‘ನಾನು ಡಾ. ರಾಜಕುಮಾರ್, ವಿಷ್ಣುವರ್ಧನ್, ಭೋಜರಾಜನ (ಶ್ರೀನಿವಾಸಮೂರ್ತಿ) ಸಿನಿಮಾ ನೋಡಿ ಭಾಷೆ ಕಲಿತು ಬೆಳೆದವನು. ಭೋಜರಾಜನ ಹತ್ತಿರ ಗಣೇಶನ ಭಾಷೆ ಚೆನ್ನಾಗಿದೆ ಅಂದರೆ ಇದಕ್ಕಿಂತ ಅವಾರ್ಡ್ ಇನ್ನೇನು ಬೇಕು?’ ಎಂದು ಪ್ರಶ್ನಿಸಿದರು ಗಣೇಶ್.
ಅದಕ್ಕೆ ಕಾರಣವೂ ಇದೆ. ‘ಪಿನಾಕ’ ಚಿತ್ರದಲ್ಲಿ ಗಣೇಶ್ ಮತ್ತು ಹಿರಿಯ ನಟ ಶ್ರೀನಿವಾಸಮೂರ್ತಿ ಜೊತೆಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸಮೂರ್ತಿಗಳು ಗಣೇಶ್ ಅವರ ಭಾಷೆಯನ್ನು ಮೆಚ್ಚಿಕೊಂಡರು. ಅವರ ಮಾತುಗಳಲ್ಲಿ ಒಂದೇ ಒಂದು ಅಪಶಬ್ದ ಬರುವುದಿಲ್ಲ ಎಂದರು.
ಈ ಕುರಿತು ಮಾತನಾಡಿದ ಶ್ರೀನಿವಾಸಮೂರ್ತಿ, ‘ಇದು ‘ಮಯೂರ’, ‘ಕವಿರತ್ನ ಕಾಳಿದಾಸ’ ಲೆವೆಲ್ಲಿನ ಸಿನಿಮಾ. ‘ಪಿನಾಕ’ ಎಂಬುದು ಒಂದು ವಂಶದ ಹೆಸರು. ಚಿತ್ರ ‘ಮಯೂರ’ಗಿಂತ ಒಂದು ಲೆವೆಲ್ ಜಾಸ್ತಿ ಇದೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬರುತ್ತಿದೆ. ಗ್ರಾಫಿಕ್ಸ್ ಆದಮೇಲೆ ಚಿತ್ರ ಬೇರೆ ತರಹ ಮೂಡಿಬರುತ್ತದೆ. ಗಣೇಶ್ ಬಹಳ ಚೆನ್ನಾಗಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ. ಒಂದು ದೃಶ್ಯದಲ್ಲಿ ಎರಡು ಪುಟಗಳ ಒಂದು ಸಂಭಾಷಣೆ ಇತ್ತು. ಗಣೇಶ್ ಒಂದೇ ಟೇಕ್‍ನಲ್ಲಿ ಆ ದೃಶ್ಯವನ್ನು ಮುಗಿಸಿದರು. ಗಣೇಶನ ಅಭಿನಯ ನೋಡಿ ಚಿತ್ರತಂಡದವರು ಕ್ಲಾಪ್ ಮಾಡಿದರು. ಆತನ ಭಾಷಾಜ್ಞಾನ ಅದ್ಭುತ. ಅವರ ಮಾತಲ್ಲಿ ಒಂದು ಅಪಶಬ್ದ ಬರುವುದಿಲ್ಲ’ ಎಂದು ಹೊಗಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಣೇಶ್, ‘ನನ್ನ ಮಾತೃಭಾಷೆಯನ್ನ ನಾನು ಚೆನ್ನಾಗಿ ಮಾತಾಡದೆ, ಇನ್ಯಾರು ಚೆನ್ನಾಗಿ ಮಾತಾಡ್ತಾರೆ? ಇದು ನನ್ನ ಭಾಷೆ. ಪ್ರತಿದಿನ ಚಿತ್ರೀಕರಣ ಮಾಡುವಾಗ, ಅವರ ಬಳಿ ಸಂಭಾಷಣೆ ಹೇಳಿ, ಇದು ಸರಿಯೇ? ಎಂದು ಕೇಳುತ್ತಿದ್ದೆ. ಅವರು ಮಾರ್ಗದರ್ಶನ ಮಾಡುತ್ತಿದ್ದರು. ಅವರ ಆಶೀರ್ವಾದ, ಹೇಳಿಕೊಟ್ಟ ರೀತಿಯಿಂದ ಸಾಧ್ಯವಾಯಿತು. ಅವರೆಲ್ಲರ ಅನುಭವದ ಜೊತೆಗೆ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನಾಳೆ ದಿನ ನನ್ನ ಬಗ್ಗೆ ಏನೇ ಚೆನ್ನಾಗಿದೆ ಎಂದು ಹೇಳಿದರೂ, ಅದು ತಂಡಕ್ಕೆ ಸೇರಬೇಕು, ನನಗೊಬ್ಬನಿಗಲ್ಲ’ ಎಂದರು.
ಇದೊಂದು ವಿಭಿನ್ನ ಅನುಭವ ಎನ್ನುವ ಅವರು, ‘ಇಡೀ ತಂಡ ಬಹಳ ಕಷ್ಟಪಡುತ್ತಿದೆ. ಅವರಿಂದಲೇ ನಾನು ಮುಂದೆ ಹೋಗುವುದಕ್ಕೆ ಸಾಧ್ಯವಾಗುತ್ತಿದೆ. ಒಬ್ಬರು ನಿರುತ್ಸಾಹ ತೋರಿಸಿದರೂ ಎನರ್ಜಿ ಬಿದ್ದು ಹೋಗುತ್ತದೆ. ಒಬ್ಬರಿಗೊಬ್ಬರು ಹೆಗಲು ಕೊಟ್ಟರೆ ಸಿನಿಮಾ ಚೆನ್ನಾಗಿ ಮೂಡಿ ಬರುತ್ತದೆ. ಈ ಚಿತ್ರವು ನನ್ನ ವೃತ್ತಿಜೀವನದಲ್ಲೇ ಒಂದು ವಿಭಿನ್ನ ಪಾತ್ರವಾಗಿ ಮೂಡಬಿರಲಿದೆ ಎಂಬ ನಂಬಿಕೆ ಇದೆ’ ಎಂದರು.
‘ಪಿನಾಕ’ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಡಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸುತ್ತಿದ್ದು, ನೃತ್ಯ ನಿರ್ದೇಶಕ ಧನಂಜಯ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗತ್ತಿದ್ದಾರೆ.


