ಚಿತ್ರ ವಿಮರ್ಶೆ: ನ್ಯಾಯಕ್ಕಾಗಿ ಬಾವ-ಬಾಮೈದರ ಜಿದ್ದಾಜಿದ್ದಿ

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಸ್ಪಾರ್ಕ್
ನಿರ್ಮಾಣ: ಗರೀಮಾ ಅವಿನಾಶ್ ವಸಿಷ್ಠ
ನಿರ್ದೇಶನ: ಮಹಾಂತೇಶ್‍ ಹಂದ್ರಾಳ್‍
ತಾರಾಗಣ: ನಿರಂಜನ್ ಸುಧೀಂದ್ರ, ರಚನಾ ಇಂದರ್, ‘ನೆನಪಿರಲಿ’ ಪ್ರೇಮ್‍, ‘ಭಾವನಾ ಮೆನನ್‍, ರಮೇಶ್ ಇಂದಿರಾ ಮುಂತಾದವರು

ಅದು ಅಮರಜ್ಯೋತಿ ಕೋ-ಆಪರೇಟಿವ್‍ ಬ್ಯಾಂಕ್‍. ಬಡವರು, ಮಧ್ಯಮ ವರ್ಗದವರು, ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಮತ್ತು ತಮ್ಮ ಭವಿಷ್ಯ ಸುರಕ್ಷಿತವಾಗಿರಲೆಂದು ಅಲ್ಲಿ ಲಕ್ಷಲಕ್ಷ ಹಣ ಇಟ್ಟಿರುತ್ತಾರೆ. ಅದೊಂದು ದಿನ ಬ್ಯಾಂಕ್‍ ದಿವಾಳಿಯಾಗುತ್ತದೆ. ಆ ಪ್ರಕರಣದ ತನಿಖೆಯ ಜವಾಬ್ದಾರಿ ಪೊಲೀಸ್‍ ಅಧಿಕಾರಿ (ರಂಜಿತ್‍ ಕುಮಾರ್‍) ಮೇಲೆ ಬೀಳುತ್ತದೆ. ಇನ್ನೊಂದು ಕಡೆ ಯುವ ಪತ್ರಕರ್ತ ಅಭಿರಾಮ್‍ (ನಿರಂಜನ್) ತನ್ನ ಚಾನಲ್‍ ಕಡೆಯಿಂದ, ಈ ಮೋಸದ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ತನ್ನದೇ ರೀತಿಯಲ್ಲಿ ತನಿಖೆ ನಡೆಸುತ್ತಾನೆ. ರಂಜಿತ್‍ನ ತಂಗಿಯನ್ನು ಅಭಿ ಪ್ರೀತಿಸುತ್ತಿರುವುದರಿಂದ, ಬಾವ-ಬಾಮೈದರ ನಡುವೆ ಈ ವಿಷಯದಲ್ಲಿ ಜಿದ್ದಾಜಿದ್ದಿ ಶುರುವಾಗುತ್ತದೆ. ಇದರಲ್ಲಿ ಗೆಲ್ಲೋರ್ಯಾರು?

‘ಸ್ಪಾರ್ಕ್’ ಒಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್‍ ಚಿತ್ರ. ಅದರಲ್ಲೂ ಹೆಚ್ಚಾಗುತ್ತಿರುವ ಸಹಕಾರಿ ಬ್ಯಾಂಕ್‍ಗಳ ಹಗರಣಗಳ ವಿಷಯಗಳನ್ನು ಇಟ್ಟುಕೊಂಡು ನಿರ್ದೇಶಕ ಮಹಾಂತೇಶ್‍ ಹಂದ್ರಾಳ್‍ ಕಥೆ-ಚಿತ್ರಕಥೆ ಬರೆದಿದ್ದಾರೆ. ಸಹಕಾರಿ ಬ್ಯಾಂಕ್‍ ಅವ್ಯವಹಾರಗಳು ಮತ್ತು ಅಕ್ರಮಗಳ ಕುರಿತು, ಅಲ್ಲಲ್ಲಿ ಒಂದೊಂದು ಚಿತ್ರಗಳಲ್ಲಿ ಪ್ರಸ್ತಾಪವಿತ್ತಾದರೂ, ಸಂಪೂರ್ಣವಾಗಿ ಅದನ್ನೇ ಕಥೆಯಾಗಿಟ್ಟುಕೊಂಡು ಯಾರೂ ಚಿತ್ರ ಮಾಡಿರಲಿಲ್ಲ. ಮಹಾಂತೇಶ್‍ ಈ ಚಿತ್ರದ ಮೂಲಕ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ.

ಚಿತ್ರದ ಒಂದು ವಿಶೇಷತೆ ಎಂದರೆ, ಪ್ರೇಕ್ಷಕರ ಯಾವ ಊಹೆಯೂ ನಿಜವಾಗದಂತೆ ಚಿತ್ರಕಥೆ ರಚಿಸಲಾಗಿದೆ. ಈ ಸನ್ನಿವೇಶ ಹೀಗೆ ಮುಂದುವರೆಯಬಹುದು, ಹೀಗೆ ಮುಕ್ತಾಯವಾಗಬಹುದು ಅಂತಂದುಕೊಂಡವರಿಗೆ ನಿರಾಸೆಯ ಹೆಚ್ಚು. ಹಾಗಾಗದಂತೆ ಸಾಧ್ಯವಾಗಿರುವುದು ತಾರಾಗಣದಿಂದ. ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ತೀರ್ಮಾನಕ್ಕೆ ಬರುವುದೇ ಕಷ್ಟ. ಕೆಲವು ನಿಮಿಷಗಳಿಗೊಮ್ಮೆ ಹೊಸ ಹೊಸ ರೋಚಕ ತಿರುವುಗಳನ್ನು ನೀಡುತ್ತಾ, ಚಿತ್ರವನ್ನು ಮುನ್ನಡೆಸಲಾಗಿದೆ.

ಇದರ ಹೊರತಾಗಿಯೂ ಚಿತ್ರ ಇನ್ನಷ್ಟು ಚುರುಕಾಗಿರಬೇಕಿತ್ತು. ನಾಯಕ-ನಾಯಕಿಯ ನಡುವಿನ ಪ್ರೀತಿ, ಹಾಡುಗಳನ್ನೆಲ್ಲಾ ಕಡಿಮೆ ಮಾಡಿದ್ದರೆ, ಆಗ ಚಿತ್ರ ಇನ್ನಷ್ಟು ರೋಚಕವಾಗಿರುತ್ತಿತ್ತು. ಶರಣ್‍ ಹಾಡಿರುವ ‘ಶಕಲಕ’ ಹಾಡು ಕೇಳುವುದಕ್ಕೆ, ನೋಡುವುದಕ್ಕೆ ಚೆನ್ನಾಗಿದ್ದರೂ ಆ ಸನ್ನಿವೇಶಕ್ಕೆ ಬೇಕಾಗಿರಲಿಲ್ಲ. ಈ ತರಹದ ಸ್ಪೀಡ್‍ ಬ್ರೇಕರ್‍ಗಳು ಚಿತ್ರದಲ್ಲಿ ಅಲ್ಲಲ್ಲಿ ಸಿಗುತ್ತವೆ. ಇದನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡರೆ, ಕಿಡಿ ನಿಮಗೂ ತಟ್ಟುತ್ತದೆ. ಸಾಮಾಜಿಕ ಕಳಕಳಿ ಇರುವ ಥ್ರಿಲ್ಲರ್‍ಗಳನ್ನು ಇಷ್ಟಪಡುವವರಿಗೆ ಚಿತ್ರ ರುಚಿಸುತ್ತದೆ.

ನಿರಂಜನ್‍ ಸುಧೀಂದ್ರ ಹಾಡು ಮತ್ತು ಫೈಟ್‍ನಲ್ಲಷ್ಟೇ ಅಲ್ಲ, ನಟನೆಯಲ್ಲೂ ಮಾಗಿದ್ದಾರೆ. ಪತ್ರಕರ್ತ ಅಭಿ ಪಾತ್ರದಲ್ಲಿ ಅವರು ಇಷ್ಟವಾಗತ್ತಾರೆ. ‘ನೆನಪಿರಲಿ’ ಪಾತ್ರ ಕುತೂಹಲಕರವಾಗಿ ಸಾಗುತ್ತದೆ ಮತ್ತು ಪ್ರೇಮ್‍ ಸಹ ತಮ್ಮ ಹಿಂದಿನ ಪಾತ್ರ ಮತ್ತು ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಪ್ರೇಮ್‍ ಮತ್ತು ನಿರಂಜನ್‍ ನಡುವಿನ ಜಿದ್ದಾಜಿದ್ದಿ ಚಿತ್ರದ ಪ್ಲಸ್‍ಗಳಲ್ಲೊಂದು. ರಚನಾ ಮುದ್ದಾಗಿ ಕಾಣುತ್ತಾರೆ. ಚಿತ್ರದ ಸರ್‍ಪ್ರೈಸ್ ಎಂದರೆ ಅದು ಭಾವನಾ ಮೆನನ್ ಪಾತ್ರ. ಆ ಪಾತ್ರಕ್ಕೆ ಕನ್ನಡ ಬಲ್ಲ ಪ್ರತಿಭಾವಂತ ನಟಿ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು. ಮಿಕ್ಕಂತೆ ಧರ್ಮಣ್ಣ, ರಮೇಶ್ ಇಂದಿರಾ, ನೀನಾಸಂ ಅಶ್ವತ್ಥ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಚಿನ್‍ ಬಸ್ರೂರು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಲ್ಲೂ ಗಮನಸೆಳೆಯುತ್ತಾರೆ.

ಚಿತ್ರ ವಿಮರ್ಶೆ: 3’ಖ’ರ ವಿರುದ್ಧ ‘ಕಾಮನ್‍ ಮ್ಯಾನ್‍’ ಹೋರಾಟ

Discover more from KannadaScreens

Subscribe now to keep reading and get access to the full archive.

Continue reading