ದೈವಕ್ಕೆ ಅವಮಾನ: ಬಾಲಿವುಡ್‍ ನಟ ರಣವೀರ್ ಸಿಂಗ್‍ ಕ್ಷಮೆ ಯಾಚನೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

‘ಕಾಂತಾರ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಿಷಭ್‍ ಶೆಟ್ಟಿ ಅವರನ್ನು ಅನುಕರಣೆ ಮಾಡಿದ್ದ ಬಾಲಿವುಡ್‍ ನಟ ರಣವೀರ್‍ ಸಿಂಗ್‍, ತಮ್ಮ ವರ್ತನೆಯ ಬಗ್ಗೆ ರಿಷಭ್ ಮತ್ತು ಚಿತ್ರತಂಡದವರಲ್ಲಿ ಕ್ಷಮೆ ಕೇಳಿದ್ದಾರೆ.

ಇತ್ತೀಚೆಗಷ್ಟೇ, ಗೋವಾದಲ್ಲಿ ನಡೆದ IFFI 2025ರ ಸಮಾರೋಪ ಸಮಾರಂಭದಲ್ಲಿ ರಿಷಭ್‍ ಶೆಟ್ಟಿ ಮತ್ತು ರಣವೀರ್‍ ಸಿಂಗ್‍ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಿಷಭ್‍ ಅವರನ್ನು ನೋಡಿ ಖುಷಿಯಾದ ರಣವೀರ, ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಿಷಭ್‍ ಅಭಿನಯವನ್ನು ಅನುಕರಣೆ ಮಾಡಿದ್ದರು. ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿಬಂದಿದ್ದವು. ದೈವಗಳ ಅನುಕರಣೆ ಮಾಡುವುದು ಸರಿಯಲ್ಲ ಎಂದು ಗೊತ್ತಿದ್ದರೂ, ರಣವೀರ್‍ ಹೀಗೆ ಮಾಡಬಾರದಾಗಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು.

ಪ್ರಮುಖವಾಗಿ, ಹಿಂದೂ ಸಂಘಟನೆಗಳಿಂದ ಸಾರ್ವಜನಿಕ ಕ್ಷಮೆಯಾಚನೆಗಾಗಿ ಕರೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ರಣವೀರ್‍ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ‘ಚಿತ್ರದಲ್ಲಿ ರಿಷಭ್ ಅವರ ಅದ್ಭುತ ಅಭಿನಯವನ್ನು ಹೊಗಳುವ ಉದ್ದೇಶ ನನ್ನದು. ಒಬ್ಬ ಕಲಾವಿದನಾಗಿ ಕಲಾವಿದನನ್ನು ನೋಡುವಾಗ, ಆ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸಲು ಎಷ್ಟು ಶ್ರಮ ಹಾಕಬೇಕು ಎಂದು ನನಗೆ ಗೊತ್ತಿದೆ. ರಿಷಭ್‍ ಬಗ್ಗೆ ನನಗೆ ಅಪರವಾದ ಗೌರವವಿದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಪರಂಪರೆ ಮತ್ತು ನಂಬಿಕೆಗಳನ್ನೂ ನಾನು ಸದಾ ಆಳವಾಗಿ ಗೌರವಿಸಿದ್ದೇನೆ. ಯಾರಿಗಾದರೂ ನನ್ನಿಂದ ನೋವಾಗಿದ್ದರೆ, ನಾನು ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಸಮಾರಂಭದಲ್ಲಿ ಮಾತನಾಡುವಾಗ, ಚಿತ್ರದಲ್ಲಿನ ರಿಷಭ್‍ ಅಭಿನಯದ ಬಗ್ಗೆ ಪ್ರಶಂಸಿಸುತ್ತಲೇ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಕುರಿತು ಮಾತನಾಡುವ ಸಂದರ್ಭದಲ್ಲಿ ದೇವಿಯನ್ನು ಹೆಣ್ಣು ಪಿಶಾಚಿ ಎಂದು ಹೇಳಿ, ವಿವಾದಕ್ಕೆ ಕಾರಣವಾಗಿದ್ದರು. ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಹಿನ್ನೆಲೆಯಲ್ಲಿ, ಅನೇಕ ನೆಟ್ಟಿಗರು ಅವರ ಹೇಳಿಕೆ ಮತ್ತು ವರ್ತನೆಯನ್ನು ಖಂಡಿಸಿದ್ದರು.

ಯಾವಾಗ ಸೋಷಿಯಲ್‍ ಮೀಡಿಯಾದಲ್ಲಿ ಟೀಕೆಗಳು ಹೆಚ್ಚಾದವೋ, ಆಗ ರಣವೀರ್‍ ಎಚ್ಚೆತ್ತುಕೊಂಡಿದ್ದಾರೆ. ರಣವೀರ್‍ ಅಭಿನಯದ ‘ದುರಂಧರ್‍’ ಚಿತ್ರವು ಡಿ. 05ರಂದು ಬಿಡುಗಡೆ ಆಗುತ್ತಿದೆ. ಅವರ ಹೇಳಿಕೆಯಿಂದ ಚಿತ್ರದ ಬಗ್ಗೆ ವ್ಯತಿರಿಕ್ತ ಪರಿಣಾಮ ಬೀಳಬಹುದು ಎಂಬ ಭಯ ಕಾಡಿದ ನ್ನೆಲೆಯಲ್ಲಿ ಅವರು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.

‘ನೀರಾ ಆರ್ಯ’ ಅಲ್ಲ, ‘ಆಜಾದ್ ಭಾರತ್’; ಹೊಸ ಚಿತ್ರದೊಂದಿಗೆ ಬಂದ ರೂಪಾ ಅಯ್ಯರ್

Discover more from KannadaScreens

Subscribe now to keep reading and get access to the full archive.

Continue reading