ನಾಯಕ ಪಿಟೀಲು, ನಾಯಕಿ ಕೊಳಲು; ಮಂಸೋರೆ ಶೈಲಿ ಬದಲು

ಚಂದನವನ, ಸಿನಿ ಸುದ್ದಿ

ಮಂಸೋರೆ ಚಿತ್ರಗಳೆಂದರೆ ಘನಗಂಭೀರ ಮತ್ತು ಸಾಮಾಜಿಕ ಸಮಸ್ಯೆಯ ಕುರಿತಾದ ಚಿತ್ರಗಳು ಎಂಬ ನಂಬಿಕೆ ಇದೆ. ಅದನ್ನು ಬ್ರೇಕ್‍ ಮಾಡುವುದಕ್ಕೆಂದೇ ಅವರು ಈ ಬಾರಿ ಬೇರೆ ಶೈಲಿಯ ಚಿತ್ರ ಮಾಡುತ್ತಿದ್ದಾರೆ. ಹೇಳುವ ರೀತಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಸರಿಯಾಗಿ ಅವರು ‘ದೂರ ತೀರ ಯಾನ’ ಎಂಬ ಚಿತ್ರ ಪ್ರಾರಂಭಿಸಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಪ್ರಾರಂಭವಾಗಿದೆ.

‘ದೂರ ತೀರ ಯಾನ’ ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್‍ನಡಿ ದೇವರಾಜ್‍ ನಿರ್ಮಿಸುತ್ತಿದ್ದು, ವಿಜಯ್‍ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್‍ ನಟಿಸುತ್ತಿದ್ದಾರೆ. ದೇವರಾಜ್‍ ಮತ್ತು ಮಂಸೋರೆ ಜೊತೆಯಾಟದ ಮೂರನೆಯ ಚಿತ್ರ. ಇದಕ್ಕೂ ಮೊದಲು ‘ಆ್ಯಕ್ಟ್ 1978’ ಮತ್ತು ’19.20.21’ ಚಿತ್ರಗಳನ್ನು ದೇವರಾಜ್‍ ನಿರ್ಮಾಣದಲ್ಲಿ ನಿರ್ದೇಶಿಸಿದ್ದರು ಮಂಸೋರೆ.

ಚಿತ್ರದ ಕುರಿತು ಮಾತನಾಡುವ ಮಂಸೋರೆ, ‘ಇದು ನನ್ನ ನಿರ್ದೇಶನದ ಐದನೇ ಚಿತ್ರ. ಕಥೆ ಹೇಳುವ ಫಾರ್ಮಾಟ್‍ ಈ ಚಿತ್ರದಲ್ಲಿ ಬದಲಿಸುತ್ತಿದ್ದೇನೆ. ಕಥೆ ಆಳವಾಗಿದ್ದರೂ, ಅದನ್ನು ಹೇಳುವ ಶೈಲಿ ಮಾತ್ರ ಬದಲಾಗಿದೆ. ಇದೊಂದು ಪ್ರಯಾಣದ ಚಿತ್ರ. ಮೊದಲ 10 ನಿಮಿಷ ಬೆಂಗಳೂರಿನಲ್ಲಿ ನಡೆಯುತ್ತದೆ. ನಂತರ ಗೋವಾವರೆಗೂ ಪ್ರಯಾಣ ಮುಂದುವರೆಯುತ್ತದೆ. ಇಲ್ಲಿ ನಾಯಕ ಪಿಟೀಲು ನುಡಿಸುತ್ತಾನೆ. ನಾಯಕಿ ಕೊಳಲು ನುಡಿಸುತ್ತಾಳೆ. ಅದು ಅವರಿಬ್ಬರ ಪ್ರವೃತ್ತಿ. ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್‍ಗಳಾಗಿರುತ್ತಾರೆ. ಅವರಿಬ್ಬರ ಪ್ರೀತಿಯ ಹುಡುಕಾಟವೇ ಈ ಚಿತ್ರದ ಕಥೆ’ ಎಂದರು.

ಈ ಚಿತ್ರಕ್ಕಾಗಿ ಅವರು ಒಂದು ವರ್ಷ ರೀಸರ್ಚ್ ಮಾಡಿದ್ದಾರಂತೆ. ‘ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಅವಲೋಕಿಸಿದ್ದಾರಂತೆ. ಪ್ರೇಕ್ಷಕರು ಯಾವ ರೀತಿಯ ಕಥೆ ಮತ್ತು ಚಿತ್ರಗಳನ್ನು ಇಷ್ಟಪಡುತ್ತಾರೆ ಎಂದು ಮಾಹಿತಿ ಕಲೆ ಹಾಕಿದ್ದಾರಂತೆ. ಅದೆಲ್ಲವನ್ನೂ ಇಟ್ಟುಕೊಂಡು ಅವರು ಕಥೆ ಮಾಡಿದ್ದಾರೆ. ‘ಹೇಳುವ ರೀತಿ ಮಾತ್ರ ಬೇರೆ ಇರುತ್ತದೆ. ಇದೊಂದು ತೀರಾ ಗಂಭೀರವಲ್ಲದ ಮತ್ತು ಲವಲವಿಕೆಯಿಂದ ಕೂಡಿರುವ ಚಿತ್ರವಾಗಿರುತ್ತದೆ. ಇದೊಂದದು ಪ್ರೀತಿಯ ಹುಡುಕಾಟದ ಕಥೆ. ಈಗ ಪ್ರೀತಿಯ ವ್ಯಾಖ್ಯಾನ ಬದಲಾಗಿದೆ. ಅದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ವಿಜಯ್‍ ಕೃಷ್ಣ ಕನ್ನಡದವರೇ ಆದರೂ ಇದುವರೆಗೂ ಹೆಚ್ಚಾಗಿ ಕೆಲಸ ಮಾಡಿರುವುದು ಹಿಂದಿ ಚಿತ್ರ ಮತ್ತು ವೆಬ್‍ಸೀರೀಸ್‍ಗಳಲ್ಲಿ. ಕೆಲವು ವರ್ಷಗಳಲ್ಲಿ ಇಲ್ಲೇನೋ ಮಾಡಬೇಕು ಎಂದು ಪ್ರಯತ್ನಿಸಿದ್ದರಂತೆ. ಅದು ಈ ಚಿತ್ರದ ಮೂಲಕ ಈಡೇರುತ್ತಿದೆ. ನಾಯಕಿ ಪ್ರಿಯಾಂಕಾಗೆ ಇದು ಮೂರನೆಯ ಚಿತ್ರ. ಈ ಹಿಂದೆ ‘ಬ್ಯಾಡ್‍ ಮ್ಯಾನರ್ಸ್’ ಮತ್ತು ‘ರುದ್ರು ಗರುಡ ಪುರಾಣ’ ಚಿತ್ರಗಳಲ್ಲಿ ಅವರು ನಟಿಸಿದ್ದರು. ಈ ಚಿತ್ರದಲ್ಲೊಂದು ಒಳ್ಳೆಯ ಅವಕಾಶವಿದೆ ಎಂದು ಇಬ್ಬರೂ ಹೇಳಿದರು.

‘ದೂರ ತೀರ ಯಾನ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 03ರಂದು ಪ್ರಾರಂಭವಾಗಲಿದೆ. ಮುಂದಿನ ಜುಲೈನಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಶೇಖರ್‍ ಚಂದ್ರು ಛಾಯಾಗ್ರಹಣ ಮತ್ತು ಬಕ್ಕೇಶ್‍ ಸಂಗೀತ ಈ ಚಿತ್ರಕ್ಕಿದೆ.

ಎಲ್ಲರೊಳಗಿರುವ ರಾಕ್ಷಸರ ಕಥೆ ಇದು; ‘ರಕ್ಕಸಪುರದೊಳ್‍’ ಪ್ರಾರಂಭ

Discover more from KannadaScreens

Subscribe now to keep reading and get access to the full archive.

Continue reading