ಜನ ಮೊಬೈಲ್‍ ಒಳಗೆ ಕಳೆದು ಹೋಗಿದ್ದಾರೆ ಅಂತಾರೆ ರಿಷಭ್ ಶೆಟ್ಟಿ

ಚಂದನವನ, ಸಂದರ್ಶನ, ಸಿನಿ ಸುದ್ದಿ

ಜನ ಚಿತ್ರಮಂದಿರಗಳಿಗೆ ಚಿತ್ರ ನೋಡುವುದಕ್ಕೆ ಬರುತ್ತಿಲ್ಲ ಎಂಬ ಮಾತು ಬಹಳ ದಿನಗಳಿಂದಲೇ ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ, ಜನ ಯಾಕೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂದು ಹಲವರು ತಮ್ಮದೇ ರೀತಿಯಲ್ಲಿ ವಾದ ಮಂಡಿಸುತ್ತಿದ್ದಾರೆ. ಇವತ್ತು ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರು ಜಾಸ್ತಿಯಾಗಿದ್ದಾರುವುದರಿಂದ ಜನ ಬರುತ್ತಿಲ್ಲ ಎಂದು ನಟ-ನಿರ್ದೇಶಕ ರಿಷಭ್‍ ಶೆಟ್ಟಿ ಹೇಳಿದ್ದಾರೆ.

ರಿಷಭ್ ನಿರ್ಮಾಣದ ‘ಲಾಫಿಂಗ್ ಬುದ್ಧ’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ರಿಷಭ್ ಚಿತ್ರದ ಬಗ್ಗೆ ಮಾತನಾಡುವುದರ ಜೊತೆಗೆ ಹಲವು ಚಿತ್ರರಂಗದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.

ಜನ ಚಿತ್ ನೋಡುತ್ತಿಲ್ಲ ಎಂದು ಬಯ್ಯುವುದು ಸರಿಯಲ್ಲ ಎನ್ನುವ ರಿಷಭ್, ‘ಪ್ರತಿ ವ್ಯಾಪಾರದಲ್ಲೂ ಬೇರೆಬೇರೆ ಅವಕಾಶಗಳು ಇರುತ್ತವೆ. ಸಿನಿಮಾದಲ್ಲೂ ಚಿತ್ರಮಂದಿರಗಳ ಜೊತೆಗೆ ಚಾನಲ್‍, ಸಬ್ಸಿಡಿ, ಓಟಿಟಿ, ಡಬ್ಬಿಂಗ್ ಮುಂತಾದ ಹಕ್ಕುಗಳಿವೆ. ಚಿತ್ರಗಳು ಚಿತ್ರಮಂದಿರಗಳಲ್ಲಿ ಒಂದಿಷ್ಟು ದಿನ ಪ್ರದರ್ಶನವಾಗಿ ನಂತರ ಟಿವಿ, ಓಟಿಟಿಗೆ ಬರುತ್ತವೆ. ಇವೆಲ್ಲವೂ ನಿರ್ಮಾಪಕರಿಗೆ ಒಂದಿಷ್ಟು ಸಹಾಯ ಆಗುತ್ತದೆ. ಚಿತ್ರಮಂದಿರಗಳಿಗೆ ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ. ಕಥೆ, ಚಿತ್ರಗಳು ಚೆನ್ನಾಗಿರಬಹುದು. ಆದರೆ, ಚಿತ್ರಮಂದಿರದಲ್ಲಿ ನೋಡುವ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು. ಆಮೇಲೆ ಜನ ಬರಲಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನರಿಗೆ ಸಾವಿರ ಆಯ್ಕೆಗಳೀವೆ. ಸುಮ್ಮನೆ ನೀವು ಫೋನ್‍ ತೆಗೆದುಕೊಂಡು ಪ್ರತಿದಿನ ಎಷ್ಟು ಸ್ಕ್ರೀನ್ ಸಮಯ ಆಗಿದೆ ಎಂದು ಗಮನಿಸಿ. ಕನಿಷ್ಠವೆಂದರೂ ನಾಲ್ಕೈದು ಗಂಟೆಗಳ ಕಾಲ ನಾವು ಮೊಬೈಲ್‍ ನೋಡಿರುತ್ತೇವೆ. ಜನ ಹಾಗೆ ಮೊಬೈಲ್‍ ಒಳಗೆ ಕಳೆದುಹೋಗಿದ್ದಾರೆ’ ಎಂದರು.

ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರು ಜಾಸ್ತಿಯಾಗಿದ್ದಾರೆ ಎನ್ನುವ ರಿಷಭ್‍, ‘ಸಿನಿಮಾ ಮಾಡುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ, ನೋಡೋರು ಕಡಿಮೆಯಾಗಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಶೂಟಿಂಗ್ ಮಾಡುತ್ತಿರುತ್ತಾರೆ. ಅವರೇ ಎಡಿಟ್‍ ಮಾಡಿ, ಮ್ಯೂಸಿಕ್‍ ಮಾಡಿ, ಸಂಭಾಷನೆ ಬರೆಯುತ್ತಿರುತ್ತಾರೆ. ಅವರೇ ಒಂದು ಹಾಡು ಬರೆಯುತ್ತಿರುತ್ತಾರೆ. ಅದು ಮಿಲಿಯನ್‍ಗಟ್ಟಲೆ ವೀಕ್ಷಣೆ ಆಗುತ್ತಿರುತ್ತದೆ. ಅದರ ಕಾಮೆಂಟ್ಸ್ ನೋಡುವುದರಲ್ಲಿ ಅವರು ಬ್ಯುಸಿಯಾಗಿರುತ್ತಾರೆ. ಅವರು ನಮಗಿಂತ ಬಹಳ ಬ್ಯುಸಿಯಾಗಿರುತ್ತಾರೆ’ ಎಂದರು.

ಚಿತ್ರರಂಗದವರ ಸ್ಪರ್ಧೆ ಇವತ್ತೇನಿದ್ದರೂ ಪ್ರೇಕ್ಷಕರ ಜೊತೆಗೆ ಎಂದು ಅಭಿಪ್ರಾಯಪಡುವ ರಿಷಭ್, ‘ಸಿನಿಮಾದವರ ಮಧ್ಯೆ ಸ್ಪರ್ಧೆ ಇದೆ ಎನ್ನುತ್ತಾರೆ. ಅದು ಸುಳ್ಳು. ಇವತ್ತು ನಿಜವಾದ ಸ್ಪರ್ಧೆ ಇರುವುದು ಪ್ರೇಕ್ಷಕರ ಜೊತೆಗೆ. ಅವರು ಸಿಕ್ಕಾಪಟ್ಟೆ ಅಪ್‍ಡೇಟ್‍ ಆಗಿದ್ದಾರೆ. ಪ್ರೇಕ್ಷಕರು ಯಾವತ್ತೂ ನಮಗಿಂತ ಎರಡ್ಮೂರು ವರ್ಷ ಮುಂದೆ ಇರುತ್ತಾರೆ. ನಾವು ಮೂರು ವರ್ಷ ಹಿಂದೆ ಮಾಡಿರುವ ಕಥೆಯನ್ನು ತಂದು ಹೇಳುವ ಪ್ರಯತ್ನ ಮಾಡುತ್ತಿರುತ್ತೇವೆ. ಅವರು ಪ್ರೆಶ್ ಆಗಿ ಓಟಿಟಿಗೆ ಹೋಗಿ 10 ಭಾಷೆಗಳ ಚಿತ್ರಗಳನ್ನು ನೋಡಿಕೊಂಡು ಬರುತ್ತಾರೆ. ನಾವು ಅವರಿಗಿಂತ ಸ್ವಲ್ಪ ಮುಂದೆ ಹೋಗುವ ಪ್ರಯತ್ನ ಮಾಡಬೇಕು. ನಾವು ಅಪ್‍ಡೇಟ್‍ ಆದರೆ, ನಾವು ಅವರು ಹತ್ತಿರ ಬರಬಹುದು ಅಷ್ಟೇ. ನಮಗೂ, ಪ್ರೇಕ್ಷಕರಿಗೂ ದೊಡ್ಡ ಗ್ಯಾಪ್‍ ಇದೆ. ಅದನ್ನು ತುಂಬಿಸುವ ಪ್ರಯತ್ನ ನಾವು ಮಾಡಬೇಕು’ ಎಂಬುದು ಅವರ ನಿಲುವು.

‘ಬಹಳ ದಿನಗಳಿಂದ ಜನ ಚಿತ್ರಮಂದಿರಗಳಿಗೆ ಬಂದಿಲ್ಲ. ಭೀಮದಿಂದ ಜನ ಚಿತ್ರಮಂದಿರಗಳಿಗೆ ಬರಬಹುದು ಎಂಬ ನಂಬಿಕೆ ಇದೆ. ನಂತರ ಗಣೇಶ್‍ ಸಾರ್ ಚಿತ್ರಕ್ಕೆ ಬರಬಹುದು. ‘ಪೌಡರ್‍’ಗೆ ಬರಬಹುದು. ಈ ಲೈನಪ್‍ ಚೆನ್ನಾಗಿರುವುದರಿಂದ ಮತ್ತು ಚಿತ್ರಮಂದಿರದಲ್ಲಿ ಒಳ್ಳೆಯ ಅನುಭವ ಕೊಡುವ ಚಿತ್ರಗಳಿರುವುದರಿಂದ ಪರಿಸ್ಥಿತಿ ಸರಿ ಹೋಗಬಹುದು. ಜನರಿಗೂ ಆ ನಂಬಿಕೆ ಉಳಿದರೆ ಜನ ಇನ್ನಷ್ಟು ಸಂಖ್ಯೆಯಲ್ಲಿ ಬರಬಹುದು ಎಂಬ ಆಶಾಭಾವನೆ ಇದೆ’ ಎಂದು ಮಾತು ಮುಗಿಸಿದರು.

ಲೈಟ್‍ ಬಾಯ್‍ ಕೈಯಲ್ಲಿ ‘ಟಾಕ್ಸಿಕ್‍’ ಚಿತ್ರಕ್ಕೆ ಕ್ಲಾಪ್ ಮಾಡಿಸಿದ ಯಶ್‍

Discover more from KannadaScreens

Subscribe now to keep reading and get access to the full archive.

Continue reading