‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಇದೇ ಆಗಸ್ಟ್ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ವಿಜಯ್, ಇದೇ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಅದಕ್ಕೂ ಮುನ್ನ ಒಂದಿಷ್ಟು ವರ್ಷ ‘ಸಲಗ’ ಚಿತ್ರಕ್ಕಾಗಿ ಎತ್ತಿಟ್ಟಿದ್ದರು. ನಟರಾಗಿದ್ದವರು ಹೀಗೆ ನಿರ್ದೇಶಕರಾಗಿದ್ದ ಯಾಕೆ? ಎಂಬ ಪ್ರಶ್ನೆ ಬರುವುದು ಸಹಜ.
ನಿರ್ಮಾಪಕರೊಬ್ಬರ ಮಾತು ಕೇಳಿ ನನ್ನ ಚಿತ್ರವನ್ನು ನಾನೇ ಮಾಡಿಕೊಳ್ಳಬೇಕಾಯಿತು ಎನ್ನುತ್ತಾರೆ ವಿಜಯ್. ‘’ಜಾನಿ ಜಾನಿ ಎಸ್ ಪಾಪ’ ಚಿತ್ರದ ಸಂದರ್ಭದಲ್ಲಿ ನಿರ್ಮಾಪಕರೊಬ್ಬರು ಬಂದು, ನಿನ್ನ ಚಿತ್ರಕಿರುವುದು ಇಷ್ಟೇ ಮಾರುಕಟ್ಟೆ. ಇಷ್ಟರಲ್ಲಿ ಮಾಡಿಕೊಡು ಎಂದು ಹೇಳಿದರು. ಈ ಮಾತು ಕೇಳಿ ಬೇಸರವಾಯ್ತು. ನನ್ನ ಮಾರುಕಟ್ಟೆ ಏನು ಅಂತ ತೋರಿಸುವುದಕ್ಕೆ ನಾನೇ ‘ಸಲಗ’ ಮಾಡಿದೆ. ಚಿತ್ರ ದೊಡ್ಡ ಯಶಸ್ಸು ಪಡೆಯಿತು. ಆ ಯಶಸ್ಸಿನಿಂದ ಖುಷಿಯಾಗಿ ‘ಭೀಮ’ ಮಾಡಿದೆ’ ಎನ್ನುತ್ತಾರೆ.
ನಟನೆ ಯಾವಾಗ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ, ಸದ್ಯದಲ್ಲೇ ಒಂದಿಷ್ಟು ಚಿತ್ರಗಳನ್ನು ಮಾಡುತ್ತೇನೆ ಎಂಬ ಉತ್ತರ ಅವರಿಂದ ಬರುತ್ತದೆ. ‘ಜಡೇಶ್ ಹಂಪಿ ನಿರ್ದೇಶನದ ಚಿತ್ರ ಅರ್ಧ ಮುಗಿದಿದೆ. ಕೆ. ಮಂಜು ನಿರ್ಮಾಣದ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ. ನನ್ನ ಅಸೋಸಿಯೇಟ್ ಒಬ್ಬರು ಕಥೆ ಹೇಳಿದ್ದಾರೆ. ಇದಲ್ಲದೆ ಒಂದಿಷ್ಟು ಚಿತ್ರಗಳಿವೆ. ನೋಡಿ ಹೆಜ್ಜೆ ಇಡುತ್ತೇನೆ’ ಎನ್ನುತ್ತಾರೆ.

ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ನಂತರ ವಿಜಯ್‍ಗೆ ತೆಲುಗು ಚಿತ್ರಗಳಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ‘ಅವಕಾಶಗಳೇನೋ ಸಿಗುತ್ತಿವೆ. ಆದರೆ, ಯಾವ್ಯಾವುದೋ ಚಿತ್ರ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಬಾಲಕೃಷ್ಣರಂತಹ ದೊಡ್ಡ ನಟರ ಜೊತೆಗೆ ಚಿತ್ರ ಮಾಡಿದ್ದೇನೆ. ದೊಡ್ಡ ಮತ್ತು ಒಳ್ಳೆಯ ಅವಕಾಶಗಳು ಸಿಕ್ಕರೆ ಮಾತ್ರ ಮಾಡುತ್ತೇನೆ. ಇಲ್ಲವಾದರೆ ಅಲ್ಲಿಗೆ ಹೋಗಿ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ.
ಇದುವರೆಗೂ ‘ದುನಿಯಾ’ ವಿಜಯ್ ಆಗಿದ್ದ ವಿಜಯ್, ಈಗ ‘ಭೀಮ’ ಚಿತ್ರದಲ್ಲಿನ ಟೈಟಲ್ ಕಾರ್ಡ್‍ನಲ್ಲಿ ಬಿ.ಆರ್. ವಿಜಯಕುಮಾರ್ ಎಂದು ಬದಲಾಯಿಸಿಕೊಂಡಿದ್ದಾರೆ. ಗೊತ್ತಿಲ್ಲದವರು ಯಾರೋ ಹೊಸಬರು ಇರಬಹುದು ಅಂದುಕೊಳ್ಳಬಹುದು. ಆದರೆ, ಅದು ‘ದುನಿಯಾ’ ವಿಜಯ್ ಅವರೇ. ಇಷ್ಟಕ್ಕೂ ಅವರು ಹೆಸರು ಬದಲಾಯಿಸಿಕೊಂಡಿದ್ದು ಯಾಕೆ? ತಾಯಿ ಮಾತು ಕೇಳಿ ಎನ್ನುತ್ತಾರೆ ಅವರು. ‘ನನ್ನ ನಿಜವಾದ ಹೆಸರು ವಿಜಯಕುಮಾರ್. ಆದರೆ, ಎಲ್ಲರೂ ‘ದುನಿಯಾ’ ವಿಜಿ ಅಂತ ಕರೆಯುತ್ತಿದ್ದರು. ವಿಜಯಕುಮಾರ್ ಎಂಬ ಹೆಸರು ವಿಜಿಯಾಗಿದ್ದರ ಬಗ್ಗೆ ಅವರಿಗೆ ಬೇಸರವಿತ್ತು. ಹಾಗಾಗಿ, ಅವರು ವಿಜಯಕುಮಾರ್ ಅಂತಲೇ ಇಟ್ಟುಕೋ ಎಂದು ಹೇಳುತ್ತಿದ್ದರು. ಅದೇ ಕಾರಣಕ್ಕೆ ನಾನು ಪೂರ್ತಿ ಹೆಸರಿಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ವಿಜಯ್.


