ರಾಜ್ ಬಿ. ಶೆಟ್ಟಿ ಅಭಿನಯದ ಮಲಯಾಳಂ ಚಿತ್ರವೊಂದು ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಲಿದೆ. ಇನ್ನು, ಅನುರಾಗ್ ಕಶ್ಯಪ್ ನಿರ್ದೇಶನದ ಹಿಂದಿ ಚಿತ್ರದಲ್ಲಿ ನಟಿಸುವುದಕ್ಕೆ ರಾಜ್ ಬಾಲಿವುಡ್‍ಗೆ ಹಾರಲಿದ್ದಾರೆ. ‘ದುನಿಯಾ’ ವಿಜಯ್ ಅಭಿನಯದ ‘ವಿಕೆ 29’ ಚಿತ್ರದಲ್ಲಿ ರಾಜ್ ಶೆಟ್ಟಿ ನಟಿಸುತ್ತಿರುವ ಸುದ್ದಿ ಇದೆ. ಈ ಮಧ್ಯೆ, ‘ರಕ್ಕಸಪುರದೊಳ್’ ಎಂಬ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ರಾಜ್ ಸಜ್ಜಾಗಿದ್ದಾರೆ.
‘ರಕ್ಕಸಪುರದೊಳ್’ ಚಿತ್ರವನ್ನು ಸಾಹಸ ನಿರ್ದೇಶಕ ಕೆ. ರವಿವರ್ಮ ನಿರ್ಮಿಸುತ್ತಿದ್ದು, ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದಂದು ನಡೆಯಿತು. ನೆಟಕಲ್ಲಪ್ಪ ಸರ್ಕಲ್ ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ರಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
‘ರಕ್ಕಸಪುರದೊಳ್’ ಚಿತ್ರದ ಕುರಿತು ಮಾತನಾಡಿದ ರಾಜ್ ಶೆಟ್ಟಿ, ‘ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅವನು ತನ್ನ ಒಳಗಿರುವ ರಾಕ್ಷಸನನ್ನು ಎದುರಿಸಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಹಳ ನೈಜವಾದ ಪಾತ್ರ ಇದು. ಚಿತ್ರದಲ್ಲಿ ನೋಡಿಸಿಕೊಂಡು ಹೋಗುವ ಗುಣಗಳಿವೆ. ಅದೇ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡೆ. ಈ ಚಿತ್ರದ ಸ್ಕ್ರಿಪ್ಟ್ ಕೈಗೆತ್ತಿಕೊಂಡು ಒಂದಿಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಬಹಳ ಒಳ್ಳೆಯ ಪಾತ್ರಗಳಿಗೆ. ನನ್ನ ಪಾತ್ರಕ್ಕೆ ನನ್ನದೇ ಆದ ಜರ್ನಿ, ಹುಡುಕಾಟ, ನೋವು, ಸುಖ ಎಲ್ಲವೂ ಇದೆ’ ಎಂದರು.

ನಿರ್ದೇಶಕ ರವಿ ಸಾರಂಗ ಮಾತನಾಡಿ, ‘ಕಳೆದ 10 ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಕ್ಷಸರೇ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು ‘ರಕ್ಕಸ’ ಎನ್ನಬಹುದು. ಅದನ್ನು ಹೇಗೆ ನಾಯಕ ಮೀರುತ್ತಾನೆ ಎನ್ನುವುದು ಚಿತ್ರದ ಕಥೆ. ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರ. ಕೊಳ್ಳೇಗಾಲದಲ್ಲಿ ನಡೆಯುವ ಕಥೆ ಇದು. ಅಲ್ಲೊಂದು ಊರಿನಲ್ಲಿ ಕಥೆ ನಡೆಯುತ್ತದೆ. ಎಲ್ಲರೊಳಗಿರುವ ರಾಕ್ಷಸರ ಕುರಿತಾದ ಕಥೆ ಇದು’ ಎಂದರು.
ರವಿ ಸಾರಂಗ ಅವರು ನನಗೆ ಎರಡು ವರ್ಷಗಳ ಪರಿಚಯ ಎಂದು ಮಾತು ಆರಂಭಿಸಿದ ನಿರ್ಮಾಪಕ ಕೆ. ರವಿವರ್ಮ, ‘ರವಿ ಸಾರಂಗ ಒಳ್ಳೆಯ ಕಥೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ. ಒಂದೊಳ್ಳೆಯ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ’ ಎಂದರು.
‘ರಕ್ಕಸಪುರದೊಳ್’ ಚಿತ್ರದಲ್ಲಿ ರಾಜ್ ಶೆಟ್ಟಿ ಜೊತೆಗೆ ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದ್ದು, ಕ್ರಾಂತಿ ಕುಮಾರ್ ಸಂಭಾಷಣೆ ಬರೆಯತ್ತಿದ್ದಾರೆ.
ಕನ್ನಡಕ್ಕೆ ನಾಲ್ಕನೇ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟ ರಿಷಭ್ ಶೆಟ್ಟಿ


