ಇದು ಹಳೆಯ ರೌಡಿಸಂ ‘ಗ್ರಂಥ’ದ ಹೊಸ ಪುಟಗಳು

ಚಂದನವನ, ಸಿನಿ ಸುದ್ದಿ

90ರ ದಶಕದಲ್ಲಿ ಬೆಂಗಳೂರಿನ ರೌಡಿಸಂ ಹೇಗಿತ್ತು ಎಂದು ಹೇಳುವ ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬಂದಿವೆ. ಕರ್ನಾಟಕವಲ್ಲದ ಬೇರೆ ರಾಜ್ಯಗಳಲ್ಲಿ ರೌಡಿಸಂ ಹೇಗಿತ್ತು ಎಂಬುದನ್ನು ‘ಗ್ರಂಥ’ ಎಂಬ ಚಿತ್ರ ಹೇಳುವುದಕ್ಕೆ ಹೊರಟಿದೆ.

ಶಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೋಕಾಕ್ ಮೂಲದವರಾದ ಹರಿಪ್ರಿಯ ರವಿಕೊಪ್ಪ್ ನಿರ್ಮಿಸುತ್ತಿರುವ ’ಗ್ರಂಥ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಶೂನ್ಯ ಸಂಪಾದನ ಮಠದ ಶ್ರೀ ಮುರುಗ ರಾಜೇಂದ್ರ ಸ್ವಾಮಿಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರೆ, ನಟ ಅನಿರುದ್ದ್ ಜಟ್ಕರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.

ಸಂಜೀವ್ ಗವಂಡಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ಗ್ರಂಥ’ ಚಿತ್ರದಲ್ಲಿ ಯುವ ನಾಯಕನಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ಅಭಿಜಿತ್, ಕಾಕ್ರೋಚ್ ಸುಧಿ, ರವಿ ಕಾಳೆ, ಸಯ್ಯಾಜಿ ರಾವ್ ಶಿಂಧೆ ಮುಂತಾದವರು ನಟಿಸುತ್ತಿದ್ದಾರೆ. ’ಭೂಲೋಕದ ಅಧಿಪತಿ’ ಎಂಬ ಅಡಬರಹ ಇರುವ ಈ ಚಿತ್ರಕ್ಕೆ ಅಂಜನ್‍ ಪೂಜಾರಿ ಸಂಗೀತ, ವೀರೇಶ್‍ ಛಾಯಾಗ್ರಹಣವಿದೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಂಜೀವ್, ‘ಈ ಚಿತ್ರವು 90ರ ಕಾಲಘಟ್ಟದ ಅಂಶಗಳನ್ನು ಒಳಗೊಂಡಿದೆ. ಕರ್ನಾಟಕ ಅಲ್ಲದೆ ಬೇರೆ ರಾಜ್ಯದಲ್ಲಿ ರೌಡಿಸಂ ಹೇಗಿರುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಇಲ್ಲಿ ನಾಯಕ ತನ್ನದೇ ಗ್ರಂಥ ಸೃಷ್ಟಿ ಮಾಡಲು ಚಿಂತಿಸಿರುತ್ತಾನೆ. ಅವನದೇ ಆದ ಸೃಜನಾತ್ಮಕ ವಿಷಯಗಳನ್ನು ಅದರಲ್ಲಿ ಬರೆದು ಮುಂದಿನ ಪೀಳಿಗೆಗೆ ಭೂಗತ ಲೋಕ ಯಾವ ರೀತಿ ಇರುತ್ತದೆ ಎಂಬುದನ್ನು ಹೇಳ ಹೊರಟಿರುತ್ತಾನೆ. ಇದನ್ನು ಓದಿ ತಿಳಿದುಕೊಳ್ಳಬೇಕು. ಅದಕ್ಕಾಗಿ ‘ಗ್ರಂಥ’ ಎಂಬ ಶೀರ್ಷಿಕೆ ಇಡಲಾಗಿದೆ. ಕಾಲ್ಪನಿಕ ಕಥೆಯಾದರೂ, ಒಂದಷ್ಟು ನೈಜ ಅಂಶಗಳನ್ನು ಬಳಸಲಾಗುತ್ತಿದೆ. ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಮುಂಬೈ, ಉತ್ತರ ಕರ್ನಾಟಕ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ’ ಎಂದರು.

ಈ ಹಿಂದೆ’ಭಾಯ್’ ಎಂಬ ಚಿತ್ರದಲ್ಲಿ ನಟಿಸಿದ್ದ ಯುವ, ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಇದು ನನಗೆ ಎರಡನೇ ಚಿತ್ರ. ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದೆ. ಲಾಂಗ್ ಸಾಯೋವರೆಗೂ ನೆನಪಿನಲ್ಲಿ ಇರುತ್ತದೆ. ಮನಷ್ಯ ಸತ್ತ ಮೇಲೂ ಅವನನ್ನು ಮಾಡಿಕೊಳ್ಳುವುದು ಪೆನ್ನು, ಗ್ರಂಥದ ಮೂಲಕ’ ಎಂದು ಯುವ ಪಾತ್ರದ ಪರಿಚಯ ಮಾಡಿಕೊಂಡರು.

ಹಿರಿಯ ನಟ ಅಭಿಜಿತ್‍ ಈ ಚಿತ್ರದಲ್ಲಿ ನೆಗಟೀವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು, ಇಲ್ಲಿಯವರೆಗೂ ಮಾಡಿರದಂತಹ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಿರುವುದಾಗಿ ಕಾಕ್ರೋಚ್ ಸುಧಿ ಹೇಳಿದರು.

Discover more from KannadaScreens

Subscribe now to keep reading and get access to the full archive.

Continue reading