ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಹೊಸಬರು ಎಂಟ್ರಿ ಕೊಡುತ್ತಿದ್ದಾರೆ. ಆದರೆ, ಕಾರಣಾಂತರಗಳಿಂದ ಬಹಳಷ್ಟು ಜನ ಬೆಳಕಿಗೆ ಬರುತ್ತಿಲ್ಲ. ಹೀಗಿರುವಾಗಲೇ, ಸೆ. 25ರಂದು ಬಿಡುಗಡೆ ಆಗುತ್ತಿರುವ ನಿರಂಜನ್ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಚಿತ್ರದ ಮೂಲಕ ಹೊಸ ವಿಲನ್ ಒಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಅವರೇ ಅಭಯ್ ವಸಿಷ್ಠ.
ಅಭಯ್ ವಸಿಷ್ಠ, ‘ಸ್ಪಾರ್ಕ್’ ಚಿತ್ರದ ನಿರ್ಮಾಪಕರ ಪುತ್ರ. ಗರೀಮಾ ಅವಿನಾಶ್ ವಸಿಷ್ಠ ದಂಪತಿ ನಿರ್ಮಾಣದ ಈ ಚಿತ್ರದಲ್ಲಿ ಪುತ್ರ ಅಭಯ್ ವಸಿಷ್ಠ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕರ ಪುತ್ರ, ಹೀರೋ ಆಗುವ ಬದಲು, ಖಳನಾಗಿದ್ದೇಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಬರಬಹುದು.
ಈ ಪ್ರಶ್ನೆಗೆ ಉತ್ತರಿಸುವ ಅಭಯ್, ‘ನಾನು ವಿದೇಶದಲ್ಲೇ ಹುಟ್ಟಿ ಬೆಳೆದ ಕಾರಣ ಕನ್ನಡ ಭಾಷೆ ಅರಿತಿಲ್ಲ. ವಿದೇಶಿ ರಂಗಭೂಮಿಯ ಅನುಭವ ಮಾತ್ರ ಇದೆ. ಅದು ಈ ಸಿನೆಮಾ ಕ್ಷೇತ್ರಕ್ಕಿಂತ ತುಂಬ ವಿಭಿನ್ನ. ಮುಂದೆ ಕನ್ನಡ ಭಾಷೆ ಮತ್ತು ಸಿನೆಮಾ ಬಗ್ಗೆ ಹೆಚ್ಚು ಕಲಿತ ಬಳಿಕ ಕನ್ನಡದಲ್ಲಿ ನಾಯಕನಾಗುವ ಕನಸಿದೆ. ಸದ್ಯಕ್ಕೆ ‘ಸ್ಪಾರ್ಕ್’ನಲ್ಲಿ ಖಳನ ಪಾತ್ರವಾದರೂ ತುಂಬ ಚೆನ್ನಾಗಿದೆ. ಹಾಗಾಗಿಯೇ ಒಪ್ಪಿಕೊಂಡೆ’ ಎಂದರು.

ತನಗೆ ಅಭಯ್ ಒಳ್ಳೆಯ ಎದುರಾಳಿ ಎಂದ ನಿರಂಜನ್, ‘ನನಗೆ ತಕ್ಕ ಎದುರಾಳಿಯಂತೆ ಅಭಯ್ ಇದ್ದರು. ಅವರ ಎತ್ತರ ನನಗೆ ಹೊಂದಿಕೊಳ್ಳುವ ಹಾಗೆ ಇತ್ತು. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಮುಖ ಟೊಮೆಟೊ ಹಣ್ಣಂತೆ ಕೆಂಪಾಗುತ್ತಿತ್ತು. ವಿದೇಶದಿಂದ ಬಂದರೂ ಚೆನ್ನಾಗಿ ನಟನೆ ಮಾಡಿದ್ದಾರೆ. ಪರದೆ ಮೇಲೆ ಕಂಡಾಗ ನಿಜಕ್ಕೂ ನಿಮಗೆ ಒಬ್ಬ ಒಳ್ಳೆಯ ನಟನ ದರ್ಶನವಾಗಲಿದೆ’ ಎಂದು ನಿರಂಜನ್ ಸುಧೀಂದ್ರ ಹೇಳಿದರು.
‘ನೆನಪಿರಲಿ’ ಪ್ರೇಮ್ ಮೊದಲ ಬಾರಿಗೆ ಖಳನಾಗಿ ನಟಿಸಿರುವ ಚಿತ್ರ ಇದು. ‘ನಿರ್ಮಾಪಕರು ಸ್ಟಾರ್ ಚಿತ್ರದ ಹಿಂದೆ ಹೋಗದೆ ಹೊಸಬರ ಚಿತ್ರಮಾಡಿದ್ದಾರೆ. ಒಳ್ಳೆಯ ಚಿತ್ರವನ್ನೇ ಮಾಡಿದ್ದಾರೆ. ನನ್ನದು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ. ಆದರೆ, ಅದೇ ಪೊಲೀಸ್ ವೈಯಕ್ತಿಕವಾಗಿ ಸ್ಟೈಲಿಷ್ ಆಗಿ ಕಾಣಿಸುವಂಥ ಪ್ರಯತ್ನ ಮಾಡಿದ್ದೇನೆ” ಎಂದರು.
ಚಿತ್ರದಲ್ಲಿ ರಚನಾ ಇಂದರ್, ಧರ್ಮಣ್ಣ ಕಡೂರು, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸಿದ್ದಾರೆ. ಸಚಿನ್ ಬಸ್ರೂರು ಸಂಗೀತ ಮತ್ತು ಸ್ವಾಮಿ ಜೆ. ಗೌಡ ಛಾಯಾಗ್ರಹಣವಿದೆ.


