ಚಿತ್ರ: ಮಾರ್ನಮಿ
ನಿರ್ಮಾಣ: ಶಿಲ್ಪಾ ನಿಶಾಂತ್
ನಿರ್ದೇಶನ: ರಿಷಿತ್ ಶೆಟ್ಟಿ
ತಾರಾಗಣ: ರಿತ್ವಿಕ್ ಮಠದ್, ಚೈತ್ರಾ ಆಚಾರ್, ಸೋನು ಗೌಡ, ರಾಧಾ ರಾಮಚಂದ್ರ, ಜ್ಯೋತಿಷ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮುಂತಾದವರು
ಹಸು ತರಹ ಇರುವ ಮನುಷ್ಯನೊಬ್ಬ ಸಮಯ, ಸಂದರ್ಭಕ್ಕೆ ತಕ್ಕ ಹಾಗೆ ಹೇಗೆ ಹುಲಿಯಾಗಿ ಬದಲಾಗುತ್ತಾನೆ ಎಂಬುದನ್ನು ಹಲವು ಚಿತ್ರಗಳು ನಿರೂಪಿಸಿವೆ. ಅಂಥ ಚಿತ್ರಗಳ ಸಾಲಿಗೆ ಇದೀಗ ‘ಮಾರ್ನಮಿ’ ಸಹ ಸೇರಿದೆ.
‘ಮಾರ್ನಮಿ’ ಚಿತ್ರವು ಚೇತು (ರಿತ್ವಿಕ್ ಮಠದ್) ಎಂಬ ಪಾತ್ರದ ಸುತ್ತ ಸುತ್ತುತ್ತದೆ. ಬಾಲ್ಯದಲ್ಲೇ ತಾಯಿ ಕಳೆದುಕೊಂಡ ಚೇತು, ತನ್ನ ಮಾವನ ಮನೆಯಲ್ಲಿ ಬೆಳೆಯುತ್ತಾನೆ. ಊರಿನಲ್ಲಿ ಹುಲಿವೇಷದ ಸುತ್ತ ನಡೆಯುವ ಸಂಘರ್ಷದಲ್ಲಿ ಒಂದಿಷ್ಟು ಪ್ರಧಾನ ಪಾತ್ರ ವಹಿಸುತ್ತಾನೆ. ಹೀಗಿರುವಾಗಲೇ ದೀಕ್ಷಾ (ಚೈತ್ರಾ ಆಚಾರ್) ಎಂಬ ಯುವತಿ, ಚೇತುನನ್ನು ಮದುವೆ ಆಗಬೇಕೆಂದು ಹಠ ಮಾಡಿ ಮದುವೆಯಾಗುತ್ತಾಳೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಕ್ರಮೇಣ ಚೇತು ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರ ತೆರೆದಿಡುತ್ತದೆ.
‘ಉಳಿದವರು ಕಂಡಂತೆ’ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಹುಲಿವೇಷ ಹಿನ್ನೆಲೆಯ ಕೆಲವು ಚಿತ್ರಗಳು ಬಂದಿವೆ. ‘ಮಾರ್ನಮಿ’ ಚಿತ್ರವು ಹುಲಿವೇಷ ಚಿತ್ರದ ಹಿಂದಿನ ರಾಜಕೀಯವನ್ನು ತೆರೆದಿಡುತ್ತದೆ. ಒಂದು ಆಟದ ಹಿಂದೆ ಏನೆಲ್ಲಾ ರಾಜಕೀಯವಿರುತ್ತದೆ, ಏನೆಲ್ಲಾ ಷಡ್ಯಂತ್ರಗಳಾಗುತ್ತವೆ ಮತ್ತು ಅದರಿಂದ ಒಬ್ಬ ಸಾಮಾನ್ಯ ಮನುಷ್ಯನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಇಲ್ಲಿ ಹುಲಿವೇಷ ಎಂಬ ವಿಷಯ ಬರೀ ಕರಾವಳಿಯ ಆಚಾರಕ್ಕಷ್ಟೇ ಸೀಮಿತವಾಗಿಲ್ಲ. ಹಸುವಿನಂತಿದ್ದ ಚೇತು, ಹುಲಿಯಾಗಿ ಹೇಗೆ ಬದಲಾಗುತ್ತಾನೆ ಎಂಬುದರ ರೂಪಕವನ್ನಾಗಿ ಬಳಸಿಕೊಂಡಿರುವುದು ವಿಶೇಷ.
ಕರಾವಳಿಯ ಆಚಾರ-ವಿಚಾರ, ಮಾರ್ನಮಿ ಆಚರಣೆ ಮತ್ತು ಹುಲಿವೇಷವನ್ನು ಇಷ್ಟೊಂದು ವಿವರವಾಗಿ ಬಳಕೆ ಮಾಡಿದ್ದಕ್ಕೆ ನಿರ್ದೇಶಕ ರಿಷಿತ್ ಶೆಟ್ಟಿ ಮೆಚ್ಚುಗೆ ಗಳಿಸುತ್ತಾರಾದರೂ, ಒಟ್ಟಾರೆ ಚಿತ್ರ ಕಟ್ಟುವ ರೀತಿಯಲ್ಲಿ ಇನ್ನಷ್ಟು ಪಕ್ವತೆ ಬೇಕಿತ್ತು. ಮೊದಲಾರ್ಧ ಚಿತ್ರವನ್ನು ಸಲೀಸಾಗಿ ನೋಡಿಸಿಕೊಂಡು ಹೋಗುವ ಅವರು, ದ್ವಿತೀಯಾರ್ಧದಲ್ಲಿ ಚಿತ್ರವನ್ನು ಸಡಿಲಗೊಳಿಸುತ್ತಾರೆ. ಚೇತು ಮತ್ತು ದೀಕ್ಷಾ ಪಾತ್ರಗಳನ್ನು ಬರೆದಿರುವ ರೀತಿ ಖುಷಿಕೊಡುತ್ತದಾದರೂ, ದ್ವಿತೀಯಾರ್ಧದಲ್ಲಿ ದೀಕ್ಷಾ ಪಾತ್ರ ದಿಢೀರನೆ ಬದಲಾಗುವುದಕ್ಕೆ ಸಮಂಜಸ ಉತ್ತರವಿಲ್ಲ. ಕೆಲವು ವಿಷಯಗಳಿಗೆ ಅನಗತ್ಯವಾಗಿ ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದಾದರೂ, ಕೊನೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲದೆ ಚಿತ್ರ ಮುಕ್ತಾಯವಾಗುತ್ತದೆ. ಬರವಣಿಗೆ ಇನ್ನಷ್ಟು ಚುರುಕಾಗಿದ್ದರೆ, ‘ಮಾರ್ನಮಿ’ ಹಬ್ಬವಾಗುತ್ತಿತ್ತು.
ಉತ್ತರ ಕರ್ನಾಟಕ ಮೂಲದವರಾದ ರಿತ್ವಿಕ್ ಮಠದ್, ಕರಾವಳಿ ಸೊಗಡಿನ ಕಥೆಗೆ ಬಣ್ಣ ಹಚ್ಚಿದ್ದಾರೆ. ಇಲ್ಲಿ ಅವರಿಗೆ ಮಾತಿಗಿಂತ ಮೌನ ಜಾಸ್ತಿ. ತಮ್ಮ ಪಾತ್ರವನ್ನು ಬಹಳ ಸಂಯಮದಿಂದಲೇ ನಿರ್ವಹಿಸಿದ್ದಾರೆ. ಚೈತ್ರಾ ಕಾಲ್‍ಶೀಟ್‍ಗಾಗಿ ಇಡೀ ಚಿತ್ರತಂಡ ಕೆಲವು ತಿಂಗಳುಗಳು ಕಾದಿತ್ತು ಎಂದು ನಿರ್ದೇಶಕರು ಹಿಂದೊಮ್ಮೆ ಹೇಳಿಕೊಂಡಿದ್ದರು. ಅದು ವ್ಯರ್ಥವಾಗಿಲ್ಲ. ಚೈತ್ರಾ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಎರಡು ಶೇಡ್‍ಗಳ ಅವರ ಪಾತ್ರ ಚಿತ್ರದ ಹೈಲೈಟ್‍ಗಳಲ್ಲೊಂದು. ಆರಂಭದಲ್ಲಿ ತಮ್ಮ ಅಭಿನಯದ ಮೂಲಕ ಆಪ್ತರಾಗುವ ಚೈತ್ರಾ, ಕೊನೆಯಲ್ಲಿ ಪ್ರೇಕ್ಷಕರ ಸಿಟ್ಟಿಗೂ ಕಾರಣರಾಗುತ್ತಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ರಾಧಾ ರಾಮಚಂದ್ರ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಖಳನಾಯಕರಾಗಿ ಜ್ಯೋತಿಷ್ ಶೆಟ್ಟಿ ಮತ್ತು ಸ್ವರಾಜ ಶೆಟ್ಟಿ ಗಮನಸೆಳೆಯುತ್ತಾರೆ. ಶಿವಸೇನಾ ಛಾಯಾಗ್ರಹಣ ಮತ್ತು ಚರಣ್ ರಾಜ್ ಒಟ್ಟಾರೆ ಚಿತ್ರದ ಪರಿಸರವನ್ನು ಇನ್ನಷ್ಟು ಕಳೆಗಟ್ಟಿಸುತ್ತದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಎರಡರಲ್ಲೂ ಚರಣ್ ಹೆಚ್ಚು ಅಂಕ ಗಿಟ್ಟಿಸುತ್ತಾರೆ.


