ಮೇ 10ರಂದು ಶರಣ್ ಅಭಿನಯದ ‘ಛೂ ಮಂತರ್’ ಚಿತ್ರ ಬಿಡುಗಡೆ ಆಗಬೇಕಿತ್ತು. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳಿವೆ ಎನ್ನುವಾಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯ್ತು. ಹಾಗೆ ಈ ಚಿತ್ರ ಮುಂದಕ್ಕೆ ಹೋಗುತ್ತಿರುವುದು ಇದು ಎರಡನೇ ಸಲ. ಇಷ್ಟಕ್ಕೂ ಪೋಸ್ಟ್ಫೋನ್ ಆಗಿದ್ದು ಯಾಕೆ? ಎಂದರೆ ವ್ಯಾಪಾರ ಆಗಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’, ಪ್ರಜ್ವಲ್ ಅಭಿನಯದ ‘ಮಾಫಿಯಾ’ ಬಗ್ಗೆಯೂ ಇಂಥದ್ದೊಂದು ಮಾತಿದೆ. ಈ ಚಿತ್ರಗಳು ಸಿದ್ಧವಾಗಿ ಕೆಲವು ತಿಂಗಳುಗಳೇ ಕಳೆದಿವೆ. ಆದರೆ, ಚಿತ್ರತಂಡಗಳು ಮಾತ್ರ ಬಿಡುಗಡೆ ಮಾಡುವ ಮನಸ್ಸು ಮಾಡುತ್ತಿಲ್ಲ. ಚಿತ್ರದ ಟಿವಿ, ಓಟಿಟಿ ಸೇರಿದಂತೆ ಯಾವುದೇ ಹಕ್ಕುಗಳೂ ವ್ಯಾಪಾರವಾಗದ ಕಾರಣ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಇದು ಬರೀ ಇವಿಷ್ಟೇ ಚಿತ್ರಗಳಲ್ಲ, ಇಂಥ ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿವೆ. ಇವೆಲ್ಲಾ ತಯಾರಾಗಿ ಎಷ್ಟೋ ಸಮಯವಾಗಿವೆ. ಆದರೆ, ಬಿಡುಗಡೆಯಾಗುತ್ತಿಲ್ಲ. ಚಿತ್ರ ಶುರುವಾದಾಗ ಒಂದು ಬಜೆಟ್, ಮುಗಿದಾಗ ಇನ್ನೊಂದು. ವ್ಯಾಪಾರವಾದರೆ ನಿರ್ಮಾಪಕರು ಸೇಫ್. ಇಲ್ಲವಾದರೆ ಕಷ್ಟ. ಆದರೆ, ಯಾವ ಚಾನಲ್ ಸಹ ಕನ್ನಡ ಚಿತ್ರಗಳ ಸ್ಯಾಟಿಲೈಟ್ ಹಕ್ಕುಗಳನ್ನು ಕೊಳ್ಳುವುದಕ್ಕೆ ಮುಂದೆ ಬರುತ್ತಿಲ್ಲ. ಒಂದು ಪಕ್ಷ ಚಿತ್ರ ಗೆದ್ದರೆ ನೋಡೋಣ ಎಂದು ಕಾದು ನೋಡುತ್ತಿವೆ. ವ್ಯಾಪಾರವಾಗದೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡಗಳಿಗೂ ಭಯ. ಏಕೆಂದರೆ, ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲದಿದ್ದರೆ, ಆಗ ಚಿತ್ರವನ್ನು ಕೇಳುವವರೇ ಇಲ್ಲವಾಗುತ್ತದೆ. ಹಾಗಾಗಿ, ಒಂದಿಷ್ಟು ದಿನ ಕಾದು ನೋಡುವ ತಂತ್ರವನ್ನು ನಿರ್ಮಾಪಕರು ಮಾಡುತ್ತಿದ್ದಾರೆ. ಇದೆಲ್ಲದರಿಂದ ಬಡವಾಗುತ್ತಿರುವುದು ಚಿತ್ರಗಳು.
ಕನ್ನಡದಲ್ಲಂತೂ ಸ್ಯಾಟಿಲೈಟ್ ಮಾರುಕಟ್ಟೆ ಸಂಪೂರ್ಣವಾಗಿ ಕುಸಿದಿದೆ. ಕಳೆದ ವರ್ಷ 220 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ 20 ಚಿತ್ರಗಳು ಸಹ ಮಾರಾಟವಾಗಿಲ್ಲ. ಕನ್ನಡದಲ್ಲಿ ಜೀ, ಉದಯ, ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ, ಸಿರಿಕನ್ನಡ ಸೇರಿದಂತೆ ಒಂದಿಷ್ಟು ಮನರಂಜನಾ ಚಾನಲ್ಗಳಿವೆ, ಉದಯ ಮೂವೀಸ್, ಜೀ ಪಿಕ್ಚರ್, ಕಲರ್ಸ್ ಕನ್ನಡ ಸಿನಿಮಾ, ಸ್ಟಾರ್ ಸುವರ್ಣ ಪ್ಲಸ್ ಸೇರಿದಂತೆ ಒಂದಿಷ್ಟು ಸಿನಿಮಾ ಚಾನಲ್ಗಳೇ ಇವೆ. ಈ ಚಾನಲ್ಗಳು 24 ಗಂಟೆ ಚಿತ್ರಗಳು ಪ್ರಸಾರ ಮಾಡುತ್ತಿವೆ. ದಿನಕ್ಕೆ 30 ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತದೆ. ಆದರೆ, ಹೊಸ ಚಿತ್ರಗಳನ್ನು ಮಾತ್ರ ಕೇಳುವವರೇ ಇಲ್ಲ. ಕೆಲವು ಚಿತ್ರಗಳು ಎರಡ್ಮೂರು ಲಕ್ಷಕ್ಕೆ ಮಾರಾಟವಾಗಿ, ಗ್ರಾಂಡ್ ಟೆಲಿವಿಷನ್ ಪ್ರೀಮಿಯರ್ ಹೆಸರಲ್ಲಿ ಬಿಡುಗಡೆ ಆಗುವುದೂ ಇದೆ. ಮಿಕ್ಕಂತೆ ಬೇರೆ ಚಿತ್ರಗಳನ್ನು ಕೇಳುವವರೇ ಇಲ್ಲ.
ಒಂದು ಕಾಲಕ್ಕೆ ಕನ್ನಡದಲ್ಲಿ ಸ್ಯಾಟಿಲೈಟ್ ಮಾರುಕಟ್ಟೆ ಬಹಳ ಚೆನ್ನಾಗಿತ್ತು. ಹೊಸಹೊಸ ಚಿತ್ರಗಳು ಬೇಕಾಗಿದ್ದರಿಂದ ಮುಹೂರ್ತದ ದಿನವೇ ಕೆಲವು ಚಾನಲ್ನವರು ಅಡ್ವಾನ್ಸ್ ಕೊಟ್ಟು ಹಕ್ಕು ಖರೀದಿಸುತ್ತಿದ್ದುದೂ ಉಂಟು. ಇದನ್ನು ಕೆಲವರು ದುರಪಯೋಗ ಪಡಿಸಿಕೊಂಡಿದ್ದೂ ಇದೆ. ಕೆಲವರು ಅಡ್ವಾನ್ಸ್ ಪಡೆದು ಚಿತ್ರವನ್ನು ಹೇಗೇಗೋ ಸುತ್ತಿದರೆ, ಇನ್ನೂ ಕೆಲವರು ಚಿತ್ರವನ್ನೇ ಪೂರ್ತಿ ಮಾಡುತ್ತಿರಲಿಲ್ಲ. ಇದರಿಂದ ಚಾನಲ್ನವರಿಗೆ ಏನೂ ಗಿಟ್ಟುತ್ತಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಚಾನಲ್ನವರು ಸ್ವಲ್ಪ ಹುಷಾರಾದರು. ಬಿಡುಗಡೆ ಸಮಯದಲ್ಲಿ ಆ ಚಿತ್ರಕ್ಕಿದ್ದ ನಿರೀಕ್ಷೆ ನೋಡಿ ಚಿತ್ರಗಳ ಹಕ್ಕುಗಳನ್ನು ಕೊಂಡುಕೊಳ್ಳತೊಡಗಿದರು. ಆಗಲೂ ಒಂದಿಷ್ಟು ನಟರ ಚಿತ್ರಗಳಿಗೆ ಒಳ್ಳೆಯ ಬೇಡಿಕೆ ಇತ್ತು. ಬರೀ ನಾಲ್ಕೈದು ಸ್ಟಾರ್ ನಟರಷ್ಟೇ ಅಲ್ಲ, ಆ ನಂತರ ಒಂದಿಷ್ಟು ಹೀರೋಗಳ ಚಿತ್ರಗಳ ಹಕ್ಕುಗಳನ್ನು ಸಹ ಕೊಂಡುಕೊಳ್ಳಲಾಗುತ್ತಿತ್ತು.
ಒಟ್ಟಾರೆ ಇದೆಲ್ಲದರಿಂದ ಪ್ರತೀ ವರ್ಷ ಕೋಟ್ಯಂತರ ವ್ಯವಹಾರ ನಡೆಯುತ್ತಿತ್ತು. ದೊಡ್ಡದೊಡ್ಡ ಹೀರೋಗಳ ಚಿತ್ರಗಳ ಹಕ್ಕುಗಳು ಚಿತ್ರದಿಂದ ಚಿತ್ರಕ್ಕೆ ಹೆಚ್ಚುತ್ತಿತ್ತು. ಇದರಿಂದೆ ಕೆಲವರು ಸಂಭಾವನೆ ಪಡೆಯದೆ, ಸ್ಯಾಟಿಲೈಟ್ ಹಕ್ಕುಗಳಿಂದ ಬರುವ ಹಣವನ್ನೇ ತಮ್ಮ ಸಂಭಾವನೆಯನ್ನಾಗಿ ಪಡೆದಿದ್ದೂ ಇದೆ. ಇದರಿಂದ ನಿರ್ಮಾಪಕರಿಗೂ ಒಂದರ್ಥದಲ್ಲಿ ಸಹಾಯವಾಗುತ್ತಿತ್ತು. ಏಕೆಂದರೆ, ಮೊದಲಿಗೇ ನಾಯಕರಿಗೆ ದೊಡ್ಡ ಸಂಭಾವನೆ ಕೊಡುವುದು ತಪ್ಪುತ್ತಿತ್ತು. ಆ ಹಣದಲ್ಲೇ ಚಿತ್ರಕ್ಕೆ ಬಳಸಿಕೊಳ್ಳಬಹುದಾಗಿತ್ತು. ಹಾಗಾಗಿ, ಹೀರೋಗಳು, ನಿರ್ಮಾಪಕರು ಎಲ್ಲರೂ ಖುಷಿಯಾಗಿದ್ದರು.
ಆದರೆ, ಡಬ್ಬಿಂಗ್ನಿಂದ ಕಿರುತೆರೆಯ ಮಾರುಕಟ್ಟೆಯೇ ಕುಸಿದಿದೆ. ಕೆಲವು ವರ್ಷಗಳ ಹಿಂದೆ ಕನ್ನಡಕ್ಕೆ ಡಬ್ಬಿಂಗ್ ಸಂಸ್ಕೃತಿ ಬಂದಾಗ, ಅದರಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಅಪಾಯವಾಗಬಹುದು ಎಂಬ ಭಯ ಯಾರಿಗೂ ಇರಲಿಲ್ಲ. ಏಕೆಂದರೆ, ಕನ್ನಡದಲ್ಲಿ ಡಬ್ಬಿಂಗ್ ಸಂಸ್ಕೃತಿ ಇಲ್ಲದಿರುವುದರಿಂದ, ಡಬ್ಬಿಂಗ್ ಚಿತ್ರ ಬಿಡುಗಡೆಯಾದರೂ, ಯಾರೂ ದುಡ್ಡು ಕೊಟ್ಟು ಚಿತ್ರ ನೋಡುವುದಿಲ್ಲ, ನೇರವಾಗಿ ಅದೇ ಭಾಷೆಯಲ್ಲೇ ನೋಡುತ್ತಾರೆ ಎಂಬ ಖಾತ್ರಿ ಇತ್ತು. ಆದರೆ, ಅದೇ ಕಿರುತೆರೆಯ ವಿಷಯದಲ್ಲಿ ಇರಲಿಲ್ಲ. ಏಕೆಂದರೆ, ಟಿವಿ ನೋಡುವುದಕ್ಕೆ ದುಡ್ಡು ಕೊಡಬೇಕಿಲ್ಲ. ಪುಕ್ಕಟ್ಟೆಯಾಗಿ ಸಿಗುವುದರಿಂದ ಮತ್ತು ಜನ ಏನು ಬೇಕಾದರೂ ನೋಡುವ ಸಾಧ್ಯತೆ ಇರುವುದರಿಂದ, ಕಿರುತೆರೆಯಲ್ಲಿ ಡಬ್ಬಿಂಗ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ಪ್ರಸಾರವಾಗಬಹುದು ಮತ್ತು ಇದರಿಂದ ಕನ್ನಡ ಚಿತ್ರಗಳಿಗೆ ಅನ್ಯಾಯವಾಗಬಹುದು ಎಂಬ ಭಯ ಚಿತ್ರರಂಗದಲ್ಲಿ ಇದ್ದೇ ಇತ್ತು. ಅದೀಗ ನಿಜವಾಗಿದೆ.
ಅದಕ್ಕೆ ಸರಿಯಾಗಿ ಇವತ್ತು ಯಾವುದೇ ಕನ್ನಡ ಸಿನಿಮಾ ಚಾನಲ್ ನೋಡಿದರೂ ಬರೀ ಡಬ್ಬಿಂಗ್ ಚಿತ್ರಗಳೇ ಕಾಣುತ್ತವೆ. ರಾಮ್ ಚರಣ್ ತೇಜ, ಜ್ಯೂನಿಯರ್ ಎನ್.ಟಿ.ಆರ್, ವಿಜಯ್, ಅಜಿತ್ ಮುಂತಾದವರ ಚಿತ್ರಗಳೇ ರಾರಾಜಿಸುತ್ತಿವೆ. ಕನ್ನಡ ಚಿತ್ರಗಳನ್ನು ನಾಮ್ ಕಾ ವಾಸ್ತೆ ಪ್ರಸಾರ ಮಾಡಲಾಗುತ್ತಿದೆ. ಕನ್ನಡದ ಬಹುತೇಕ ಎಲಾ ಚಾನಲ್ಗಳು ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲೂ ಅಸ್ತಿತ್ವದಲ್ಲಿರುವುದರಿಂದ, ಅಲ್ಲಿ ಆಯಾ ಭಾಷೆಯ ಮತ್ತು ನಟರ ಚಿತ್ರಗಳು ಹಕ್ಕುಗಳನ್ನು ಪಡೆಯುವಾಗಲೇ ಡಬ್ಬಿಂಗ್ ಸೇರಿ ಬರೆಸಿಕೊಳ್ಳಲಾಗುತ್ತದೆ. ಹಕ್ಕು ಇರುವುದರಿಂದ ಕೆಲವೇ ಲಕ್ಷಗಳಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಮುಗಿಸಿ ಚಿತ್ರ ಪ್ರದರ್ಶನ ಮಾಡಬಹುದು. ಇದರಿಂದ ಕಂಟೆಂಟ್ ಸಹ ಬಹಳ ಸುಲಭಕ್ಕೆ ಸಿಗುತ್ತದೆ ಮತ್ತು ಲಕ್ಷ ಅಥವಾ ಕೋಟಿ ಹಾಕಿ ಕನ್ನಡ ಚಿತ್ರಗಳ ಹಕ್ಕುಗಳನ್ನು ಖರೀದಿಸುವುದು ಸಹ ತಪ್ಪುತ್ತದೆ. ಹಾಗಾಗಿಯೇ, ಕನ್ನಡ ಚಿತ್ರಗಳನ್ನು ಕೇಳುವವರಿಲ್ಲ ಎನ್ನುವಂತಾಗಿದೆ.
ಬರೀ ಚಾನಲ್ಗಳಷ್ಟೇ ಅಲ್ಲ, ಕೆಲವರು ದೊಡ್ಡ ಮಟ್ಟದಲ್ಲಿ ಕಡಿಮೆ ಬೆಲೆಗೆ ಹಕ್ಕುಗಳನ್ನು ಪಡೆದು, ಡಬ್ಬಿಂಗ್ ಮಾಡಿ ಚಾನಲ್ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬರೀ ಹೊಸ ಚಿತ್ರಗಳಷ್ಟೇ ಅಲ್ಲ, ಕಡಿಮೆ ಬೆಲೆಗೆ ಯಾವ್ಯಾವ ಚಿತ್ರಗಳು ಸಿಗುತ್ತವೋ ಅವೆಲ್ಲವನ್ನೂ ಹೆಕ್ಕಿ ಡಬ್ ಮಾಡಿ, ಪ್ರದರ್ಶನ ಮಾಡಲಾಗುತ್ತಿದೆ. ಸೆನ್ಸಾರ್ ಮಂಡಳಿಯವರು ಕನ್ನಡದ ಚಿತ್ರಗಳನ್ನು ನೇರವಾಗಿ ಸೆನ್ಸಾರ್ ಮಾಡುವುದಕ್ಕಿಂತ, ಡಬ್ಬಿಂಗ್ ಚಿತ್ರಗಳನ್ನು ಸೆನ್ಸಾರ್ ಮಾಡುವ ಸಂಖ್ಯೆಯೇ ಹೆಚ್ಚಾಗುತ್ತಿದೆ. ಪ್ರತಿ ದಿನ ಮೂರರಿಂದ ನಾಲ್ಕು ಚಿತ್ರಗಳನ್ನು ಮಂಡಳಿಯವರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷವೊಂದೇ 150ಕ್ಕೂ ಹೆಚ್ಚು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳು ಸೆನ್ಸಾರ್ ಆಗಿದ್ದು, ಅವೆಲ್ಲವೂ ಬೇರೆಬೇರೆ ಚಾನಲ್ಗಳಲ್ಲಿ ಪ್ರಸಾರವಾಗುತ್ತಿವೆ. ಅದರ ಹಿಂದೆ
ಹೀಗೆ ಸುಲಭವಾಗಿ ಕಂಟೆಂಟ್ ಸಿಗುತ್ತಿರುವಾಗ ಯಾರು ತಾನೆ ಸ್ಯಾಟಿಲೈಟ್ ಹಕ್ಕುಗಳನ್ನು ಕೊಳ್ಳುತ್ತಾರೆ ಹೇಳಿ? ಹಾಗಾಗಿಯೇ, ಇಂದು ಕನ್ನಡ ಚಿತ್ರಗಳು ಯಾವ ಚಾನಲ್ಗೂ ಬೇಡ ಎಂಬ ಪರಿಸ್ಥಿತಿ ಎದುರಾಗಿದೆ. ಸ್ಯಾಟಿಲೈಟ್ ಹಕ್ಕುಗಳಿಂದ ಒಂದಿಷ್ಟು ಹಣ ಬರುತ್ತದೆ ಎಂದು ನಂಬಿ ನಿರ್ಮಾಪಕರಾಗುವವರಿಗೆ ಇದು ಗೊತ್ತಿರಲಿ …
ಮುಂದುವರೆಯುವುದು …


