ಹೊಸ ಹೀರೋಗೆ ಯಾರು ಇಷ್ಟು ಬಜೆಟ್‍ ಇಡಲ್ಲ: ಇಂದ್ರಜಿತ್

ಚಂದನವನ, ಸಂದರ್ಶನ, ಸಿನಿ ಸುದ್ದಿ

ಟೀಸರ್ ನೋಡಿದವರೆಲ್ಲ ಇದೊಂದು ಆ್ಯಕ್ಷನ್‍ ಚಿತ್ರವಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ‘ಗೌರಿ’ ಒಂದು ಆ್ಯಕ್ಷನ್‍ ಚಿತ್ರವಲ್ಲ, ಸಂಗೀತಮಯ ಚಿತ್ರ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್‍ ಲಂಕೇಶ್.

ಕಳೆದ ವರ್ಷ ಪ್ರಾರಂಭವಾದ ‘ಗೌರಿ’ ಈಗ ಪೋಸ್ಟ್ ಪ್ರೊಡಕ್ಷನ್‍ ಹಂತದಲ್ಲಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟೀಸರ್‍ ಮತ್ತು ‘ಟೈಮ್‍ ಬರತ್ತೆ’ ಎಂಬ ಹಾಡನ್ನು ಇಂದ್ರಜಿತ್‍ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಅವರು ಎದುರು ನೋಡುತ್ತಿದ್ದಾರೆ.

‘ಗೌರಿ’ ಕುರಿತು ಮಾತನಾಡುವ ಇಂದ್ರಜಿತ್‍, ‘ಚಿತ್ರದ ಟೀಸರ್‍ನಲ್ಲಿ ಆ್ಯಕ್ಷನ್‍ ನೋಡಿ, ಇದೊಂದು ಆ್ಯಕ್ಷನ್‍ ಚಿತ್ರ ಎಂದನಿಸಬಹುದು. ಚಿತ್ರಕ್ಕೆ ಎಷ್ಟು ಫೈಟ್‍ಗಳು ಬೇಕೋ ಅವು ಚಿತ್ರದಲ್ಲಿದೆ. ಆದರೆ, ಇದೊಂದು ಸಂಗೀತಮಯ ಚಿತ್ರ. ಇತ್ತೀಚಿನ ದಿನಗಳಲ್ಲಿ ಯಾರೂ ಮ್ಯೂಸಿಕಲ್‍ ಸಿನಿಮಾಗಳನ್ನು ಮಾಡುವುದಿಲ್ಲ. ಅಂಥ ಚಿತ್ರ ಮಾಡಬೇಕೆಂದರೆ ಬಜೆಟ್‍ ಹೆಚ್ಚಾಗುತ್ತದೆ. ಚಿತ್ರೀಕರಣ, ಸಂಗೀತ ಸಂಯೋಜನೆ, ಸೆಟ್‍, ಫಾರಿನ್‍ ಚಿತ್ರೀಕರಣ, ಡ್ಯಾನ್ಸರ್ಸ್ … ಇವೆಲ್ಲದರಿಂದ ಬಜೆಟ್‍ ವಿಪರೀತ ಹೆಚ್ಚಾಗುತ್ತದೆ. ಅದೇ ಕಾರಣಕ್ಕೆ ಸಿನಿಮಾಗಳಲ್ಲಿ ಹಾಡುಗಳನ್ನು ಬಳಸಿಕೊಳ್ಳುವುದೇ ಕಡಿಮೆಯಾಗಿದೆ. ನಾನು ಆ ಬಗ್ಗೆ ಯೋಚಿಸಲಿಲ್ಲ’ ಎನ್ನುತ್ತಾರೆ ಇಂದ್ರಜಿತ್‍.

ಈ ಚಿತ್ರದಲ್ಲಿ ಏಳು ಹಾಡುಗಳು ಇರುತ್ತವೆ ಎನ್ನುವ ಅವರು, ‘ಕಥೆಗೆ ಬೇಕಾಗಿದ್ದರಿಂದ ಏಳು ಹಾಡುಗಳನ್ನಿಟ್ಟಿದ್ದೇನೆ. ನಾಲ್ಕು ಸಂಗೀತ ನಿರ್ದೇಶಕರು, 14 ಗಾಯಕರು, ಐವರು ಗೀತರಚನೆಕಾರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಬಜೆಟ್‍ ಜಾಸ್ತಿ ಆಗಿದೆ. ಒಬ್ಬ ಹೊಸ ಹೀರೋಗೆ ಯಾರೂ ಇಷ್ಟು ದೊಡ್ಡ ಬಜೆಟ್‍ ಹಾಕಿ ಸಿನಿಮಾ ಮಾಡುವುದಿಲ್ಲ. ನನ್ನ ಮಗ ಎಂದು ಇಷ್ಟು ಬಜೆಟ್‍ ಹಾಕಿಲ್ಲ. ಕಥೆಗೆ ಅವಶ್ಯಕತೆ ಇತ್ತು’ ಎನ್ನುತ್ತಾರೆ ಇಂದ್ರಜಿತ್‍ ಲಂಕೇಶ್‍.

‘ಗೌರಿ’ ಚಿತ್ರಕ್ಕೆ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ರೀ-ರೆಕಾರ್ಡಿಂಗ್ ಮಾಡಿದ್ದಾರೆ. ವಿ. ನಾಗೇಂದ್ರಪ್ರಸಾದ್, ಕವಿರಾಜ್, ಕೆ. ಕಲ್ಯಾಣ್, ವರದರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ , ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ, ಪ್ರಜ್ಞಾ ಮರಾಠೆ, ಸಮರ್ಜಿತ್ ಮುಂತಾದವರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಸಮರ್ಜಿತ್‍ ಲಂಕೇಶ್‍, ಸಾನ್ಯಾ ಅಯ್ಯರ್, ನೀನಾಸಂ ಅಶ್ವಥ್, ಮಾನಸೀ ಸುಧೀರ್‍, ಸಂಪತ್‍ ಮೈತ್ರೇಯಾ ಮುಂತಾದವರು ನಟಿಸಿರುವ ‘ಗೌರಿ’ ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್‍ ಛಾಯಾಗ್ರಹಣ ಮಾಡಿದ್ದಾರೆ. ಮಾಸ್ತಿ ಉಪ್ಪಾರಳ್ಳಿ, ರಾಜಶೇಖರ್ ಹಾಗೂ ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.

ಅದೇ ಆಕ್ರೋಶ; ಅದೇ ಶೈಲಿ, ಆದರೆ ಹೊಸ ಜಡ್ಜ್​ಮೆಂಟ್!

Discover more from KannadaScreens

Subscribe now to keep reading and get access to the full archive.

Continue reading