ರಮೇಶ್ ಅರವಿಂದ್ ಮತ್ತು ಗಣೇಶ್ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ತ್ಯಾಗರಾಜರೆಂದೇ ಗುರುತಿಸಿಕೊಂಡವರು. ಈಗ ಇಬ್ಬರೂ ‘Your’s Sincerely ರಾಮ್’ ಎಂಬ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಗೌರಿ ಹಬ್ಬದ ದಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಾಯಿತು. ನಂತರ ಚಿತ್ರದ ಟೀಸರ್ ಬಿಡುಗಡೆಯೂ ಆಯಿತು.
ಟೀಸರ್ ತೋರಿಸಿ ಹೊರಗೆ ಬಂದ ಚಿತ್ರತಂಡ ಮಾತನಾಡುವುದಕ್ಕೆ ಶುರು ಮಾಡಿದರು. ಮೊದಲು ರಮೇಶ್ ಅರವಿಂದ್. ‘ಹಲವು ವರ್ಷಗಳ ಹಿಂದೆ ಭೂಮಿಕಾ ಎಂಬ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದೆ. ಅವಳು ಬಿಟ್ಟು ಹೋಗಿದ್ದರಿಂದ ನಾನು ತ್ಯಾಗರಾಜನಾಗಿದ್ದೆ. ಕೆಲವು ವರ್ಷಗಳ ಹಿಂದೆ ನಂದಿನಿ ಎಂಬ ಹುಡುಗಿಯ ಹಿಂದೆ ಇವರು ಬಿದ್ದು, ಪರಪರ ಅಂತ ಪರಚಿಕೊಂಡಿದ್ದರು. ಈಗ ಸಂಧ್ಯಾ ಎಂಬ ಇನ್ನೊಂದು ಹುಡುಗಿಯ ಹಿಂದೆ ಬಿದ್ದಿದ್ದೀವಿ. ಆ ಸಂಧ್ಯಾ ಯಾರು? ಅವಳಿಗೂ ನಮಗೂ ಏನು ಸಂಬಂಧ? ಕಥೆಯೇನು? ಎಂಬುದು ಈ ಚಿತ್ರ. ಇಲ್ಲಿ ಸಂಧ್ಯಾಳಿಂದ ನನಗೆ ಸಮಸ್ಯೆ ಆದರೆ ಪಂಚರ್ ಹಾಕೋಕೆ ಗಣೇಶ್ ಇದ್ದಾರೆ. ಅವರಿಗೆ ಸಮಸ್ಯೆಯಾದರೆ ಆಪ್ತಮಿತ್ರ ನಾನಿದ್ದೇನೆ. ನಮ್ಮ ಜೊತೆಗೆ ವಿಖ್ಯಾತ್ ಇದ್ದಾರೆ’ ಎಂದರು.
ರಮೇಶ್ ಅವರಿಗೆ ವಿಖ್ಯಾತ್ ಪರಿಚಯವಾಗಿದ್ದು ಒಂಬತ್ತು ವರ್ಷಗಳ ಹಿಂದೆಯಂತೆ. ‘ಅವರು ‘ಪುಷ್ಪಕ ವಿಮಾನ’ ಕಥೆ ಹೇಳೋಕೆ ಬಂದರು. ಅವರಿಗೊಂದು ಅದ್ಭುತವಾದ ಸೌಂದರ್ಯ ಪ್ರಜ್ಞೆ ಇದೆ. ಅವರ ನಿರ್ಮಾಣದ ಚಿತ್ರಗಳು, ಪೋಸ್ಟರ್‍ಗಳಲ್ಲಿ ನಾವದನ್ನು ನೋಡಬಹುದು. ಆ ಸೂಕ್ಷ್ಮ ಸಂವೇದನೆ ಇದೆ. ಈ ಟೀಸರ್‍ನಲ್ಲಿ ನಾನು ನೋಡಬಹುದು. ಸತ್ಯ ಮತ್ತು ವಿಖ್ಯಾತ್ ಇಬ್ಬರಲ್ಲೂ ಉತ್ಸಾಹ ಮತ್ತು ಅಭಿರುಚಿ ಇದೆ. ಇಬ್ಬರೂ ಈಗ ಜೊತೆಗೆ ಚಿತ್ರ ಮಾಡುತ್ತಿದ್ದಾರೆ. ಗಣೇಶ್ ನನಗೆ ‘ಗೋಲ್ಡನ್ ಸ್ಟಾರ್’ ಆಗುವುದಕ್ಕಿಂತ ಮುಂಚಿನಿಂದ ಪರಿಚಯ. ರಿಯಾಲಿಟಿ ಕಾರ್ಯಕ್ರಮದಲ್ಲಿ ಶಂಕರ್ ನಾಗ್ ಅವರ ಮಿಮಿಕ್ರಿ ಮಾಡಿದ್ದು ನೋಡಿ, ಇವರು ಸ್ಟಾರ್ ಆಗುತ್ತಾರೆ ಎಂದಿದ್ದೆ. ಅದರಂತೆ ಸ್ಟಾರ್ ಆದರು. ನಂತರ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಬಂದಿದ್ದರು. ‘ಸುಂದರಾಂಗ ಜಾಣ’ ಚಿತ್ರದಲ್ಲಿ ನಿರ್ದೇಶನ ಮಾಡಿದ್ದೆ. ಈ ಕಾಂಬಿನೇಷನ್ ಪ್ರೇಕ್ಷಕರಿಗೆ ಎಷ್ಟು ಖುಷಿ ಕೊಡುತ್ತದೆ, ನನಗೂ ಅಷ್ಟೇ ಖುಷಿ ಕೊಡುತ್ತದೆ ಎಂಬ ನಂಬಿಕೆ ಇದೆ. ಈ ತಂಡದ ಉದ್ದೇಶ ಚೆನ್ನಾಗಿದೆ. ಇಲ್ಲಿ ಪ್ರಾಮಾಣಿಕತೆ ಇದೆ’ ಎಂದರು.

ನಂತರ ಮಾತನಾಡಿದ ಗಣೇಶ್, ‘ಗೌರಿ ಹಬ್ಬದ ದಿನ ‘Your’s Sincerely ರಾಮ್’ ಪ್ರಾರಂಭವಾಗಿದೆ. ಚಿತ್ರದ ತುಣುಕುಗಳನ್ನೂ ನೋಡಿದ್ದೀರಿ. ನಮ್ಮಿಬ್ಬರ ನಡುವಿನ ಸಂಬಂಧ ಬೇರೆ ರೀತಿ ಫೀಲ್ ಕೊಡುತ್ತದೆ. ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ ಈ ಚಿತ್ರದಲ್ಲಿದೆ’ ಎಂದರು.
‘Your’s Sincerely ರಾಮ್’ ಚಿತ್ರವನ್ನು ‘ಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ದಂತಹ ಚಿತ್ರಗಳನ್ನು ನಿರ್ಮಿಸಿದ್ದ ವಿಖ್ಯಾತ್ ನಿರ್ದೇಶನ ಮಾಡುತ್ತಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.
ಚಿತ್ರದ ಕುರಿತು ಮಾತನಾಡಿದ ವಿಖ್ಯಾತ್, ‘ನಾನು ನಿರ್ಮಾಪಕನಾಗಿದ್ದು ಆಕಸ್ಮಿಕವಾಗಿ. ನಿರ್ದೇಶಕನಾಗಬೇಕು ಎಂಬುದು ನನ್ನ ಕನಸು. ಸುಮಾರು 14 ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಒಂದು ಚಿತ್ರ ನಿರ್ದೇಶಿಸಬೇಕೆಂದು ಹೊರಟು, ಅದು ಮುಹೂರ್ತದವರೆಗೂ ಬಂದಿತ್ತು. ಆದರೆ, ಚಿತ್ರ ನಿಂತು ಹೋಯ್ತು. ನಾನು ಯಾರಿಗೆ ಕಥೆ ಹೇಳಿದರೂ ಅವರಿಗೆ ಅರ್ಥ ಆಗುತ್ತಿರಲಿಲ್ಲ. ಏನೇನೋ ಹೇಳುತ್ತಾನೆ ಎನ್ನುತ್ತಿದ್ದರು. ಈ ಕಥೆಯ ಬಗ್ಗೆ ಕೆಲವು ವರ್ಷಗಳಿಂದ ಕನವರಿಸುತ್ತಿದ್ದೇನೆ. ರಮೇಶ್ ಮತ್ತು ಗಣೇಶ್ ಅಭಿನಯದಲ್ಲಿ ಚಿತ್ರ ಮಾಡಬೇಕೆಂಬುದು ಕನಸಾಗಿತ್ತು. ಅದೀಗ ನನಸಾಗುತ್ತಿದೆ. ಇದೊಂಧು ದೊಡ್ಡ ಕ್ಯಾನ್ವಾಸ್‍ನ ಚಿತ್ರ. ಬಹಳಷ್ಟು ಜನಪ್ರಿಯ ಕಲಾವಿದರಿದ್ದಾರೆ. ಇದೊಂದು ಸಂಗೀತಮಯ ಚಿತ್ರವಾಗಲಿದೆ. ಮೂರ್ನಾಲ್ಕು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ’ ಎಂದರು.
ಸೆಪ್ಟೆಂಬರ್ ಕೊನೆಯಲ್ಲಿ ‘Your’s Sincerely ರಾಮ್’ ಚಿತ್ರಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ.


