‘‘ಟೋಬಿ’ ನಂತರ ಬಹಳ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಆ ಚಿತ್ರ ಕಮರ್ಷಿಯಲ್ ಆಗಿ ಗೆಲ್ಲದೇ ಇರಬಹುದು. ಒಬ್ಬ ನಟನಾಗಿ ನನಗೆ ಆ ಚಿತ್ರದ ನಂತರ ಬಹಳ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಮೊದಲ ಬಾರಿಗೆ ಏನೋ ಮಾಡಬಹುದು ಅಂತ ಅನಿಸುತ್ತಿದೆ. ಸದ್ಯ ‘45’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದಲ್ಲದೆ ಇನ್ನೊಂದೆರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಸದ್ಯದ ಮಟ್ಟಿಗೆ ಆ ಚಿತ್ರಗಳ ಬಗ್ಗೆ ಹೇಳುವಂತಿಲ್ಲ. ಮಲಯಾಳಂನಿಂದ ಒಂದಿಷ್ಟು ಅವಕಾಶಗಳು ಬರುತ್ತಿವೆ. ಆದರೆ, ಸದ್ಯ ಅಲ್ಲಿಗೆ ಹೋಗಿ ನಟಿಸುವಷ್ಟು ಪುರುಸೊತ್ತಿಲ್ಲ. ಇದಲ್ಲದೆ ಒಂದು ವೆಬ್ ಸೀರೀಸ್ ಸಹ ಮಾಡುತ್ತಿದ್ದೀನಿ …’
ಹೀಗೆ ಹೇಳುತ್ತಾ ಹೋದರು ರಾಜ್ ಬಿ ಶೆಟ್ಟಿ. ಅವರು ಮಾತಿಗೆ ಸಿಕ್ಕಿ ಬಹಳ ಸಮಯವೇ ಆಗಿತ್ತು. ‘ಟೋಬಿ’ ಬಿಡುಗಡೆ ಸಂದರ್ಭದಲ್ಲೂ ಮಾತಿಗೆ ಸಿಕ್ಕಿರಲಿಲ್ಲ ಅವರು. ‘ಸ್ವಾತಿಮುತ್ತಿನ ಮಳೆ ಹನಿಯೇ’ ಬಿಡುಗಡೆಯಾಗಿದ್ದೇ ಗೊತ್ತಾಗಲಿಲ್ಲ. ಆ ನಂತರ ಅವರು ಮಲಯಾಳಂ ಚಿತ್ರದಲ್ಲಿ ನಟಿಸಿದರು. ಈಗ ರಾಜ್ ಶೆಟ್ಟಿ ಅಭಿನಯದ ‘ರೂಪಾಂತರ’ ಎಂಬ ಚಿತ್ರ ಜುಲೈ 26ಕ್ಕೆ ಬಿಡುಗಡೆಯಾಗುವುದಕ್ಕಿದೆ. ಈ ಚಿತ್ರದ ಪ್ರಚಾರಕ್ಕಾಗಿ ರಾಜ್ ಬಂದಿದ್ದರು. ಪತ್ರಿಕಾಗೋಷ್ಠಿಯ ನಂತರ ಮಾತು ಹಲವು ವಿಷಯಗಳ ಸುತ್ತ ಸಾಗಿತು. ಸೋಲು, ಚಿತ್ರರಂಗದ ಸಮಸ್ಯೆ, ಬದಲಾವಣೆ, ಪ್ಲಾನಿಂಗ್ … ಶೆಟ್ಟರು ಇವೆಲ್ಲವನ್ನೂ ಬಹಳ ಚೆನ್ನಾಗಿ ಮತ್ತು ಅರ್ಥಪೂರ್ಣವಾಗಿ ವಿವರಿಸಿದರು.
• ಸೋಲು ಬಹಳ ಸುಂದರ. ನಾನು ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ. ‘ಟೋಬಿ’ ಸೋಲಿನಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಈ ಸೋಲಿನಿಂದ ಸ್ವಲ್ಪ ಹಿನ್ನೆಡೆ ಆಗಬಹುದು. ಏಕೆಂದರೆ, ಜನ ವಿಪರೀತ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಿರೀಕ್ಷೆಗೆ ಚಿತ್ರ ಇಲ್ಲ ಎಂದಾಗ ಅವರಿಗೆ ಬೇಸರವಾಗುತ್ತದೆ. ಇನ್ನು, ಸೋತಾಗ ಸಹಜವಾಗಿಯೇ ನಮಗೂ ಬೇಸರವಾಗುತ್ತದೆ. ಗೆಲುವು ಆತ್ಮವಿಶ್ವಾಸ ಕೊಟ್ಟರೆ, ಸೋಲು ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟುಹಾಕುತ್ತವೆ. ಎಲ್ಲಿ ತಪ್ಪು ಮಾಡಿದೆ? ನಾವೆಷ್ಟು ಬದಲಾಗಿದ್ದೇವೆ? ಇವೆಲ್ಲವೂ ಯೋಚಿಸುವಂತೆ ಮಾಡುತ್ತದೆ. ನಾವು ಆರಂಭದಲ್ಲಿ ಇಲ್ಲಿಗೆ ಬಂದಾಗ ಮುಗ್ಧರಾಗಿರುತ್ತೇವೆ. ಕ್ರಮೇಣ ನಮ್ಮಲ್ಲೋಂದು ಬದಲಾವಣೆ ಆಗುತ್ತದೆ. ನಾವು ಸೋತಾಗ, ಆತ್ಮವಲೋಕನ ಮಾಡಿಕೊಂಡರೆ, ನಮಗೆ ನಾವೇ ಎಲ್ಲಿ ಸೋತೆವು ಎಂದು ಪ್ರಶ್ನೆ ಮಾಡಿಕೊಂಡರೆ ಎಲ್ಲವೂ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸೋತಿದ್ದಕ್ಕೆ ನಾನು ಬಹಳ ಲಕ್ಕಿ ಎನ್ನಬೇಕು. ಸೋತಾಗ ಸ್ವಲ್ಪ ಕಷ್ಟವಾಗುವುದು ಹೌದು. ಆದರೆ, ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ. ಆ ಚಿತ್ರ ಗೆದ್ದಿದ್ದರೆ, ನಾನು ಸಹ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದೆನೇನೋ? ಅಷ್ಟರಲ್ಲಿ ಸೋತೆ. ಮುಂಧ ತಪ್ಪಾದರೆ ಭಯವಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಎಂಬ ಧೈರ್ಯ ಬರುತ್ತದೆ. ಸೋಲು ತುಂಬಾ ಸ್ವಾತಂತ್ರ್ಯ ಕೊಡುತ್ತೆ.
• ಕನ್ನಡ ಚಿತ್ರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಆತಂಕ ಸಹಜ. ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ 120 ಚಿತ್ರಗಳು ಸೋತಿವೆ ಎಂದರೆ ಆತಂಕ ಸಹಜ. ಇನ್ನೊಂದು ಕಡೆ ಮಲಯಾಳದಲ್ಲಿ ಇದೇ ಸಮಯದಲ್ಲಿ ಕೆಲವು ಚಿತ್ರಗಳು ಒಟ್ಟಾಗಿ ಸೇರಿ 1000 ಕೋಟಿ ರೂ. ಗಳಿಕೆ ಮಾಡಿದೆ ಎಂದರೆ, ನಾವು ಆ ಚಿತ್ರರಂಗವನ್ನು ಸೂಕ್ಷಮವಾಗಿ ಗಮನಿಸಬೇಕು. ಅಲ್ಲೇನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಜೊತೆಯಾಗಿ ಕೆಲಸ ಮಾಡಲಾಗುತ್ತಿದೆ. ‘ಆವೇಶಂ’ ಚಿತ್ರವನ್ನು ಗಮನಿಸಿದರೆ, ಆ ಚಿತ್ರಕ್ಕೆ ದುಡಿದ ತಂತ್ರಜ್ಞರೆಲ್ಲಾ ಹೆಸರು ಮಾಡಿದವರು. ಅವರ ಜೊತೆಗೆ ಫಹಾದ್ ಫಾಜಿಲ್ ಸಹ ಇದ್ದಾರೆ. ಹಾಗಾಗಿ, ಸಿನಿಮಾ ಗೆಲುವು, ಸೋಲು ನಂತರದ ಮಾತು. ಆರಂಭಿಕವಾಗಿ ಒಂದಿಷ್ಟು ಪ್ರೇಕ್ಷಕರು ಬರುತ್ತಾರೆ. ‘ಪ್ರೇಮಲು’ ಚಿತ್ರದಲ್ಲಿ ಹೊಸಬರು ಕೆಲಸ ಮಾಡಿದ್ದಾರೆ ಎಂಬುದು ಮಾತ್ರ ನಮಗೆ ಕಾಣುತ್ತದೆ. ಅದರ ಹಿಂದೆ, ಒಂದು ನುರಿತ ತಂಡ ಇದೆ. ಜನಪ್ರಿಯ ತಂತ್ರಜ್ಞರು, ನಿರ್ಮಾಪಕರು ಆ ಚಿತ್ರದ ಹಿಂದಿದ್ದಾರೆ. ಕನ್ನಡದಲ್ಲಿ ‘ಕಾಟೇರ’ ಆಯ್ತು ನೋಡಿ, ಆ ತರಹ. ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ, ಕಥೆಗಾರ, ಸಂಗೀತ ನಿರ್ದೇಶಕ ಎಲ್ಲರೂ collaborate ಆಗಬೇಕು. ಆ ತರಹದ collaborationಗಳು ಹೆಚ್ಚಾದಾಗ ಒಂದು ಚಿತ್ರಕ್ಕೆ ಅನುಕೂಲವಾಗುತ್ತದೆ. ಚಿತ್ರ ಮಾರಾಟ ಮಾಡುವುದು ಸುಲಭವಾಗುತ್ತದೆ.
• ‘ಕೆಜಿಎಫ್’ ನಂತರ ನಮ್ಮಲ್ಲಿ ವರ್ಷಕ್ಕೆ ಒಂದೋ, ಎರಡೋ ದೊಡ್ಡ ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ. ಇದರಿಂದ ಚಿತ್ರಮಂದಿರಗಳಿಗೆ ಕಷ್ಟವಾಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರೇಕ್ಷಕರಿಗೂ ತಾವು ಇಷ್ಟಪಟ್ಟಿದ್ದು ನೋಡೋಕೆ ಸಿಗುತ್ತಿಲ್ಲ. ಇದರಿಂದ Theater culture miss ಆಗುತ್ತಿದೆ. ಪ್ರಮುಖವಾಗಿ ಪ್ರೇಕ್ಷಕರನ್ನು ನಿರಂತರವಾಗಿ ಕರೆಸಿಕೊಳ್ಳುವ ಕೆಲಸವಾಗಬೇಕು. ಬರೀ ದೊಡ್ಡದೊಡ್ಡ ಚಿತ್ರಗಳನ್ನು ಮಾಡೋದಕ್ಕೆ ಹೋಗಿ ವಿಳಂಬವಾಗುತ್ತಿದೆ. ಅದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆ ಮಲಯಾಳಂನಲ್ಲೂ ಆಗಿತ್ತು. ಆದರೆ, ಅವರು ಸರಿ ಮಾಡಿಕೊಂಡರು. ಅಲ್ಲಿ ಚಿತ್ರೀಕರಣ ಮುಗಿದ ಮೂರು ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಆದರೆ, ಇಲ್ಲಿ ತುಂಬಾ ತಡವಾಗುತ್ತಿದೆ. ಒಂದು ಚಿತ್ರವಂತೂ ಚಿತ್ರೀಕರಣ ಮುಗಿದು, 16 ದಿನಗಳಲ್ಲಿ ಬಿಡುಗಡೆಯಾಯಿತು. ಇದು ಹೇಗೆ ಸಾಧ್ಯ ಎಂದರೆ, ಬೇರೆ ಕೆಲಸಗಳು ಸಹ ಜೊತೆಜೊತೆಯಾಗಿ ನಡೆಯುತ್ತಿರುತ್ತದೆ. ಆ ವಿಷಯದಲ್ಲಿ ಇಲ್ಲಿ ಬಹಳ ನಿಧಾನ. ಇದರಿಂದ ಬಡ್ಜೆಟ್ ಸಹ ಜಾಸ್ತಿ ಆಗುತ್ತಿದೆ. ಹೀಗಾದಾಗ, ಹಾಕಿದ ದುಡ್ಡು ಬರುತ್ತಾ? ಇಲ್ಲ. ಪ್ರಮುಖವಾಗಿ ಇಲ್ಲಿ ನಿರ್ಮಾಪಕರ ಕಷ್ಟ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಗುಣಮಟ್ಟ ಎಷ್ಟು ಮುಖ್ಯವೋ, ಅದನ್ನು ಎಷ್ಟು ಬೇಗ ಮಾಡುತ್ತೀವೋ ಅದು ಸಹ ಬಹಳ ಮುಖ್ಯ.
• ಇಲ್ಲಿ ಪ್ರಮುಖವಾಗಿ ಪ್ಲಾನಿಂಗ್ ಮುಖ್ಯ. ಅಬ್ರಹಾಂ ಲಿಂಕನ್ಗೆ ಯಾರೋ ಹೇಳಿದರಂತೆ. ನಾಲ್ಕು ಗಂಟೆ ಕೊಡುತ್ತೀನಿ, ಅಷ್ಟರಲ್ಲಿ ಗಿಡ ಕತ್ತರಿಸಬೇಕು ಎಂದರಂತೆ. ಅದಕ್ಕೆ ಒಪ್ಪುವ ಅವರು, ಮೂರು ತಾಸು ಕತ್ತಿ sharp ಮಾಡಿ, ಒಂದು ತಾಸಿನಲ್ಲಿ ಗಿಡ ಕತ್ತಿರುಸುತ್ತಾರೆ. ನಾವು ಈ ನಿಟ್ಟಿನಲ್ಲಿ ಯೋಚಿಸಬೇಕು. ಚಿತ್ರೀಕರಣಕ್ಕೆ ಹೋದ ಮೇಲೆ ಪ್ರತಿ ನಿಮಿಷವೂ ದುಡ್ಡೇ. ಅದಕ್ಕೇ, ಮೊದಲು ನಾವು ಚೆನ್ನಾಗಿ ತಯಾರಿ ಮಾಡಿಕೊಂಡಿರಬೇಕು. ಪ್ರತಿ ವಿವರವನ್ನು ಬರೆದಿಟ್ಟುಕೊಂಡರೆ, ಆಗ ಕೆಲಸ ಸುಲಭ. ನಾವು ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಎಷ್ಟು ತಯಾರಾಗುತ್ತೀವೋ, ಎಷ್ಟು ರಿಹರ್ಸಲ್ಗಳನ್ನು ಮಾಡುತ್ತೀವೋ, ಚಿತ್ರೀಕರಣ ಸಮಯದಲ್ಲಿ ಅಷ್ಟೇ ಅನುಕೂಲವಾಗುತ್ತದೆ. ‘ಒಂದು ಮೊಟ್ಟೆಯ ಕಥೇ’ ಚಿತ್ರಕ್ಕೆ ಎರಡೂವರೆ ತಿಂಗಳ ಕಾಲ ರಿಹರ್ಸಲ್ ಮಾಡಿದ್ದೆವು. ಎಷ್ಟು ಅಭ್ಯಾಸವಾಗಿತ್ತು ಎಂದರೆ, ಸೀನ್ ಹೇಳಿದರೆ ಕಲಾವಿದರು ಬಂದು ನಟಿಸುತ್ತಿದ್ದರು. ಹೊಸಬರಾದರೂ ಪಳಗಿದವರಂತೆ ನಟಿಸಿದ್ದರು. ನನ್ನ ಎಲ್ಲಾ ಸಿನಿಮಾಗಳಿಗೂ ರಿಹರ್ಸಲ್ ಮಾಡಿಯೇ ನಾನು ಚಿತ್ರೀಕರಣಕ್ಕೆ ಹೋಗೋದು.
• ಜನರಿಗೆ ಇಷ್ಟವಾಗುವ ಸಿನಿಮಾ ಮಾಡಬೇಕು. ಅದು ಬಿಟ್ಟು ಕನ್ನಡ ಭಾಷೆಯ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎಂದು ಆರೋಪ ಮಾಡುತ್ತಿರುವುದು, ದೊಡ್ಡ ಅಪರಾಧ. ಸಿನಿಮಾ ಚೆನ್ನಾಗಿರಬೇಕು, ಅದೊಂದೇ criteria. ನಾವು ಸಿನಿಮಾ ಸಂಸ್ಕೃತಿ ಬೆಳೆಸಿಲ್ಲ. ಅದು ನಮ್ಮ ತಪ್ಪು. ನಮ್ಮ ತಪ್ಪನ್ನು ಅವರ ಮೇಲೆ ಹಾಕಬಾರದು. ನಾನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಒಂದು ಚಿತ್ರ ಚೆನ್ನಾಗಿಲ್ಲ ಎಂದರೆ, ಚೆನ್ನಾಗಿಲ್ಲ ಎಂದೇ ಹೇಳಬೇಕು. ಕನ್ನಡ ಚಿತ್ರ ಎಂಬ ಕಾರಣಕ್ಕೆ ಚೆನ್ನಾಗಿದೆ ಎಂದರೆ ಮೋಸ ಮಾಡಿದ ಹಾಗಾಗುತ್ತದೆ. ಒಂದು ಪ್ರದೇಶದಲ್ಲಿ ಮಟನ್ ಬಿರಿಯಾನಿಗೆ ವ್ಯಾಪಾರವಿದ್ದರೆ, ನಾವು ಮೊಸರನ್ನ ಮಾರುವುದಕ್ಕೆ ಸಾಧ್ಯವಿಲ್ಲ. ಸೇಲ್ ಆಗುತ್ತಿಲ್ಲ ಎಂದರೆ ನಾವು ಸರಿಪಡಿಸಿಕೊಳ್ಳಬೇಕು. ಜನ ಬುದ್ಧಿವಂತರು. ಚಿತ್ರಮಂದಿರದಲ್ಲ ಕೇವಲ ನಾಲ್ಕು ಜನರಿದ್ದಾರೆ ಎಂದರೆ, ಆಗಲೇ ಚಿತ್ರ ಹೇಗಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
• ಬದಲಾವಣೆ ಸಹಜ. ಅದಕ್ಕೂ ಮೊದಲು ನಾವು ಸ್ವಲ್ಪ ನಿಲ್ಲಬೇಕು. ನಿಂತು ಯಾವ ಕಡೆ ಹೋಗಬೇಕು ಎಂಬುದನ್ನು ತೀರ್ಮಾಸಬೇಕು. ನಾವು ಹೋಗುತ್ತಿರುವ ದಾರಿ ತಪ್ಪಾಗಿರಬಹುದು. ಅದನ್ನು ಪ್ರೇಕ್ಷಕರು ಪದೇಪದೇ ಹೇಳುತ್ತಿದ್ದಾರೆ. ಅವರ ಮಾತನ್ನೊಮ್ಮೆ ಕೇಳೋಣ. ಅವರನ್ನು ಸುಮ್ಮನೆ ಬಯ್ಯುವುದು ಬೇಡ. ಅವರು ಬರ್ತಾ ಇಲ್ಲ ಅಂದರೆ ಯಾಕೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದೇ ಜನ ‘ಕಲ್ಕಿ’ ನೋಡುತ್ತಿದ್ದಾರೆ. ಇನ್ಯಾವುದೋ ಮಲಯಾಳಂ ಸಿನಿಮಾ ನೋಡುತ್ತಿದ್ದಾರೆ. ಒಳ್ಳೆಯ ಸಿನಿಮಾ ಅಂತನಿಸಿದರೆ ನೋಡುತ್ತಾರೆ. ನಮ್ಮ ಸಿನಿಮಾ ನೋಡುತ್ತಿಲ್ಲ ಎಂದರೆ, ಏನೋ ದೋಷ ಇರಬೇಕು. ತುಂಬಾ ವರ್ಷಗಳ ಕಾಲ ನಾವು ಒಳ್ಳೆಯ ಸಿನಿಮಾ ಕೊಡಲಿಲ್ಲವೇನೋ ಗೊತ್ತಿಲ್ಲ. ‘ಕೆಜಿಎಫ್’ ಆದಾಗ, ನಾವು ಹೆಮ್ಮೆಯಿಂದ ಮಾತನಾಡಿದ್ದು ಸುಳ್ಳಾ? ಚಿತ್ರರಂಗದ ಬಗ್ಗೆ ಒಳ್ಳೆಯ ಮಾತಾಡಲಿಲ್ಲವಾ? ಅದೇ ರೀತಿ ಸೋಲುಗಳು ಸಹಜ. ಕೆಲವು ಕೆಟ್ಟ ಸಿನಿಮಾಗಳಿಂದ ಒಂದು ಒಳ್ಳೆಯ ಸಿನಿಮಾ ಸೋಲುವುದುಂಟು. ಅದನ್ನು collective ಆಗಿ ಅನುಭವಿಸಬೇಕು. ಒಟ್ಟಿಗೆ ನಿಂತು ಹೋರಾಡಿ, ಒಳ್ಳೆಯ ಸಿನಿಮಾಗಳನ್ನು ಕೊಡೋಣ.
• ಹೊಸಬರನ್ನ ಬಳಸಿಕೊಳ್ಳಲ್ಲ, ಬರೀ ಆಡಿಷನ್ ಮಾಡುತ್ತೇನೆ ಎಂಬ ಆರೋಪ ನನ್ನ ಮೇಲಿದೆ. ನೀವು ‘ಗರುಡ ಗಮನ ಋಷಭ ವಾಹನ’ ಚಿತ್ರ ನೋಡಿದರೆ, ಅದರಲ್ಲಿ ನಾನು ಮತ್ತು ರಿಷಭ್ ಬಿಟ್ಟರೆ ಮಿಕ್ಕಂತೆ ಬಹಳಷ್ಟು ಹೊಸಬರು ಇದ್ದರು. ಟೋಬಿಯಲ್ಲೂ ಕೆಲವು ಕಲಾವಿದರನ್ನು ಹೊರತುಪಡಿಸಿದರೆ, ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಈ ಚಿತ್ರದಲ್ಲಿ ಬರೀ ಮಂಗಳೂರು ಮೂಲದ ಕಲಾವಿದರು ಮಾತ್ರವಲ್ಲ, ಕಥೆ ಮತ್ತು ಪಾತ್ರಕ್ಕೆ ಹೊಂದುವಂತಹ ಬೇರೆಬೇರೆ ಪ್ರಾಂತ್ಯದ ಕಲಾವಿದರು ಜಾಸ್ತಿ ಇದ್ದಾರೆ.


