ನಾನು ಅವರ ಋಣದಲ್ಲಿದ್ದೇನೆ, ಅವರು ನನಗೆ ಸ್ಫೂರ್ತಿ: ರಾಜ್‍ ಶೆಟ್ಟಿ

ಚಂದನವನ, ಸಂದರ್ಶನ, ಸಿನಿ ಸುದ್ದಿ

ರಾಜ್‍ ಬಿ. ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್’ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಆಗಿದೆ. ಈ ಮಧ್ಯೆ, ರಾಜ್‍ ಶೆಟ್ಟಿ ಅವರು ಹಿಂದಿಯಲ್ಲೊಂದು ಚಿತ್ರ ಮಾಡುತ್ತಿದ್ದಾರೆ, ಬಾಲಿವುಡ್‍ನ ಖ್ಯಾತ ನಿರ್ದೇಶಕ ಅನುರಾಗ್‍ ಕಶ್ಯಪ್‍ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ರಾಜ್‍ ಮಾತ್ರ ಈ ಕುರಿತು ಯಾವ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

ಇದೀಗ ಅವರು ಹಿಂದಿ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಅನುರಾಗ್ ಕಶ್ಯಪ್‍ ನಿರ್ದೇಶನದ ಚಿತ್ರದಲ್ಲಿ ಮೂರು ದಿನಗಳ ಅತಿಥಿ ಪಾತ್ರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ ಶೆಟ್ಟಿ, ‘ಅನುರಾಗ್‍ ಕಶ್ಯಪ್‍ ಇತ್ತೀಚೆಗೆ ಒಂದು ಸ್ಟೇಟಸ್‍ ಹಾಕಿದ್ದರು. ನನಗೆ ಅವರು ಸ್ಫೂರ್ತಿ. ನಾನು ಅವರ ಚಿತ್ರಗಳನ್ನು ನೋಡಿಕೊಂಡು ಬೆಳೆದವನು ಮತ್ತು ನಾನು ಅವರ ದೊಡ್ಡ ಅಭಿಮಾನಿ. ಅವರ ಸ್ಟೇಟಸ್‍ ನೋಡಿ, ‘ನಿಮ್ಮ ಚಿತ್ರಕ್ಕೆ ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳಿ’ ಎಂದು ಮೆಸೇಜ್‍ ಹಾಕಿದ್ದೆ. ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಹುದು ಅಂತಂದುಕೊಂಡಿದ್ದೆ. ಒಂದು ದಿನದ ನಂತರ, ‘ನಿಜಕ್ಕೂ ಮಾಡ್ತೀಯ’ ಎಂಬ ಮೆಸೇಜ್‍ ಬಂದಿತ್ತು. ಹೌದು ಎಂದೆ. ಅದಕ್ಕೆ ಪ್ರತಿಯಾಗಿ, ‘ಒಂದು ಸಣ್ಣ ಪಾತ್ರವಿದೆ, ಮಾಡಬಹುದಾ ನೀನು?’ ಎಂದು ಮೆಸೇಜ್‍ ಹಾಕಿದ್ದರು. ‘ಪಾತ್ರ ಅಲ್ಲ, ಸುಮ್ಮನೆ ಫ್ರೇಮ್‍ನಲ್ಲಿ ಇಲ್ಲಿಂದ ಅಲ್ಲಿಗೆ ನಡೆದುಕೊಂಡು ಹೋಗು ಎಂದರೂ ಖಂಡಿತಾ ಮಾಡುತ್ತೇನೆ. ನಾನು ನಿಮ್ಮ ಋಣದಲ್ಲಿದ್ದೇನೆ. ನಿಮ್ಮ ಸಿನಿಮಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ’ ಎಂದು ಉತ್ತರಿಸಿದೆ. ಇಷ್ಟೇ ಆಗಿದ್ದು. ಮಿಕ್ಕಂತೆ ಹೆಚ್ಚು ಮಾತಾಗಿಲ್ಲ. ಆಗಸ್ಟ್ 21ರಿಂದ 23ರವರೆಗೂ ಮೂರು ದಿನಗಳ ಕಾಲ ಚಿತ್ರೀಕರಣವಿದೆ. ಮುಂಬೈಗೆ ಹೋಗಿ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದೆ ಎಂದರು.

ಇನ್ನು, ‘ಗರುಡ ಗಮನ ಋಷಭ ವಾಹನ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರ ನೋಡಿ ಅನುರಾಗ್ ಕಶ್ಯಪ್‍ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದರು. ರಾಜ್‍ ಶೆಟ್ಟಿ ಅವರನ್ನು ಹೊಗಳಿದ್ದರು. ಈ ಕುರಿತು ಮಾತನಾಡುವ ರಾಜ್‍, ಅವರು ಹೊಗಳಿದ್ದನ್ನು ತಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ.

‘ಅದನ್ನು ಗಂಭೀರವಾಗಿ ತೆಗೆದುಕೊಂಡರೆ, ನಾವು equal ಆಗಿಬಿಡುತ್ತೀವಿ. ಅವರು ನನ್ನ ಸ್ಫೂರ್ತಿ. ಅವರ ಸಮನಾಗಿ ಗುರುತಿಸಿಕೊಳ್ಳುವ ಯಾವುದೇ ಹಠ, ಆಸಕ್ತಿ ಇಲ್ಲ. ನನಗೆ ಅವರ ಕೆಲಸ ಇಷ್ಟ. ನನಗೆ ಅವರು ಮತ್ತೊಮ್ಮೆ ಗೆಲ್ಲಬೇಕು, ಮತ್ತೆ ಅವರು ಒಂದಿಷ್ಟು ಒಳ್ಳೆಯ ಚಿತ್ರಗಳನ್ನು ಕೊಡಬೇಕು ಎಂಬುದಷ್ಟೇ ಆಸೆ. ಅವರ ಹೊಗಳಿಕೆಯಿಂದ ನಾನು ಬದಲಾಗುವುದಿಲ್ಲ. ಹಾಗಾಗಿ, ನಾನು ಅವರ ಹತ್ತಿರ ಹೆಚ್ಚು ಮಾತನಾಡುವುದಿಲ್ಲ. ದೂರದಿಂದಲೇ ಗಮನಿಸುತ್ತಾ ಇದ್ದುಬಿಡುತ್ತೇನೆ. ಮಮ್ಮೂಟ್ಟೀ ಅವರ ಬಳಿಯೂ ಅಷ್ಟೇ. ಅವರ ಹತ್ತಿರ ಎಷ್ಟು ಮಾತನಾಡಬೇಕು ಅಷ್ಟೇ ಮಾತನಾಡುತ್ತೇನೆ. ಚಿತ್ರದ ಬಗ್ಗೆ, ಪಾತ್ರದ ಬಗ್ಗೆ ಕೇಳುತ್ತೀನಿ. ಮಿಕ್ಕಂತೆ ಟೀ ಆಯ್ತಾ? ಏನ್‍ ಮಾಡ್ತಿದ್ದೀರಿ? ಎಂದೆಲ್ಲಾ ಕೇಳುವುದಿಲ್ಲ. ಅವರ ಜೊತೆಗೂ ಕೂರುವುದಿಲ್ಲ. ಅವರಿಂದ ದೂರ ಹೋಗಿ ಕೂರುತ್ತೇನೆ. ಏಕೆಂದರೆ, ನಾನು ಅವರನ್ನೆಲ್ಲಾ ಬಹಳ ಇಷ್ಟಪಡುತ್ತೇನೆ. ಎತ್ತರವಿರುವ ಬೆಟ್ಟವನ್ನು ದೂರದಿಂದಲೇ ನೋಡಿ ಖುಷಿಪಡಬೇಕು, ಹತ್ತಿರ ಹೋಗುವ ಪ್ರಯತ್ನ ಮಾಡಬಾರದು’ ಎಂದರು.

ಉಪೇಂದ್ರ ಹುಟ್ಟುಹಬ್ಬಕ್ಕಲ್ಲ, ಅಕ್ಟೋಬರ್ ತಿಂಗಳಲ್ಲಿ ‘ಯು/ಐ’ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading