‘ಕಾರಂಜಿ’ ಚಿತ್ರದಿಂದ ಶುರುವಾದ ವೀರ್ ಸಮರ್ಥ್ ಅವರ ಜರ್ನಿ ಇದುವರೆಗೂ ಯಶಸ್ವಿಯಾಗಿ ಮುಂದುವರೆದಿದೆ. ಕಳೆದ 15 ವರ್ಷಗಳಲ್ಲಿ 45 ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದರೂ, ಇದುವರೆಗೂ ಯಾವೊಂದು ಚಿತ್ರ ಸಹ ದೊಡ್ಡ ಮಟ್ಟದ ಹಿಟ್ ಆಗಿರಲಿಲ್ಲ. ಹಿಟ್ ಆಗದೇ ವೀರ್ ಸಮರ್ಥ್ ಸಹ ಅಗಾಧ ಪ್ರತಿಭೆ ಇದ್ದರೂ ತೆರೆಮರೆಯಲ್ಲಿಯೇ ಉಳಿದುಬಿಟ್ಟಿದ್ದರು.
ಈಗ 15 ವರ್ಷಗಳ ನಂತರ, 45 ಚಿತ್ರಗಳ ಬಳಿಕ, ವೀರ್ ಸಮರ್ಥ್ ಮೊದಲ ಬಾರಿಗೆ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ಒಂದು ದೊಡ್ಡ ಹಿಟ್ ನೋಡಿದ್ದಾರೆ. ಚಿತ್ರವು 25 ದಿನಗಳ ಪ್ರದರ್ಶನ ಕಂಡಿರುವುದಷ್ಟೇ ಅಲ್ಲ, ಚಿತ್ರದ ಹಾಡುಗಳ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಹೀಗೆ ಬಹಳ ವಿರಳವಾಗಿ ಸಿಕ್ಕ ಯಶಸ್ಸಿನಿಂದ ವೀರ್ ಸಹಜವಾಗಿಯೇ ಸಂತೋಷವಾಗಿದ್ದಾರೆ ಮತ್ತು ಅದರ ಜೊತೆಗೆ ಭಾವುಕರಾಗಿದ್ದಾರೆ. ಈ ಕುರಿತು ಚಿತ್ರದ ಸಂತೋಷ ಕೂಟದಲ್ಲಿ ಮಾತನಾಡಿರುವ ಅವರು, ‘ಇದು ನನ್ನ ಚಿತ್ರ ಜೀವನದ ಮೊದಲ ಹಿಟ್ ಚಿತ್ರ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದು ಯಶಸ್ಸನ್ನು ನೋಡುತ್ತಿದ್ದೇನೆ. ಚಿತ್ರದ ಹಾಡುಗಳನ್ನು ಜನ ಮೆಚ್ಚಿದ್ದಾರೆ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಬಹಳಷ್ಟು ಜನ ಈ ಬಾರಿ ನನಗೆ ರಾಜ್ಯ ಪ್ರಶಸ್ತಿ ಸಿಗಬೇಕು ಅಂತ ಹೇಳುತ್ತಿದ್ದಾರೆ. ನನ್ನ ವೃತ್ತಿಜೀವನದಲ್ಲಿ ‘ಕಾರಂಜಿ’ ಮತ್ತು ‘ದ್ಯಾವ್ರೇ’ ಎರಡು ವಿಭಿನ್ನವಾದ ಚಿತ್ರಗಳು. ಆದರೆ, ಆ ಚಿತ್ರಗಳಿಗೆ ಪ್ರಶಸ್ತಿ ಬರಲಿಲ್ಲ. ಇದು ಸಹ ಒಂದು ವಿಭಿನ್ನವಾದ ಚಿತ್ರ. ಸಾಕಷ್ಟು ಪ್ರಯೋಗ ಮಾಡಿದ್ದೇನೆ’ ಎನ್ನುತ್ತಾರೆ ವೀರ್.
ಈ ಚಿತ್ರದಲ್ಲಿ ಮಾಡಿರುವ ಪ್ರಯೋಗ ಮತ್ತು ಇರುವ ವೆರೈಟಿ, ಇತ್ತೀಚಿನ ವರ್ಷಗಳಲ್ಲೇ ಯಾವುದೇ ಚಿತ್ರದಲ್ಲೂ ಆಗಿಲ್ಲ ಎನ್ನುವ ವೀರ್, ‘ಮೆಲೋಡಿ, ಸೂಫಿ, ದಾಸರ ಪದ, ತತ್ವಪದ, ಗಜಲ್, ರಾಜಸ್ಥಾನಿ ಜಾನಪದ ಸಂಗೀತ … ಹೀಗೆ ಬಹಳ ವೆರೈಟಿ ಇರುವ ಚಿತ್ರ ಿದು. ಈ ತರಹದ ಪ್ರಯೋಗ ಬಹಳ ಅಪರೂಪವಾಗುತ್ತದೆ. ಇದಕ್ಕೆ ನಿರ್ದೇಶಕ ಸುನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ನಾನು ಇಂಥದ್ದೊಂದು ಅವಕಾಶ ಸಿಗಬಹುದು ಅಂತ ಅಂದುಕೊಂಡಿರಲಿಲ್ಲ ಅವರು ಬಂದು ನನ್ನ ಬಳಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕು ಎಂದು ಹೇಳಿದಾಗ ನನಗೆ ಆತಂಕ ಆಯಿತು. ಅವರು ಯಶಸ್ವಿ ನಿರ್ದೇಶಕ. ಅವರ ಚಿತ್ರಕ್ಕೆ ನನಗೆ ಸಂಗೀತ ಕೊಡುವುದಕ್ಕೆ ಕೇಳುತ್ತಿದ್ದಾರೆ. ನಾನು ನ್ಯಾಯ ಸಲ್ಲಿಸಬಹುದಾ? ಎಂಬ ಭಯ ಇತ್ತು. ಆದರೆ, ಇವತ್ತು ಎಲ್ಲೆಡೆಯಿಂದ ಪ್ರಶಂಸೆ ಕೇಳಿ ಬರುತ್ತಿದೆ. ಈ ತರಹದ ಪ್ರಶಂಸೆಯನ್ನು ನಾನು ನನ್ನ ವೃತ್ತಿ ಜೀವನದಲ್ಲೇ ನೋಡಿರಲಿಲ್ಲ’ ಎಂದು ಭಾವುಕರಾದರು ವೀರ್.
‘ಒಂದು ವಿರಳವಾದ ಯಶಸನ್ನು ಸರಳವಾದ ಪ್ರೇಮ ಕಥೆ ಕೊಟ್ಟಿದೆ’ ಎನ್ನುವ ವೀರ್, ‘ಸುನಿ ಮೊದಲ ಬಾರಿ ನನ್ನ ಬಳಿ ಬಂದಾಗ ಒಂದು ಮ್ಯೂಸಿಕಲ್ ಸಿನಿಮಾ ಮಾಡಬೇಕು ಅಂತ ಹೇಳಿದರು. ಅದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಅವರು ‘ಕಾರಂಜಿ’ ಹಾಡುಗಳನ್ನು ಬಹಳ ಇಷ್ಟಪಟ್ಟಿರುವುದಾಗಿ ಹೇಳಿದರು. ಇದುವರೆಗೂ ನನ್ನ ತಾಕತ್ ತೋರಿಸಬೇಕು ಅಂತ ಆಸೆ ಇತ್ತಾದರೂ, ಬಹಳಷ್ಟು ಚಿತ್ರಗಳಲ್ಲಿ ಅದು ಸಾಧ್ಯವಾಗಿರಲಿಲ್ಲ. ನನಗೆ ಒಂದು ಪರಿಪೂರ್ಣ ಕ್ಲಾಸಿಕಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕು ಎಂದು ಬಹಳ ವರ್ಷಗಳ ಆಸೆ ಇತ್ತು. ಈ ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳಾಗಿವೆ. ಸಾಕಷ್ಟು ಹೊಸ ಧ್ವನಿಯನ್ನು ನಾವು ಸೃಷ್ಟಿ ಮಾಡಿದ್ದೇವೆ’ ಎಂದರು.
ಚಿತ್ರ ಮುಗಿದ ಮೇಲೂ ಚಿತ್ರತಂಡದವರು ತಮ್ಮನ್ನು ಪ್ರಮೋಟ್ ಮಾಡುತ್ತಿರುವ ಬಗ್ಗೆ ಮಾತನಾಡುವ ಅವರು, ‘ಸಾಮಾನ್ಯವಾಗಿ ಒಂದು ಚಿತ್ರತಂಡದವರು ನಮ್ಮ ಕೆಲಸ ಮುಗಿದರೆ ಮರೆತುಬಿಡುತ್ತಾರೆ. ಆದರೆ, ಈ ತಂಡದವರು ಈಗಲೂ ಕರೆದು ನೆನಪಿಸಿಕೊಂಡು ನಮ್ಮನ್ನು ಪ್ರಮೋಟ್ ಮಾಡುತ್ತಿದ್ದಾರೆ. ತಮಗಿಂತ ನನ್ನನ್ನು ಹೆಚ್ಚು ಪ್ರಮೋಟ್ ಮಾಡುತ್ತಿದ್ದಾರೆ. ಅದೇ ಬಹಳ ಸಂತೋಷದ ವಿಚಾರ’ ಎಂದರು ವೀರ್.


