‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಇರುವುದರ ಜೊತೆಗೆ ಹಸಿಹಸಿಯಾಗಿದೆ, ಕ್ರೌರ್ಯ ಹೆಚ್ಚಿದೆ ಎಂಬ ಪ್ರತಿಕ್ರಿಯೆಗಳ ನಡುವೆಯೂ ಚಿತ್ರ ಕೆಲವು ಹೌಸ್‍ಫುಲ್ ಪ್ರದರ್ಶನಗಳನ್ನು ಕಾಣುವುದರ ಜೊತೆಗೆ ಎರಡನೇ ವಾರಕ್ಕೆ ಕಾಲಿಡುತ್ತಿದೆ.
ಈ ಮಧ್ಯೆ, ‘ದುನಿಯಾ’ ವಿಜಯ್ ಖುಷಿಯಾಗಿದ್ದಾರೆ. ಒಂದು ಸಮಾರಂಭ ಮಾಡಿ, ಆ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದಲ್ಲಿ ಕೆಲಸ ಮಾಡಿದವರನ್ನು ಪರಿಚಯಿಸಿಕೊಡುವುದರ ಜೊತೆಗೆ, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ನನ್ನನ್ನು ಕೆಣಕಿ, ಹಂಗಿಸಿದವರಿಗೆ ಈ ಚಿತ್ರದ ಯಶಸ್ಸು ಉತ್ತರ ಕೊಟ್ಟಿದೆ. ಎಲ್ಲರೂ ಇಂತಹ ಚಿತ್ರಗಳನ್ನು ನೋಡಬೇಕು. ಇದರಲ್ಲೊಂದು ಒಳ್ಳೆಯ ಸಂದೇಶವಿದೆ. ಮಕ್ಕಳು, ಪೋಷಕರು ಎಲ್ಲರೂ ಕೂತು ನೋಡುವ ಚಿತ್ರವಿದು. ಒಳ್ಳೆಯ ವಿಷಯ ಮತ್ತು ಸಂದೇಶವನ್ನು ಹೇಳುವುದಕ್ಕೆ ನಾನು ಈ ತರಹದ ರಗ್ಗೆಡ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಈ ಚಿತ್ರದ ವಿಷಯ ಸಮಾಜಕ್ಕೆ ಎಚ್ಚರಿಕೆಯ ಗಂಟೆ’ ಎಂದರು ವಿಜಯ್.

‘ಭೀಮ’ ಚಿತ್ರದ ಸ್ಯಾಟಿಲೈಟ್ ಮತ್ತು ಓಟಿಟಿ ಹಕ್ಕುಗಳು ಮೊದಲು ಮಾರಾಟವಾಗಿರಲಿಲ್ಲ. ಚಿತ್ರವನ್ನು ನೇರವಾಗಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲಾಯಿತು. ಇಂಥದ್ದೊಂದು ರಿಸ್ಕ್ ತೆಗೆದುಕೊಂಡಿದ್ದರ ಕುರಿತು ಮಾತನಾಡಿದ ವಿಜಯ್, ‘ಯಾವತ್ತೂ ಶ್ರಮದ ಮೇಲೆ ನಂಬಿಕೆ ಇಟ್ಟವನು ನಾನು. ಕಷ್ಟಪಟ್ಟು ಕೆಲಸ ಮಾಡಿ, ಮನೆ ಬಿಡುತ್ತಾ ನಮ್ಮ ಗುರುಗಳನ್ನು ಸ್ಮರಿಸಿಕೊಳ್ಳುತ್ತೇನೆ. ಒಂದು ಯಶಸ್ಸು ಕೊಟ್ಟರೆ, ಹಲವರಿಗೆ ಒಳ್ಳೆಯದಾಗುತ್ತದೆ, ಕೆಲಸ ಸಿಗುತ್ತದೆ ಎಂದು ಕೇಳಿಕೊಳ್ಳುತ್ತೇನೆ. ನಾನು ನಂಬಿರುವುದು ಶ್ರಮ ಮತ್ತು ತಯಾರಿಯನ್ನು ಮಾತ್ರ. ಸುಮ್ಮನೆ ಹೋಗಿ ರೇಸ್‍ನಲ್ಲಿ ನಿಲ್ಲುವುದಿಲ್ಲ. ಪೂರ್ವ ತಯಾರಿ ಮಾಡಿಕೊಂಡೇ ಇಳಿಯುತ್ತೇನೆ’ ಎಂದರು ಭೀಮ.
ಇನ್ನು, ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ‘ಭೀಮ’ ಚಿತ್ರದ ಕೊನೆಯಲ್ಲಿ ‘ಸಲಗ 2’ ಚಿತ್ರಕ್ಕೆ ಲೀಡ್ ಕೊಡಲಾಗುತ್ತದೆ. ‘ಭೀಮ’ದ ಮುಂದುವರೆದ ಭಾಗ ಸಹ ಬರುತ್ತದೆ ಎಂಬ ಮಾತಿದೆ. ಆದರೆ, ಅವೆಲ್ಲಕ್ಕೂ ಮೊದಲು ತಂಬಿ ನಿರ್ದೇಶನದ ಚಿತ್ರ ಎನ್ನುತ್ತಾರೆ ಅವರು. ‘ನನ್ನನ್ನು ನಂಬಿ ಕೆಲವು ಹುಡುಗರ ಈ ಕ್ಷೇತ್ರಕ್ಕೆ ಬಂದಿದ್ದಾರೆ. ತಂಬಿ, ವೀರ, ಮೌರ್ಯ, ಡೆನ್ನಿಸ್, ಜೀವನ್ ಇವರೆಲ್ಲಾ ನನಗೆ ಅಣ್ಣನ ಸ್ಥಾನ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ‘ಸಲಗ 2’ ಚಿತ್ರವನ್ನು ಯಾವತ್ತು ಬೇಕಾದರೂ ಬರೆಯೋಕೆ ರೆಡಿ. ಏಕೆಂದರೆ, ಅದು ನನ್ನ ಕೈಯಲ್ಲಿರುವ ಕಥೆ. ನನ್ನ ನಂಬಿ ಬಂದವರು ಎರಡ್ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಅವರಿಗೆ ಮೊದಲು ಸಿನಿಮಾ ಮಾಡುತ್ತೇನೆ. ಮೊದಲು ತಂಬಿ, ನಂತರ ವೀರನಿಗೆ ಸಿನಿಮಾ ಮಾಡುತ್ತೇನೆ. ಮೌರ್ಯನಿಗೂ ಬರೆಯೋಕೆ ಹೇಳಿದ್ದೇನೆ’ ಎಂದರು.
ನಿರ್ಮಾಪಕರು ಅವರೇ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್, ‘ಈ ಬಾರಿ ಬೇರೆ ನಿರ್ಮಾಪಕರು ಇರುತ್ತಾರೆ. ಅವರಿಗೆ ಕಾಲ್ ಕೊಟ್ಟಿದ್ದೇನೆ, ಇನ್ನೇನು ಕಾಲ್‍ಶೀಟ್ ಕೊಡಲಿ? ಒಬ್ಬರ ಜೊತೆಗೆ ಪುನಃ ಪುನಃ ಕೆಲಸ ಮಾಡುವ ಬದಲು, ಬೇರೆಯವರ ಜೊತೆಗೆ ಕೆಲಸ ಮಾಡುವಾಸೆ. ಅವರೂ ಒಂದು ಗ್ಯಾಪ್ ತೆಗೆದುಕೊಳ್ಳಲಿ, ನಾನು ಸಹ ಗ್ಯಾಪ್ ತೆಗೆದುಕೊಳ್ಳುತ್ತೇನೆ. ತುಂಬಾ ಹೊತ್ತು ಇದ್ದರೆ, ಜಗಳಗಳಾಗುತ್ತವೆ. ಇಬ್ಬರಿಗೂ ಪರಸ್ಪರ ಗೌರವವಿದೆ. ಹಾಗಾಗಿ, ಸಣ್ಣ ಗ್ಯಾಪ್ ತೆಗೆದುಕೊಳ್ಳುತ್ತೇವೆ. ಅವರ ತರಹ ಟೇಸ್ಟ್ ಮತ್ತ ಪ್ಯಾಶನ್ ಇರುವ ನಿರ್ಮಾಪಕರು. ಅಂತ ನಿರ್ಮಾಪಕರಿಗೆ ಕಾಯುತ್ತಿದ್ದೇನೆ. ಸದ್ಯದಲ್ಲೇ ತಂಬಿಯ ಚಿತ್ರವನ್ನು ಘೋಷಿಸುತ್ತೇನೆ. ನಮ್ಮ ಸ್ಟೈಲ್‍ಗೆ ಹೊಂದುವವರ ಜೊತೆಗೆ ಚಿತ್ರ ಮಾಡುತ್ತೇನೆ. ಆ ತರಹ ನಿರ್ಮಾಪಕರು ಬೇಕು’ ಎಂದರು.
ತಮಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುವ ನಿರ್ಮಾಪಕರು ಬೇಕು ಎನ್ನುವ ವಿಜಯ್, ‘ಈಗ ನಿರ್ಮಾಪಕರೇ ನಿರ್ದೇಶಕರಾಗಿಬಿಟ್ಟಿದ್ದಾರೆ. ಮೊನ್ನೆ ಒಬ್ಬ ನಿರ್ಮಾಪಕರು ಫೋನ್ ಮಾಡಿದ್ದರು. ಅವರು ಯಾವ ಲೆಕ್ಕದಲ್ಲಿ ಇದ್ದಾರೆಂದರೆ, ಕಥ ಕೇಳಲ್ಲ, ಬರೀ ಲೆಕ್ಕ ಹಾಕುತ್ತಿರುತ್ತಾರೆ. ಎಷ್ಟು ಸಾವಿರ, ಲಕ್ಷ, ಕೋಟಿ ಎಂದು ಯೋಚಿಸುತ್ತಿರುತ್ತಾರೆ. ಅನ್ನಕ್ಕೆ ಇಷ್ಟು ಹಾಕಬೇಕು, ಬೇಳೆಗೆ ಇಷ್ಟು ಕೊಡಬೇಕು ಎಂದು. ಕಥೆ ಕೇಳದೆ ಲಿಸ್ಟ್ ಕೊಟ್ಟುಬಿಡುತ್ತಾರೆ. ಇಷ್ಟರಲ್ಲಿ ಆಗಬೇಕು ಎಂದು. ಅಡುಗೆ ಮಾಡುವವರಿಗೆ ಲಿಸ್ಟ್ ಕೊಡುವುದಿಲ್ಲವಾ? ಹಾಗೆ ಲಿಸ್ಟ್ ಕೊಡುತ್ತಾರೆ. ಇಷ್ಟಾದರೆ ಸಿನಿಮಾ ಮಾಡೋಣ ಅಂತ. ದೇವರಾಣೆಗೂ ನನಗೆ ಅಂಥ ನಿರ್ಮಾಪಕರು ಬೇಡ. ನಮ್ಮನ್ನು ಫ್ರೀ ಬಿಡಬೇಕು. ಈ ನಿರ್ಮಾಪಕರಿಗೆ ನಾನು ಎಷ್ಟು ಕ್ಲೀನ್ ಹ್ಯಾಂಡ್ ಅಂತ ಗೊತ್ತು. ನಾನು ಸಾಧನೆ ಮಾಡುವುದಕ್ಕ ಹೊಡೆದಾಡುತ್ತಿರುತ್ತೇನೆ. ಆ ತರಹ ಪ್ಯಾಶನ್ ಇರುವ ಯಾವ ನಿರ್ಮಾಪಕರು ಬಂದರೂ ಸಿನಿಮಾ ಮಾಡುತ್ತೇನೆ’ ಎಂದರು.


