ಈ ಹಿಂದೆ, ಡಾ. ರಾಜಕುಮಾರ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಹಾಗೂ ‘ಕಸ್ತೂರಿ ನಿವಾಸ’ ಚಿತ್ರಗಳನ್ನು ಕಲರ್ ನಲ್ಲಿ ಬಿಡುಗಡೆ ಆಗಿದ್ದು ನೆನಪಿರಬಹುದು. ಇದೀಗ ಡಾ. ರಾಜಕುಮಾರ್ ಅವರ ಇನ್ನೊಂದು ಜನಪ್ರಿಯವಾದ ‘ಜಗ ಮೆಚ್ಚಿದ ಮಗ’ ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.
ಡಾ. ರಾಜಕುಮಾರ್ ಅಭಿನಯದ ‘ಜಗ ಮೆಚ್ಚಿದ ಮಗ’ ಚಿತ್ರವು 54 ವರ್ಷಗಳ ಹಿಂದೆ ಕಪ್ಪು-ಬಿಳುಪಿನಲ್ಲಿ ತಯಾರಾಗಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರ ಈಗ ಆಧುನಿಕ ತಂತ್ರಜ್ಞಾನದಿಂದ ಸಿಂಗಾರಗೊಂಡು ಮರು ಬಿಡುಗಡೆಯಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಚಿತ್ರ ಕಲರ್ ನಲ್ಲಿ ಬಿಡುಗಡೆಯಾಗಲಿದೆ.

ಇದಕ್ಕೂ ಮೊದಲು ನಿರ್ಮಾಪಕರಾಗಿ ಹಾಗೂ ವಿತರಕರಾಗಿ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ಎಸ್. ಉದಯಶಂಕರ್ ಅವರು ಜನ ಮೆಚ್ಚಿದ ‘ಜಗ ಮೆಚ್ಚಿದ ಮಗ’ ಚಿತ್ರವನ್ನು ಕಲರ್‍ನಲ್ಲಿ ತರುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರವನ್ನು ಆಗ ಭಾವನಾರಾಯಣ್ ಅವರು ನಿರ್ಮಿಸಿದ್ದರೆ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದರು.
‘ಜಗ ಮೆಚ್ಚಿದ ಮಗ’ ಚಿತ್ರದಲ್ಲಿ ರಾಜಕುಮಾರ್, ಭಾರತಿ, ಕೆ.ಎಸ್ ಅಶ್ವತ್, ಎಂ.ವಿ. ರಾಜಮ್ಮ, ನರಸಿಂಹರಾಜು ಮುಂತಾದವರು ಅಭಿನಯಿಸಿದ್ದರು. ಈ ಚಿತ್ರವನ್ನು ಸಿನಿಮಾಸ್ಕೋಪ್ ಚಿತ್ರವಾಗಿಸಿ, 5.1 ಸೌಂಡ್ ಎಫೆಕ್ಟ್ ಅಳವಡಿಸಿ, ಈಗಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಸಿದ್ದ ಮಾಡಿ ಇದೇ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ.


