ಈ ಹುಡುಗರಿಗಾಗಿ ‘ಬ್ಯಾಕ್‍ ಬೆಂಚರ್ಸ್’ ಗೆಲ್ಲಬೇಕು: ರಾಜಶೇಖರ್

ಚಂದನವನ, ವೀಡಿಯೋ, ಸಂದರ್ಶನ, ಸಿನಿ ಸುದ್ದಿ

‘ನಾನು ಸಾಕಷ್ಟು ಸೋಲು ನೋಡಿದ್ದೇನೆ. ನನಗೆ ಸೋಲು ಹೊಸದಲ್ಲ. ಈ ಚಿತ್ರ ಈ ಹುಡುಗರಿಗಾಗಿ ಗೆಲ್ಲಬೇಕು. ಏಕೆಂದರೆ, ಈ ಹುಡುಗರು ಕಳೆದ ಮೂರು ವರ್ಷಗಳನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ, ಇದು ಅವರಿಗಾದರೂ ಗೆಲ್ಲಲೇಬೇಕು …’

ಹೀಗೆ ಹೇಳಿದರು ನಿರ್ದೇಶಕ-ನಿರ್ಮಾಪಕ ರಾಜಶೇಖರ್‍. ಅವರ ನಿರ್ದೇಶನದ ಹೊಸ ಚಿತ್ರ ‘ಬ್ಯಾಕ್‍ ಬೆಂಚರ್ಸ್’ ಈ ಶುಕ್ರವಾರ (ಜುಲೈ 19) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ರಾಜಶೇಖರ್ ತಮ್ಮ ತಂಡದವರ ಜೊತೆಗೆ ಮಾಧ್ಯಮದವರೆದುರು ಬಂದಿದ್ದರು. ಚಿತ್ರದ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.

‘ಈ ಹುಡುಗರು ಮೊದಲು ಚಿತ್ರತಂಡಕ್ಕೆ ಸೇರಿಕೊಂಡಾಗ, ಇದು ಬಿಳಿ ಕಾಗೆ, ಕಪ್ಪು ಗುಬ್ಬಚ್ಚಿ ಎಂದರೂ ಒಪ್ಪುತ್ತಿದ್ದರು. ಈಗ ಯಾವುದನ್ನೂ ಒಪ್ಪುವುದಿಲ್ಲ. ನನ್ನ ಮಾತನ್ನೇ ಕೇಳುವುದಿಲ್ಲ. ಚಿತ್ರ ಮಾಡುವುದು ನನ್ನ ಕೆಲಸ, ಬಿಡುಗಡೆ ಮತ್ತು ಪ್ರಮೋಷನ್‍ ನಿಮ್ಮ ಜವಾಬ್ದಾರಿ ಅಂತ ಹೇಳಿದ್ದೆ. ಅದಕ್ಕೆ ಪೂರಕವಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಂದೊಂದು ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಇವರಿಗೆಲ್ಲಾ ಒಳ್ಳೆಯದಾಗಬೇಕು ಅಷ್ಟೇ. ಬಹಳ ಕನಸುಗಳನ್ನಿಟ್ಟುಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರಕ್ಕಾಗಿ 600 ಜನರನ್ನು ಆಡಿಷನ್ ಮಾಡಿ, ಆ ಪೈಕಿ 30 ಜನರನ್ನು ಆಯ್ಕೆ ಮಾಡಿ, ತರಬೇತಿ ಕೊಟ್ಟು ಚಿತ್ರದಲ್ಲಿ ನಟಿಸುವಂತಾಗಿದೆ. ಈ ಚಿತ್ರದಲ್ಲಿ ಒಂದಿಷ್ಟು ಹುಡುಗರು ಬ್ಯಾಕ್‍ ಬೆಂಚ್‍ಗೆ ಹೋಗುವ ಪ್ರಸಂಗ ಬರುತ್ತದೆ. ಹಾಗೆ ಹೋದ ಮೇಲೆ ಸಾಕಷ್ಟು ತರಲೆಗಳಾಗುತ್ತಾರೆ. ಅವರ ಆಟಗಳನ್ನು ನೋಡುವುದಕ್ಕೆ ಮಜ ಇರುತ್ತದೆ. ಕೊನೆಗೆ ಏನಾಗುತ್ತದೆ ಎನ್ನುವುದು ಚಿತ್ರದ ಜೀವಾಳ. ಎಲ್ಲರೂ ಸಂತೋಷವಾಗಿ, ನಗುನಗುತ್ತಾ ಈ ಚಿತ್ರ ನೋಡಬಹುದು’ ಎಂದರು.

ಈ ಚಿತ್ರ ಆಗೋದಕ್ಕೆ ಮೂಲಕ ಕಾರಣ ಸುಚೇಂದ್ರ ಪ್ರಸಾದ್‍ ಎನ್ನುವ ರಾಜಶೇಖರ್, ‘ಈ ಚಿತ್ರ ಮಾಡಬೇಕೆಂಬ ಆಸೆ ಇತ್ತು. ಆದರೆ, ಕಲಾವಿದರನ್ನು ಹುಡುಕುವುದು ಸುಲಭವಾಗಿರಲಿಲ್ಲ. ಈ ವಿಷಯವನ್ನು ಸುಚೇಂದ್ರ ಪ್ರಸಾದ್ ಬಳಿ ಹೇಳಿಕೊಂಡಾಗ, ನಾನು ಬೆನ್ನ ಹಿಂದೆ ಇರುತ್ತೀನಿ, ನೀನು ಸಿನಿಮಾ ಮಾಡು ಎಂದು ಹುರಿದುಂಬಿಸಿದರು. ನನಗೆ ಬೇಕಾದ ಕಲಾವಿದರನ್ನು ಕೊಟ್ಟರು. ಅಷ್ಟೇ ಅಲ್ಲ, ಸುಚೇಂದ್ರ ಪ್ರಸಾದ್‍ ಈ ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಮಾಡಿದ್ದಾರೆ. ಅವರ ಪಾತ್ರ ವಿಭಿನ್ನವಾದದ್ದು. ನಿಜಜೀವನದಲ್ಲಿ ಅದು ನನ್ನ ಪಾತ್ರ. ಅದನ್ನು ಇವರ ಕೈಯಲ್ಲಿ ಮಾಡಿಸಿದ್ದು ಸಾಹಸದ ಕೆಲಸ. ಅವರಿಂದ ಮಾಡಿಸಬೇಕೆಂಬ ಆಸೆ ಇತ್ತು. ಜೊತೆಗೆ ಭಯವೂ ಇತ್ತು. ಕೊನೆಗೆ ಅವರು ಒಪ್ಪಿದರು. ಎರಡು ದಿನ ರಿಹರ್ಸಲ್‍ ಮಾಡಿಸಿ ಕೊನೆಗೆ ಈ ಪಾತ್ರ ಮಾಡಿಸಿದೆ. ಚಿತ್ರದಲ್ಲಿ ಎಷ್ಟೊಂದು ಪಾತ್ರಗಳಿವೆ. ಅವರೆಲ್ಲರನ್ನೂ ಸುಚೇಂದ್ರ ಪ್ರಸಾದ್‍ ಓವರ್‍ಟೇಕ್‍ ಮಾಡುತ್ತಾರೆ. ಈ ಚಿತ್ರದಲ್ಲಿ ಅವರು ಡ್ಯಾನ್ಸ್ ಸಹ ಮಾಡಿದ್ದಾರೆ’ ಎಂದರು.

ಈ ಚಿತ್ರ ರಂಜನೆ ಮತ್ತು ವಿನೋದಕ್ಕಾಗಿಯಷ್ಟೇ ಅಲ್ಲ, ಇದರಲ್ಲಿ ಹದಿಹರೆಯದವರ ತವಕ ಮತ್ತು ತಾಕಲಾಟಗಳನ್ನು ಕಟ್ಟಿಕೊಡಲಾಗಿದೆ ಎನ್ನುತ್ತಾರೆ ಸುಚೇಂದ್ರ ಪ್ರಸಾದ್‍. ‘ಇವತ್ತಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ವ್ಯವಸ್ಥೆ ಇದೆಲ್ಲದರ ಕುರಿತಾದ ಒಂದು ಕಥೆ ಇದು. ರಾಜಶೇಖರ್ ನನ್ನ ಸಹಪಾಠಿ. ಈ ಚಿತ್ರವನ್ನು ಕೇವಲ ಅವರಿಗಾಗಿ ಮಾಡಿದ್ದೇನೆ. ಇನ್ನು, ಈ ಹುಡುಗರು ಕನಿಷ್ಠ ಮೂರು ವರ್ಷಗಳಿಂದ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸುಲಭವಾಗಿ ತಯಾರಾದಂತ ಚಿತ್ರವಲ್ಲ. ಯಾರೂ ಕೂತು ಬರೆದರು ಎನ್ನುವುದಕ್ಕಿಂತ ಜೀವನ್ಮುಖಿಯಾಗಿ ಮತ್ತು ಬದುಕಿನಲ್ಲಿ ಸಂವಾದಿಯಾಗಿ ಸಿಗುವ ಅನೇಕ ಸಂಗತಿಗಳನ್ನು ಈ ಚಿತ್ರವಾಗಿಸಿದ್ದಾರೆ. ಎಲ್ಲಾ ಪ್ರಸಂಗಗಳು ಬಹಳ ನೈಜವಾಗಿ ಮೂಡಿಬಂದಿವೆ’ ಎಂದರು.

‘ಬ್ಯಾಂಕ್‍ ಬೆಂಚರ್ಸ್’ ಚಿತ್ರದಲ್ಲಿ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ನಟಿಸಿದ್ದಾರೆ.

ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಮತ್ತು ಮನೋಹರ್ ಜೋಶಿ ಛಾಯಾಗ್ರಹಣವಿದೆ.

ಕಾಮಿಡಿ ಪಕ್ಕಕ್ಕಿಟ್ಟು ‘ಕರಾವಳಿ’ಯಲ್ಲಿ ವಿಲನ್‍ ಆದ ಮಿತ್ರ

Discover more from KannadaScreens

Subscribe now to keep reading and get access to the full archive.

Continue reading