ವಿಧಾನ ಸೌಧದಲ್ಲಿ ಪಾಲು ಕೇಳಿದ ‘ಕಾಮನ್ ಮ್ಯಾನ್’

ಚಂದನವನ, ಸಿನಿ ಸುದ್ದಿ

ಆಸ್ತಿಯಲ್ಲಿ ಪಾಲು ಕೇಳಿದವರನ್ನು ನೋಡಿರಬಹುದು. ಆದರೆ, ವಿಧಾನ ಸೌಧದಲ್ಲಿ ಪಾಲು ಕೇಳಿದವರನ್ನು ನೋಡಿದ್ದೀರ? ನೋಡಿಲ್ಲ ಎಂದರೆ, ಸೆ. 25ರಂದು ಬಿಡುಗಡೆ ಆಗಲಿರುವ ಸಾಯಿಪ್ರಕಾಶ್‍ ನಿರ್ದೇಶನದ ‘ಕಾಮನ್‍ ಮ್ಯಾನ್‍’ ಚಿತ್ರವನ್ನು ನೋಡಿ.

ಸಾಮಾನ್ಯನೊಬ್ಬ ರಾಜ್ಯದ ಮುಖ್ಯಮಂತ್ರಿ ಆದರೆ ಹೇಗೆ ಆಡಳಿತ ನಡೆಸಬಹುದು, ಏನೆಲ್ಲ ಸುಧಾರಣೆ ಮಾಡಬಹುದು, ಎದುರಿಸುವ ಸವಾಲುಗಳೇನು ಎಂದು ಹೇಳುವ ‘ಕಾಮನ್ ಮ್ಯಾನ್’ ಚಿತ್ರ ಇದೇ ತಿಂಗಳ 25ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು, ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್‍ ಮತ್ತು ನಿರ್ದೇಶಕ ಬಿ. ರಾಮಮೂರ್ತಿ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಟ್ರೇಲರ್‍ನಲ್ಲಿ ಸಾಮಾನ್ಯ ಮನುಷ್ಯನೊಬ್ಬ ವಿಧಾನ ಸೌಧದಲ್ಲಿ ಪಾಲು ಕೇಳುವ ವಿಷಯ ಕುತೂಹಲ ಎಬ್ಬಿಸಿದೆ.

ಎನ್. ‌ನರಸಿಂಹ ಮೂರ್ತಿ ಕಥೆ ಬರೆದು, ಸುರಭಿ ಫಿಲಂಸ್‍ ಬ್ಯಾನರ್‍ ಅಡಿ ನಿರ್ಮಿಸಿರುವ ‘ಕಾಮನ್‍ ಮ್ಯಾನ್‍’ ಚಿತ್ರವನ್ನು ಸಾಯಿಪ್ರಕಾಶ್‍ ನಿರ್ದೇಶಿಸಿದ್ದು, ಇದು ಅವರ ನಿರ್ದೇಶನದ 106ನೇ ಚಿತ್ರವಾಗಿದೆ. ‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ನಿರ್ಮಾಪಕ ನರಸಿಂಹಮೂರ್ತಿ ಮಾತನಾಡಿ, ‘ಈಗಾಗಲೇ ಹಿಂದಿ, ತಮಿಳು, ತೆಲುಗಿಗೆ ನಮ್ಮ ಚಿತ್ರ ಡಬ್ಬಿಂಗ್ ಆಗಿದೆ. ಇಲ್ಲಿ ಫಲಿತಾಂಶ ನೋಡಿಕೊಂಡು ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಸಾಮಾನ್ಯ ಮನುಷ್ಯನೊಬ್ಬ ವಿಧಾನ ಸೌಧವನ್ನೇ ಕೇಳೋದು ಸುಲಭದ ಮಾತಲ್ಲ. ಅದಕ್ಕೆ ಬಲವಾದ ಕಾರಣವನ್ನ ನೀಡಿದ್ದೇನೆ. ಪ್ರೇಕ್ಷಕರು ಕೊಡುವ 200 ರೂ.ಗಳಲ್ಲಿ ಸಾವಿರಾರು ಜನರ ಜೀವನ ಅಡಗಿದೆ’ ಎಂದರು.
ಗೌರಿಶಂಕರ್ ಮಾತನಾಡಿ, ‘ಪ್ರತಿ ಮನುಷ್ಯನಲ್ಲೂ ಒಂದು ಆಸೆ ಇದ್ದೇ ಇರುತ್ತದೆ. ಅದೇ ರೀತಿ ಒಬ್ಬ ಕಾಮನ್ ಮ್ಯಾನ್ ಮುಖ್ಯಮಂತ್ರಿ ಆದರೆ ಆತ ಏನು ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು.

ಬಲ ರಾಜ್ ವಾಡಿ ಮಾತನಾಡಿ ಚಿತ್ರದಲ್ಲಿ ನಾಯಕನ ತಂದೆ ಪಾತ್ರ ಮಾಡಿದ್ದಾರೆ. ‘ನಾನಿಲ್ಲಿ ನಾಯಕನ ತಂದೆ ಹಾಗೂ ರಂಗಭೂಮಿ ಕಲಾವಿದನ ಪಾತ್ರ ಮಾಡಿದ್ದೇನೆ’ ಎಂದರು.

ಹಿರಿಯ ನಟ ಅಶೋಕ್ ರಮೇಶ್ ಭಟ್, ಗಣೇಶರಾವ್ ಕೇಸರ್ಕರ್‍, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ವಿನಯ್‍ ಚಂದ್ರ ಅವರ ಸಂಗೀತ, ಜೆ‌.ಜಿ. ಕೃಷ್ಣ ಮತ್ತು ಅವರ ಮಗ ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ.

ಅಪ್ಪ-ಮಗನಾಗಿ ವಿಜಯ್‍ ರಾಘವೇಂದ್ರ; ‘ರುದ್ರಾಭಿಷೇಕಂ’ ಟ್ರೇಲರ್ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading