ಎ.ಪಿ. ಅರ್ಜುನ್ ನಿರ್ದೇಶಕರಾಗಿ 15 ವರ್ಷಗಳಾಗಿವೆ. ಈ 15 ವರ್ಷಗಳಲ್ಲಿ ಅವರು ನಿರ್ದೇಶಿಸಿರುವುದು ಆರು ಚಿತ್ರಗಳು ಮಾತ್ರ. ಅರ್ಜುನ್ ಚಿತ್ರಗಳೆಂದರೆ, ಅದು ನಿಧಾನ ಎಂಬ ತೀರ್ಮಾನಕ್ಕೆ ಗಾಂಧಿನಗರ ಬಂದುಬಿಟ್ಟಿದೆ. ಏಕೆಂದರೆ, ಅರ್ಜುನ್ ನಿರ್ದೇಶನದ ಎಲ್ಲಾ ಚಿತ್ರಗಳು ತಡವಾಗಿ ಬಿಡುಗಡೆಯಾಗಿವೆ. ‘ಮಾರ್ಟಿನ್’ ಚಿತ್ರವನ್ನೇ ತೆಗೆದುಕೊಂಡರೆ, ಈ ಚಿತ್ರ ಶುರುವಾಗಿದ್ದು 2021ರಲ್ಲಿ. ಈ ಆಗಸ್ಟ್ ಬಂದರೆ ಮೂರು ವರ್ಷಗಳಾಗುತ್ತವೆ. ಇಷ್ಟಕ್ಕೂ ಅರ್ಜುನ್ ನಿರ್ದೇಶನದ ಚಿತ್ರಗಳು ಯಾಕೆ ತಡವಾಗುತ್ತವೆ? ಈ ಕುರಿತು ಅವರೇ ‘ಮಾರ್ಟಿನ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಒಂದಿಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.
‘ನಾನು ಇದುವರೆಗೂ ಮಾಡಿದ ಐದು ಸಿನಿಮಾಗಳಲ್ಲಿ, ನಾಲ್ಕು ಹೊಸಬರಿಗೆ ಮಾಡಿದ ಚಿತ್ರಗಳು. ಹೊಸಬರು ಎಂದರೆ ಗಾಂಧಿನಗರದ ಯಾವ ನಿರ್ಮಾಪಕರು ಮತ್ತು ಫೈನಾನ್ಶಿಯರ್ಗಳು ದುಡ್ಡು ಕೊಡುವುದಿಲ್ಲ. ಸಿನಿಮಾದಲ್ಲಿ ಹೆಸರು ಬೇಕು ಎನ್ನುವವರು ಒಂದಿಷ್ಟು ದುಡ್ಡು ಕೊಡಬಹುದು. ಈ ತರಹ ಬೇರೆಯವರಿಂದ ಒಂದಿಷ್ಟು ದುಡ್ಡು ಪಡೆದು ಮಾಡಿದ್ದೇ ‘ಅದ್ದೂರಿ’, ‘ರಾಟೆ’ ಮತ್ತು ‘ಕಿಸ್’ ಚಿತ್ರಗಳು. ಇದಕ್ಕೆ ಯಾರೂ ನಿರ್ಮಾಪಕರೇ ಇರಲಿಲ್ಲ. ‘ಅದ್ದೂರಿ’ ಚಿತ್ರಕ್ಕೆ ದುಡ್ಡು ಬಂದ ಹಾಗೆ, ಅದಕ್ಕೆ ತಕ್ಕ ಹಾಗೆ ಚಿತ್ರೀಕರಣ ಮಾಡಿದ್ದೂ ಇದೆ. 60 ಸಾವಿರ ಸಿಕ್ಕರೆ, ಅದಕ್ಕೆ ತಕ್ಕ ಹಾಗೆ ಚಿತ್ರೀಕರಣ ಮಾಡುತ್ತಿದ್ದೆವು. ನಾವು ಭಿಕ್ಷೆ ಬೇಡಿದೆವು ಎನ್ನುವುದಕ್ಕಿಂತ, ಸಿನಿಮಾ ಪ್ರೀತಿ ಇದ್ದುದರಿಂದ ದುಡ್ಡು ತೆಗೆದುಕೊಂಡು ಬಂದು, ಅದಕ್ಕೆ ತಕ್ಕ ಹಾಗೆ ಚಿತ್ರೀಕರಣ ಮಾಡಿದ್ದೇವೆ. ಅದೇ ಕಾರಣಕ್ಕೆ ಚಿತ್ರ ನಿಧಾನವಾಗುತ್ತಿತ್ತು. ಒಬ್ಬ ದೊಡ್ಡ ಸ್ಟಾರ್ ನಟರಿಗೆ ಸಿನಿಮಾ ಮಾಡಿದರೆ, ಎಲ್ಲವೂ ಸಲೀಸಾಗಿ ಸಿಗುತ್ತದೆ. ಅದೇ ಹೊಸಬರಿಗೆ ಚಿತ್ರ ಮಾಡಿದಾಗ ಕಷ್ಟ. ಹಾಗಾಗಿ, ನನ್ನ ಎಲ್ಲ ಸಿನಿಮಾಗಳು ನಿಧಾನವಾಗಿವೆ’ ಎನ್ನುತ್ತಾರೆ ಅರ್ಜುನ್.
ತಮ್ಮ ಚಿತ್ರಗಳ ಪೈಕಿ ‘ಅಂಬಾರಿ’ ಚಿತ್ರ ಮಾತ್ರ ಹೆಚ್ಚು ತಡವಾಗಲಿಲ್ಲ ಎನ್ನುವ ಅರ್ಜುನ್, ‘ಆ ಚಿತ್ರಕ್ಕೆ 83 ದಿನ ಶೂಟಿಂಗ್ ಮಾಡಿದರೂ, ಒಂಬತ್ತು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಯ್ತು. ಆ ನಂತರ ‘ಅದ್ದೂರಿ’ ಒಂದೂವರೆ ವರ್ಷ ಆಯ್ತು. ‘ರಾಟೆ’ ಮತ್ತು ‘ಐರಾವತ’ ಒಟ್ಟಿಗೆ ನಡೆಯುತ್ತಿದ್ದರಿಂದ ಸ್ವಲ್ಪ ನಿಧಾನವಾಗಿ, ಎರಡೂ ಚಿತ್ರಗಳು ಒಂದೇ ವರ್ಷ ಬಿಡುಗಡೆ ಆದವು. ‘ಕಿಸ್’ ಚಿತ್ರವೂ ನಿಧಾನವಾಯ್ತು. ಅದರ ಬಜೆಟ್ ಜಾಸ್ತಿ ಆಗುತ್ತಿದ್ದಂತೆ ಮೊದಲಿದ್ದ ನಿರ್ಮಾಪಕರು ಸುಮ್ಮನಾದರು. ನಾನು ಐದು ಕೋಟಿ ಕ್ಲಿಯರ್ ಮಾಡಿ, ಚಿತ್ರ ತಗೊಂಡೆ’ ಎಂದು ತಮ್ಮ ಚಿತ್ರಗಳ ಬಗ್ಗೆ ಹೇಳುತ್ತಾರೆ ಅವರು.
ಇನ್ನು, ‘ಮಾರ್ಟಿನ್’ ಚಿತ್ರ ತಡವಾಗುವುದಕ್ಕೆ ಹಲವು ಕಾರಣಗಳಂತೆ. ‘ಮಳೆಯಿಂದ ಚಿತ್ರೀಕರಣ ವಿಳಂಬವಾಗಿದ್ದಿದೆ. ದೊಡ್ಡದೊಡ್ಡ ಸೀಕ್ವೆನ್ಸ್ಗಳು ಇದ್ದವು. ‘ಮಾರ್ಟಿನ್’ ಜೊತೆಗೆ ಧ್ರುವ, ‘ಕೆಡಿ – ದಿ ಡೆವಿಲ್’ ಚಿತ್ರದಲ್ಲೂ ನಟಿಸುತ್ತಿದ್ದರು. ಇದೆಲ್ಲದರ ಜೊತೆಗೆ ಚಿತ್ರಕ್ಕೆ ಒಟ್ಟಾರೆ 240 ದಿನಗಳ ಚಿತ್ರೀಕರಣ ಮಾಡಿದ್ದೇವೆ. ಇದರಲ್ಲಿ 50 ದಿನ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೇ ಆಗಿದೆ. ಇನ್ನು, ಚಿತ್ರಕ್ಕೆ ಮೋಕೋಬೋಟ್ ಕ್ಯಾಮೆರಾ ಬಳಿಸಿದ್ದು ಒಂದು ಹೊಸ ಅನುಭವ. ಅದರಲ್ಲಿ ಒಂದು ದಿನಕ್ಕೆ ಮೂರು ದೃಶ್ಯ ಮಾತ್ರ ಚಿತ್ರೀಕರಣ ಮಾಡುವುದಕ್ಕೆ ಸಾಧ್ಯ. ಇದರಿಂದ ಸಾಕಷ್ಟು ವಿಳಂಬವಾಗಿ 28 ದಿನ ಮುಗಿಸಬೇಕು ಅಂತ ಅಂದುಕೊಂಡಿದ್ದು 38 ದಿನ ಆಯ್ತು. ಹೀಗೆ ಚಿತ್ರ ತಡವಾಗುವುದಕ್ಕೆ ಸಾಕಷ್ಟು ಕಾರಣಗಳಿವೆ’ ಎಂದು ಅರ್ಜುನ್ ವಿವರಿಸುತ್ತಾರೆ.


