೇ ಅನುಕೂಲವಲ್ಲ, ಇಡೀ ಚಿತ್ರರಂಗದಲ್ಲೊಂದು ಸಂಚಲನವಿರುತ್ತದೆ. ಸೋಲು, ಗೆಲುವಿನ ಮಾತು ನಂತರ.

ಈ ವಿಷಯ ಗೊತ್ತಿರುವುದರಿಂದಲೇ ಶಿವರಾಜಕುಮಾರ್, ರಜನಿಕಾಂತ್‍, ಕಮಲ್‍ ಹಾಸನ್‍, ಚಿರಂಜೀವಿ, ಬಾಲಕೃಷ್ಣ, ಮೋಹನ್‍ ಲಾಲ್‍, ಮಮ್ಮೂಟ್ಟಿ, ಅಕ್ಷಯ್‍ ಕುಮಾರ್ ಮುಂತಾದವರು ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ, ಈ ವಿಷಯ ನಮ್ಮ ಕೆಲವು ಕನ್ನಡದ ಹೀರೋಗಳಿಗೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ.

ಪ್ರಾಚೀನದಿಂದ ಅರ್ವಾಚೀನದವರೆಗೆ ಒಂದು ಹೂವಿನ ಕಥೆ …

Discover more from KannadaScreens

Subscribe now to keep reading and get access to the full archive.

Continue reading