• ಚೇತನ್ ನಾಡಿಗೇರ್
ಚಿತ್ರ: ಮಾದೇವ
ನಿರ್ದೇಶನ:
ನಿರ್ಮಾಣ: ಕೇಶವ (ದೇವಸಂದ್ರ)
ತಾರಾಗಣ: ನವೀನ್ ರೆಡ್ಡಿ, ಸೋನಾಲ್ ಮಾಂತೆರೋ, ಶ್ರುತಿ, ಶ್ರೀನಗರ ಕಿಟ್ಟಿ, ಮಾಲಾಶ್ರೀ ಮುಂತಾದವರು
ಮೃಗದಂತಿರುವ ಮಾದೇವನ ಜೀವನದಲ್ಲಿ ಪಾರು ಬರುತ್ತಾಳೆ. ಅವಳ ಆಗಮನದಿಂದ ಅವನ ಬದುಕು ಬದಲಾಗುತ್ತದೆ. ಮೃಗದಂತಿದ್ದವನು ಮನುಷ್ಯನಾಗುತ್ತಾನೆ. ಅವನು ಜೀವನ ಸುಧಾರಿಸಿತು ಎನ್ನುವಷ್ಟರಲ್ಲಿ ಏನೇನೋ ಆಗುತ್ತದೆ. ಮನುಷ್ಯನಾಗಿದ್ದ ಮಾದೇವ, ಅಲ್ಲಿಂದ ರಾಕ್ಷಸನಾಗುತ್ತಾನೆ.
‘ಮಾದೇವ’ ಚಿತ್ರದ ಕಥೆಯನ್ನು ಹೀಗೆ ಸುಲಭವಾಗಿ ಹೇಳಿಬಿಡಬಹುದು. ಮೃಗದಂತಿದ್ದವನು ಮನುಷ್ಯನಾಗೋದು ಹೇಗೆ? ಅಲ್ಲಿಂದ ರಾಕ್ಷಸನಾಗೋದು ಹೇಗೆ? ಎಂದು ಗೊತ್ತಾಗಬೇಕಿದ್ದರೆ ಚಿತ್ರವನ್ನು ನೋಡಬೇಕು. ಏಕೆಂದರೆ, ಇಲ್ಲಿ ಕಥೆಗಿಂತ ಚಿತ್ರಕಥೆ ಮತ್ತು ಪಾತ್ರಗಳು ಮುಖ್ಯ. ಚಿತ್ರಕಥೆಯಲ್ಲಿ ಹಲವು ವಿಷಯಗಳಿವೆ. ಅದನ್ನು ಹೇಳಿಬಿಟ್ಟರೆ ಚಿತ್ರ ನೋಡುವುದರಲ್ಲಿ ಮಜವಿಲ್ಲ.
ಈ ತರಹದ್ದೊಂದು ಸಿನಿಮಾ ಬಂದಿಲ್ಲ ಎಂದು ಹೇಳುವ ಹಾಗಿಲ್ಲ ಅಥವಾ ಇದೊಂದು ವಿಭಿನ್ನ ಸಿನಿಮಾ ಎಂದು ಹೇಳುವುದೂ ಕಷ್ಟ. ಆದರೂ ಚಿತ್ರ ವಿಭಿನ್ನವಾಗಿ ನಿಲ್ಲುವುದು ತನ್ನ ಚಿತ್ರಕಥೆ ಮತ್ತು ಪಾತ್ರಗಳಿಂದ. ಅಬ್ಬಲಗೆರೆ ಎಂಬ ಪ್ರದೇಶದಲ್ಲಿ 1986ರಲ್ಲಿ ನಡೆಯುವ ಕಥೆ ಇದು. ಚಿತ್ರ ಶುರುವಾಗುವುದು 2004ರಲ್ಲಿ. ಅಲ್ಲಿಂದ ಚಿತ್ರ ಫ್ಲಾಶ್ಬ್ಯಾಕ್ನಲ್ಲಿ ‘ಮಾದೇವ’ನ ಕಥೆ ಹೇಳುತ್ತದೆ. ಇದೊಂದು ಪಕ್ಕಾ ಮಾಸ್ ಸಿನಿಮಾ. ಒಂದು ಮಾಸ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳನ್ನು ಯೋಚಿಸಿಯೇ ಬರೆದಿದ್ದಾರೆ ನಿರ್ದೇಶಕರು. ಚಿತ್ರದ ಮೊದಲಾರ್ಧ ಸಾಗುವುದೇ ಗೊತ್ತಾಗುವದಿಲ್ಲ. ದ್ವಿತೀಯಾರ್ಧ ಸ್ವಲ್ಪ ನಿಧಾನವಾಯಿತು ಮತ್ತು ಹಿಂಸೆ ಹೆಚ್ಚಾಯಿತು ಎನಿಸುವುದು ಹೌದಾದರೂ, ಚಿತ್ರ ಕಡೆಯವರೆಗೂ ನೋಡಿಸಿಕೊಂಡು ಹೋಗುತ್ತದೆ. ಆ ಮಟ್ಟಿಗೆ ಚಿತ್ರಕಥೆ ಮತ್ತು ಪಾತ್ರಗಳನ್ನು ಗಟ್ಟಿಯಾಗಿ ಹೆಣೆದಿದ್ದಾರೆ ನಿರ್ದೇಶಕರು.
ಸಾಮಾನ್ಯವಾಗಿ ಚಿತ್ರದ ಪತ್ರಿಕಗೋಷ್ಠಿಗಳಲ್ಲಿ ಹೇಳುವ ಮಾತುಗಳು, ಅಂತಿಮವಾಗಿ ಚಿತ್ರ ರೂಪುಗೊಂಡ ರೀತಿ ಎರಡೂ ಬೇರೆಬೇರೆ ಇರುತ್ತವೆ. ನಿರ್ದೇಶಕರು ಹೇಳುವ ಮಾತೇ ಒಂದು, ಅಂತಿಮವಾಗಿ ಚಿತ್ರ ಮೂಡಿಬರುವುದೇ ಇನ್ನೊಂದು ರೀತಿ. ಆದರೆ, ‘ಮಾದೇವ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನವೀನ್ ರೆಡ್ಡಿ ಕೆಲವು ಮಾತಗಳನ್ನು ಹೇಳಿದ್ದರು. ವಿನೋದ್ ಪ್ರಭಾಕರ್ ಚಿತ್ರಜೀವನದಲ್ಲೇ ಇದೊಂದು ವಿಭಿನ್ನವಾದ ಪಾತ್ರ, ಈ ಚಿತ್ರ ನೋಡಿ ಹೊರ ಬಂದ ಮೇಲೆ ವಿನೋದ್ ಪ್ರಭಾಕರ್ ಜೊತೆಗೆ ಶ್ರುತಿ ಸಹ ಮನಸ್ಸಲ್ಲಿ ಉಳಿಯುತ್ತಾರೆ ಎಂದು ಹೇಳಿದ್ದರು. ಅದು ನಿಜ.
ಈ ಚಿತ್ರದ ಎರಡು ಪ್ಲಸ್ ಎಂದರೆ ಅದು ವಿನೋದ್ ಪ್ರಭಾಕರ್ ಮತ್ತು ಶ್ರುತಿ. ತಮ್ಮ ಇಷ್ಟು ವರ್ಷಗಳ ಚಿತ್ರಜೀವನದಲ್ಲೇ ವಿನೋದ್ ಮತ್ತು ಶ್ರುತಿ ಅವರು ಇಂಥದ್ದೊಂದು ಪಾತ್ರ ನಿರ್ವಹಿಸಿರಲಿಲ್ಲ. ಹಲವು ರಗೆಡ್ ಪಾತ್ರಗಳನ್ನು ವಿನೋದ್ ಮಾಡಿದ್ದರೂ, ಇಲ್ಲಿ ಅವರು ಕಾಣಿಸಿಕೊಂಡಿರುವ ರೀತಿಯೇ ಬೇರೆ. ಹಾಗೆಯೇ, ಶ್ರುತಿ ಸಹ ತಮ್ಮ ಪಾತ್ರ ಮತ್ತು ಅಭಿನಯದಿಂದ ಭಯ ಹುಟ್ಟಿಸುತ್ತಾರೆ. ಅವರ ಜೊತೆಗೆ ಸೋನಾಲ್, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಪ್ರದ್ಯೋತ್ತನ್ ಹಿನ್ನೆಲೆ ಸಂಗೀತ, ಬಾಲಕೃಷ್ಣ ತೋಟ ಛಾಯಾಗ್ರಹಣ ಖುಷಿಕೊಡುತ್ತದೆ.
‘ಸಿತಾರೆ ಜಮೀನ್ ಪರ್’ ಹಕ್ಕು ಪಡೆಯುವುದಕ್ಕೆ ಡಬ್ಬಲ್ ಮೊತ್ತ ಕೊಡಲು ರೆಡಿಯಾದ ನೆಟ್ಫ್ಲಿಕ್ಸ್


