– ಚೇತನ್ ನಾಡಿಗೇರ್
ಚಿತ್ರ: ಗನ್ಸ್ ಆ್ಯಂಡ್ ರೋಸಸ್
ನಿರ್ದೇಶನ: ಶ್ರೀನಿವಾಸ ಕುಮಾರ್
ನಿರ್ಮಾಣ: ಎಚ್.ಆರ್. ನಟರಾಜ್
ತಾರಾಗಣ: ಅರ್ಜುನ್, ಯಶ್ವಿಕ ನಿಷ್ಕಲ, ಅವಿನಾಶ್, ಕಿಶೋರ್, ಸುಚೇಂದ್ರ ಪ್ರಸಾದ್, ಶೋಭರಾಜ್ ಮುಂತಾದವರು
‘ರೌಡಿಸಂನಲ್ಲಿ ಪ್ರೀತಿಗೆ ಜಾಗ ಇಲ್ಲ. ಮತ್ತೆಮತ್ತೆ ಬಂದು ತೊಂದರೆ ಕೊಡಬೇಡ …’ ಎನ್ನುತ್ತಾನೆ ನಾಯಕ. ಆದರೆ, ನಾಯಕಿ ಬಿಡುವುದಿಲ್ಲ. ಕೊನೆಗೆ ಅವಳ ಪ್ರೀತಿಗೆ, ಅವಳ ಒತ್ತಾಯಕ್ಕೆ ಶರಣಾಗುತ್ತಾನೆ. ಇಬ್ಬರೂ ಪರಸ್ಪರ ಪ್ರೀತಿಸಿ ಇನ್ನೇನು …
ಮುಂದೆ ಹೇಳುವುದೇ ಬೇಡ. ಇಷ್ಟು ಹೇಳಿದರೆ, ಮುಂದೇನಾಗುತ್ತದೆ ಎಂದು ಸಲೀಸಾಗಿ ಹೇಳುವಷ್ಟು ಅನುಭವಿಗಳಾಗಿದ್ದಾರೆ ಕನ್ನಡಿಗರು. ಏಕೆಂದರೆ, ‘ಓಂ’ ಚಿತ್ರದಿಂದ ಪ್ರಾರಂಭಿಸಿ, ಇಲ್ಲಿಯವರೆಗೂ ಸಾಕಷ್ಟು ಇಂತಹ ಕಥೆಗಳು ಬಂದಿವೆ. ಅದೇ ಸಾಲಿನ ಮತ್ತೊಂದು ಚಿತ್ರ ‘ಗನ್ಸ್ ಆ್ಯಂಡ್ ರೋಸಸ್’. ಇಲ್ಲಿ ರೌಡಿಸಂ ಇದೆ, ಡ್ರಗ್ಸ್ ಜಾಲವಿದೆ, ಇಬ್ಬರು ಪಂಟರ್‍ಗಳ ನಡುವಿನ ದ್ವೇಷವಿದೆ, ಪೊಲೀಸರ ಹತಾಶೆ ಇದೆ, ಇದೆಲ್ಲದರ ನಡುವೆ ಸಿಲುಕಿರುವ ಪ್ರೇಮಿಗಳ ಕಥೆ ಇದೆ.
‘ಗನ್ಸ್ ಆ್ಯಂಡ್ ರೋಸಸ್’ ಪ್ರಾರಂಭವಾಗುವುದು ರಾಜೇಂದ್ರ ಮತ್ತು ನಾಯಕ್ ಎಂಬ ಇಬ್ಬರು ರೌಡಿಗಳ ಸ್ನೇಹ ಮತ್ತು ಕಲಹದಿಂದ. ಬೆಂಗಳೂರಿನ ಮೇಲೆ ಅಧಿಕಾರ ಸ್ಥಾಪಿಸುವ ನಿಟ್ಟಿನಲ್ಲಿ ಪರಸ್ಪರ ಅವರಿಬ್ಬರೂ ಬಡಿದಾಡುತ್ತಿರುತ್ತಾರೆ. ನಾಯಕ ಸೂರ್ಯ (ಅರ್ಜುನ್), ನಾಯಕ್‍ನ ತಮ್ಮನನ್ನು ಕಾಪಾಡುವ ಮೂಲಕ ಅವನ ಗ್ಯಾಂಗ್ ಸೇರುತ್ತಾನೆ. ಅವನ ಎಂಟ್ರಿಯಿಂದ ಅವರಿಬ್ಬರ ನಡುವಿನ ಸಂಘರ್ಷ ತೀವ್ರವಾಗುತ್ತದೆ. ಇದರ ಜೊತೆಗೆ ಎರಡೂ ಗ್ಯಾಂಗ್‍ನವರು, ‘ಗಾರ್ಡನ್ ಸಿಟಿ’ ಬೆಂಗಳೂರನ್ನು ಡ್ರಗ್ಸ್ ಸಿಟಿ ಮಾಡುತ್ತಾರೆ. ಇದರಿಂದ ಪೊಲೀಸರ ತಲೆನೋವು ಹೆಚ್ಚುತ್ತದೆ. ಈ ರೌಡಿಗಳು ಮತ್ತು ಡ್ರಗ್ಸ್ ಧಂಧೆಯವರ ಮಟ್ಟಹಾಕಲು ಎನ್‍ಕೌಂಟರ್ ಸ್ಪೆಷಲಿಸ್ಟ್ ಒಬ್ಬ ಬರುತ್ತಾರೆ. ಮುಂದೆ ಏನೆಲ್ಲಾ ಆಗಬಹುದು ಎಂದು ನಿಮಗೆ ಬಿಟ್ಟಿದ್ದು.
ಕನ್ನಡದಲ್ಲಿ ಇತ್ತೀಚೆಗೆ ರೌಡಿಸಂ ಚಿತ್ರಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ರೌಡಿಗಳ ಆರ್ಭಟವನ್ನು ನೆನಪಿಸುವುದಕ್ಕೆ ಮತ್ತೆ ‘ಗನ್ಸ್ ಆ್ಯಂಡ್ ರೋಸಸ್’ ಬಂದಿದೆ. ಈಗಾಗಲೇ ಈ ತರಹದ ಚಿತ್ರಗಳು ಸಾಕಷ್ಟು ಬಂದಿರುವುದರಿಂದ, ಈ ಚಿತ್ರ ಯಾವುದೇ ರೀತಿಯಲ್ಲೂ ಹೊಸತು ಅಥವಾ ವಿಶೇಷವೆನಿಸುವುದಿಲ್ಲ. ಏನಾಗಬಹುದು ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಾ ಹೋಗುತ್ತಾರೆ ಮತ್ತು ಅವರ ನಂಬಿಕೆಗೆ ಭಂಗ ತರಬಾರದು ಎನ್ನುವಂತೆ ಚಿತ್ರತಂಡದವರು ಸಹ ಅದಕ್ಕೆ ತಕ್ಕಂತೆ ಕಥೆ ಬೆಳೆಸುತ್ತಾರೆ. ಐದು ಫೈಟು, ಐದು ಹಾಡು, ಅದರಲ್ಲಿ ಎರಡು ಪ್ರೇಮಗೀತೆಗಳು, ಒಂದು ಎಣ್ಣೆ ಸಾಂಗು, ಎರಡು ನಾಯಕನನ್ನು ವೈಭವೀಕರಿಸುವ ಹಾಡುಗಳು, ಇಬ್ಬರು ಡಾನ್‍ಗಳು, ಒಬ್ಬ ಭ್ರಷ್ಟ ಅಧಿಕಾರಿ, ಇನ್ನೊಬ್ಬ ಎನ್‍ಕೌಂಟರ್ ಸ್ಪೆಷಲಿಸ್ಟ್ … ಇವೆಲ್ಲವೂ ಚಿತ್ರದಲ್ಲಿದೆ. ಕೊನೆಗೆ ರೌಡಿಗಳೆಲ್ಲರನ್ನೂ ಮಗಿಸುವ ಮೂಲಕ ಅತ್ತ ಪೊಲೀಸರು ಕ್ಲೀನ್ ಸಿಟಿ ಮಾಡಿದರೆ, ಇತ್ತ ರೌಡಿಸಂ ಹಾದಿಯಲ್ಲಿ ನಡೆದರೆ ನೋವು ಶಾಶ್ವತ ಎಂದು ಚಿತ್ರತಂಡದವರು ಸಂದೇಶ ಕೊಡುತ್ತಾರೆ.
ನಾಯಕ ಅರ್ಜುನ್ ಹೈಟು, ವೈಟು ಚೆನ್ನಾಗಿದೆ. ತೆರೆಯ ಮೇಲೆ ಚೆನ್ನಾಗಿ ಕಾಣುತ್ತಾರೆ. ಆದರೆ, ಅಭಿನಯದಲ್ಲಿ ಬಹಳ ದೂರ ಸಾಗಬೇಕು. ಅವರ ಮೈನಸ್ ಪಾಯಿಂಟ್‍ಗಳಲ್ಲಿ ಧ್ವನಿ ಸಹ ಒಂದು ಎಂದು ಚಿತ್ರತಂಡದವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ, ಅವರಿಗೆ ಕಡಿಮೆ ಸಂಭಾಷಣೆ ಕೊಟ್ಟಿದ್ದಾರೆ. ನಾಯಕನ ಬಾಯಿಂದ ಮೊದಲ ಮಾತು ಕೇಳುವುದಕ್ಕೆ ಪ್ರೇಕ್ಷಕರು ಅರ್ಧ ಗಂಟೆ ಮೇಲೆ ಕಾಯಬೇಕು. ನಾಯಕಿ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ. ಅವಿನಾಶ್, ಕಿಶೋರ್, ಸುಚೇಂದ್ರ ಪ್ರಸಾದ್, ಶೋಭರಾಜ್ ಮುಂತಾದವರಿಗೆ ಈ ತರಹದ ಪಾತ್ರಗಳು ಹೊಸದೇನಲ್ಲ. ಹಾಗಾಗಿ, ಎಲ್ಲರೂ ಸಲೀಸಾಗಿ ತಮ್ಮ ಕೆಲಸ ಮಾಡಿದ್ದಾರೆ. ಹಾಡು, ಫೈಟು, ಛಾಯಾಗ್ರಹಣ, ಸಂಕಲನ, ಸಂಗೀತ, ಚಿತ್ರಕಥೆ, ಸಂಭಾಷಣೆ … ಎಲ್ಲವೂ ಚಿತ್ರದಲ್ಲಿ ಇದೆ ಎನ್ನುವುದು ಬಿಟ್ಟರೆ, ಯಾವುದರಲ್ಲೂ ವಿಶೇಷತೆಯಿಲ್ಲ.


