ಸ್ಯಾಂಡಲ್‍ವುಡ್‍ನ ಬೇರೆ ವುಡ್‍ಗಳಿಗೆ ಹೋಲಿಸೋಕೆ ಸಾಧ್ಯವಾ?: ಹಂಸಲೇಖ

ಚಂದನವನ, ಪ್ಯಾನ್ ಇಂಡಿಯಾ, ಸಂದರ್ಶನ, ಸಿನಿ ಸುದ್ದಿ

ಕನ್ನಡ ಚಿತ್ರರಂಗದವರು ಹೆಚ್ಚುಹೆಚ್ಚು ಪ್ಯಾನ್‍ ಇಂಡಿಯಾ ಚಿತ್ರಗಳತ್ತ ಆಕರ್ಷಿತರಾಗುತ್ತಿರುವುದು, ಕನ್ನಡದ ಹೀರೋಗಳು ಸಣ್ಣ ಚಿತ್ರಗಳನ್ನು ಬಿಟ್ಟು, ದೊಡ್ಡ ಬಜೆಟ್‍ನ ಮತ್ತು ಪ್ಯಾನ್‍ ಇಂಡಿಯಾ ಚಿತ್ರಗಳನ್ನು ಮಾಡೋಕೆ ಹೊರಟಿರುವ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪನಿಗಳು ವ್ಯಕ್ತವಾಗುತ್ತಿವೆ. ಈಗ ಹಿರಿಯ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರರಾದ ಹಂಸಲೇಖ ಸಹ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಗೌರಿ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ಕನ್ನಡದ ಹೀರೋಗಳು ಹನಿಮೂನ್‍ ತರಹ ಬೇರೆ ಭಾಷೆಗಳಿಗೆ ಹೋಗಿ ಬರಬಹುದೇ ಹೊರತು ಅಲ್ಲಿರುವುದಕ್ಕೆ ಸಾಧ್ಯವೇ ಇಲ್ಲ, ಹಾಗಾಗಿ ಕನ್ನಡದಲ್ಲಿ ಹೆಚ್ಚು ಚಿತ್ರಗಳನ್ನು ಮಾಡಿ ಎಂದು ಅವರು ಹೀರೋಗಳಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹಂಸಲೇಖ, ‘ಈ ಪ್ಯಾನ್‍ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸ್ಟಾರ್‍ಗಳಿಗೆ ಕನ್ನಡದ ಬೇರುಗಳು ಕಟ್‍ ಆಗಿದೆ. ಇವರೆಲ್ಲಾ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಅನ್ನೋದು ಒಂದು ಭ್ರಮೆ. ದಕ್ಷಿಣದಲ್ಲಿ ಯಾರಾದರೂ ಸುಂದರ ನಾಯಕಿಯರಿದ್ದರೆ, ಉತ್ತರ ಭಾರತದಲ್ಲಿ 20 ವರ್ಷ ಬದುಕಬಹುದೇ ಹೊರತು, ರಜನಿಕಾಂತ್‍ ಆಗಲೀ, ಕಮಲ್‍ ಹಾಸನ್‍, ಮೋಹನ್ ಲಾಲ್‍, ಮಮ್ಮೂಟ್ಟಿ ಮುಂಬೈನಲ್ಲಿ ಎರಡು ವರ್ಷ ಇರೋಕೆ ಆಗಲ್ಲ. ವಾಪಸ್ಸು ಬಂದುಬಿಡ್ತಾರೆ. ನಮ್ಮ ಹೀರೋಗಳು ಹನಿಮೂನ್‍ ತರಹ ಹೋಗಿ ಪ್ಯಾನ್ ಇಂಡಿಯಾ ಎಲ್ಲಾ ಸುತ್ತಾಡಿಕೊಂಡು ಬರಬಹುದು. ಅದೆಲ್ಲಿ ಸುತ್ತಿದರೂ ಕೊನೆಗೆ ಕನ್ನಡಕ್ಕೆ ಬರಲೇ ಬೇಕು’ ಎಂದರು.

ಕನ್ನಡ ಚಿತ್ರರಂಗವನ್ನು ಬೇರೆ ಯಾವ ಭಾಷೆಯ ಚಿತ್ರರಂಗದ ಜೊತೆಗೆ ಹೋಲಿಸುವುದಕ್ಕೂ ಸಾಧ್ಯವಿಲ್ಲ ಎಂದಿರುವ ಅವರು, ‘ಎಷ್ಟೊಂದು ಪ್ರಾದೇಶಿಕ ಭಾಷೆಗಳಿವೆ, ಎಷ್ಟೊಂದು ಪ್ರಾದೇಶಿಕ ಚಿತ್ರರಂಗಗಳಿವೆ. ಅದರಲ್ಲಿ ಕೇಳೋದಕ್ಕೆ ಬಹಳ ಅರ್ಥಗಭಿತವಾದ ಶೀರ್ಷಿಕೆ ಎಂದರೆ ಅದು ಸ್ಯಾಂಡಲ್‍ವುಡ್‍. ಅದನ್ನು ನಾವು ಅಚ್ಚ ಕನ್ನಡದಲ್ಲಿ ಚಂದನವನ ಅಂತ ಕರೆಯುತ್ತೇವೆ. ಸ್ಯಾಂಡಲ್‍ವುಡ್‍ನ್ನು ಬೇರೆ ಯಾವುದಾದರೂ ವುಡ್‍ ಜೊತೆಗೆ ಹೋಲಿಸುವುದಕ್ಕೆ ಸಾಧ್ಯವಾ? ಬಾಲಿವುಡ್‍, ಕಾಲಿವುಡ್‍ ಏನೇನೋ ಇದೆ. ಅದ್ಯಾವುದರ ಜೊತೆಗೆ ಹೋಲಿಕೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಸ್ಯಾಂಡಲ್‍ವುಡ್‍ ಅಂದರೆ ಅದೊಂದು ಪರಿಮಳ. ಗಂಧದ ಪರಿಮಳ. ಅದಕ್ಕೆ ಗಂಧದ ಮರದ ಗುಣಗಳಿವೆ. ಗಂಧದ ಮರ ಸುತ್ತ ಬೇರೆ 20-30 ಗಿಡಗಳ ಸಸಿ ನೆಟ್ಟರೆ ಮಾತ್ರ ಅದು ಉಳಿಯುತ್ತೆ. ಎಲ್ಲರೊಳಗೂ ಒಳಗೊಂಡು ಬೆಳೆಯುವುದೇ ಸ್ಯಾಂಡಲ್‍ವುಡ್‍. ಒಬ್ಬರೇ ಬೆಳೆಯುವುದಲ್ಲ. ಎಲ್ಲರ ಜೊತೆಗೆ ಬೆಳೆಯುವುದು ಮುಖ್ಯ. ಇದಕ್ಕೊಂದು ಪರಂಪರೆ ಇದೆ. ಭಾಷೆಯಿಂದಲೇ ಕನ್ನಡ ಚಿತ್ರರಂಗವನ್ನು ಬೆಳೆಸಿದ ದೊಡ್ಡ ಪರಂಪರೆ ಇದೆ. ಆ ಪರಂಪರೆಯಿಂದ ಬಂದು ಪ್ಯಾನ್‍ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಜಾಸ್ತಿ ಆಗುತ್ತೆ. ಬಾಡಿ, ದಾಡಿ ಬೆಳೆಯಬಹುದು ಬೇರೇನೂ ಆಗುವುದಿಲ್ಲ. ಹಾಗಾಗಿ, ಮೊದಲು ಇಲ್ಲಿಗೆ ಚಿತ್ರ ಮಾಡಿ’ ಎಂದು ಕರೆ ನೀಡಿದ್ದಾರೆ.

‘ಗೌರಿ’ ಜೊತೆಗೆ ‘ಮೊನಾಲಿಸಾ’; ‘ಮುದ್ದಾದ’ ಹಾಡು ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading