ರವಿಚಂದ್ರನ್ ಹೀರೋ ಆಗಿ ಅಭಿನಯಿಸಿಸದ ಚಿತ್ರವೊಂದು ಬಿಡುಗಡೆಯಾಗದೆ ಎರಡು ವರ್ಷಗಳೇ ಆಗಿತ್ತು. ‘ರವಿ ಬೋಪಣ್ಣ’ ನಂತರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಯಾವುದೇ ಚಿತ್ರ ಬಿಡುಗಡೆ ಆಗಿರಲಿಲ್ಲ. ಈಗ ಅವರು ಇದೇ ಮೇ 24ರಂದು ಲಾಯರ್ ಆಗಿ ‘ದಿ ಜಡ್ಜ್ಮೆಂಟ್’ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ.
‘ದಿ ಜಡ್ಜ್ಮೆಂಟ್’ ಒಂದು ಲೀಗಲ್ ಥ್ರಿಲ್ಲರ್ ಸಿನಿಮಾ. ಒಬ್ಬ ನಿರಪರಾಧಿಯನ್ನು ಶಿಕ್ಷೆಯಿಂದ ಪಾರು ಮಾಡುವ ಒಬ್ಬ ನ್ಯಾಯವಾದಿಯ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಆ್ಯಂಡ್ ಎಂಟರ್ಟೈನ್ಮೆಂಟ್ನಡಿ ಶರದ್ ನಾಡಗೌಡ, ರಾಮು ರಾಯಚೂರು, ವಿಶ್ವನಾಥ್ ಗುಪ್ತ, ರಾಜಶೇಖರ ಪಾಟೀಲ್ ಮತ್ತು ಗುರುರಾಜ್ ಕುಲಕರ್ಣಿ ನಿರ್ಮಿಸಿದ್ದಾರೆ. ಗುರುರಾಜ್ ಕುಲಕರ್ಣಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದು ರವಿಚಂದ್ರನ್ ಅವರಿಗೆಂದೇ ಬರೆದ ಕಥೆ ಎನ್ನುವ ಗುರುರಾಜ್ ಕುಲಕರ್ಣಿ, ‘ಎಲ್ಲರಂತೆ ನಾನು ಸಹ ಅವರ ಸ್ಟೈಲ್ ಮೆಚ್ಚಿಕೊಂಡವನು. ಅವರ ಮಾತಾಡುವ ಶೈಲಿ, ಸ್ಟೈಲ್ ಸಶಕ್ತವಾಗಿ ಬಳಸಿಕೊಳ್ಳುವ ಒಂದು ಕಥೆ ಬರೆದಿದ್ದೆ. ‘ಯುದ್ಧಕಾಂಡ’ ಚಿತ್ರದಲ್ಲಿನ ರವಿಚಂದ್ರನ್ ಅವರ ಆಕ್ರೋಶ, ಕಣ್ಣೊಳಗಿನ ಕೆಂಪು, ಧ್ವನಿ … ಅವೆಲ್ಲವನ್ನೂ ಇಲ್ಲಿ ಮಾಗಿದ ರೂಪದಲ್ಲಿ ನೋಡಬಹುದು. ಅದೇ ಆಕ್ರೋಶ, ಅದೇ ಶೈಲಿ, ಆದರೆ ಮಾಗಿದ ರೂಪದಲ್ಲಿ ಅವರು ಕೊಟ್ಟಿದ್ದಾರೆ. ಇದು ಹೊಸ ತರಹದ ರವಿಚಂದ್ರನ್ ಸಿನಿಮಾ. ಅವರೆದುರು ನಾನು ಹೊಸಬ. ನನ್ನಂತಹ ಹೊಸಬನಿಗೆ ಅವಕಾಶ ಕೊಟ್ಟ ಅವರಿಗೆ ಧನ್ಯವಾದಗಳು’ ಎನ್ನುತ್ತಾರೆ.
ಈ ಚಿತ್ರದಲ್ಲಿ ರವಿಚಂದ್ರನ್ ಸೇರಿದಂತೆ ಆರು ನಿರ್ದೇಶಕರು ಕೆಲಸ ಮಾಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು. ‘ಇಲ್ಲಿ ಆರು ನಿರ್ದೇಶಕರನ್ನು ನಿರ್ದೇಶಿಸಬೇಕಿತ್ತು. ಎಲ್ಲರೂ ನಾನು ಕೊಟ್ಟ ಸಲಹೆ, ಸೂಚನೆಗಳನ್ನು ತೆಗೆದುಕೊಂಡು, ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
‘ದಿ ಜಡ್ಜ್ಮೆಂಟ್’ ನ ದೊಡ್ಡ ಸರ್ಪ್ರೈಸ್ ಎಂದರೆ ಅದು ದಿಗಂತ್ ಎನ್ನುವ ಅವರು, ‘ದಿಗಂತ್ ಬಹಳ ಒಳ್ಳೆಯ ನಟ. ಮುಂದೆ ಬೇರೆ ನಿರ್ದೇಶಕರು ಅವರ ಪ್ರತಿಭೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕು ಎಂಬುದು ನನ್ನ ಆಸೆ. ನಟನೆ ಜೊತೆಗೆ ಆ್ಯಕ್ಷನ್ ಮತ್ತು ನೃತ್ಯ ಎರಡನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರೊಬ್ಬ ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
‘ದಿ ಜಡ್ಜ್ಮೆಂಟ್’ ಚಿತ್ರದಲ್ಲಿ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ನಟಿಸಿದ್ದಾರೆ.
ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ.


