ಸಂಹಾರ ಮಾಡೋಕೆ ‘ರಕ್ತಾಕ್ಷ’ ರೆಡಿ; ಇದೊಂದು ಸೇಡಿನ ಕಥೆ

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ಎಷ್ಟು ಸಾಧ್ಯವೋ ಅಷ್ಟು ಮಾಡಿದ್ದೇನೆ. ಇಲ್ಲಿಯವರೆಗೂ ಚಿತ್ರ ನನ್ನದು. ಇನ್ನು, ಪ್ರೇಕ್ಷಕರದ್ದು. ಅವರು ಏನು ತೀರ್ಮಾನಿಸುತ್ತಾರೋ ಎಂಬ ಕುತೂಹಲ ನನಗೂ ಇದೆ …’

ಹಾಗಂತ ಹೇಳಿದ್ದು ರೋಹಿತ್‍. ನಾಳೆ (ಜುಲೈ 26) ‘ರಕ್ತಾಕ್ಷ’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಾಯಕ ಕಂ ನಿರ್ಮಾಪಕ ಅವರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರೋಹಿತ್, ರಕ್ತಾಕ್ಷ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ನಿರ್ದೇಶನದ ಜವಾಬ್ದಾರಿ ವಾಸುದೇವ್ ಅವರದ್ದು. ಚಿತ್ರ ಬಿಡುಗಡೆಯ ಟೆನ್ಶನ್‍ ಹೇಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ, ಮುಂದಿನದ್ದೆಲ್ಲವನ್ನೂ ಪ್ರೇಕ್ಷಕರು ನಿರ್ಧರಿಸಬೇಕು ಎನ್ನುತ್ತಾರೆ.

‘ರಕ್ತಾಕ್ಷ’ ಒಂದು ಸೇಡಿನ ಕಥೆಯಂತೆ. ಈ ಚಿತ್ರ ಕುರಿತು ಮಾತನಾಡುವ ರೋಹಿತ್‍, ‘ಇದೊಂದು ಥ್ರಿಲ್ಲರ್‍ ಚಿತ್ರ. ಹೆಸರಲ್ಲೇ ಕಥೆ ಏನಿರಬಹುದು ಎಂದು ಸೂಚ್ಯವಾಗಿ ಹೇಳಲಾಗಿದೆ. ಕಣ್ಣುಗಳಲ್ಲಿ ರಕ್ತ ಎಂದರೆ ಸೇಡು ಅಂತಂದುಕೊಳ್ಳಬಹುದು. ಇದೊಂದು ಸೇಡಿನ ಕಥೆ. ಅಷ್ಟೇ ಅಲ್ಲ, ಒಂದು ಆ್ಯಕ್ಷನ್‍ ಥ್ರಿಲ್ಲರ್‍ ಚಿತ್ರ. ನಾನಿಲ್ಲಿ ರೋಹಿತ್‍ ಎಂಬ ಪಾತ್ರ ಮಾಡಿದ್ದೇನೆ. ಹಲವು ಶೇಡ್‍ಗಳಿರುವ ಪಾತ್ರ ನನ್ನದು. ಇಲ್ಲಿ ಯಾರು ಹೀರೋ, ಯಾರು ವಿಲನ್‍ ಎಂಬುದನ್ನು ನಾವು ಹೇಳುವುದಕ್ಕಿಂತ ಪ್ರೇಕ್ಷಕರೇ ಹೇಳಬೇಕು. ನನ್ನದೊಂದೇ ಅಲ್ಲ, ನನ್ನ ಸುತ್ತ ಇರುವ ಪಾತ್ರಗಳಿಗೂ ಹಲವು ಶೇಡ್‍ಗಳಿವೆ. ಚಿತ್ರದಲ್ಲಿ ನಾಲ್ಕು ಮಹಿಳಾ ಪಾತ್ರಗಳಿವೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಒಂದನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ಇನ್ನೊಂದು ಜವಾರಿ ಹಾಡಿದೆ’ ಎಂದು ಮಾಹಿತಿ ಕೊಡುತ್ತಾರೆ.

ಜವಾರಿ ಹಾಡು ಎಂದರೆ ನೆನಪಿಗೆ ಬರೋದು, ರೋಹಿತ್‍ ಸಹ ಮೂಲತಃ ಉತ್ತರ ಕರ್ನಾಟಕದವರು. ಅಷ್ಟೇ ಅಲ್ಲ,ಇತ್ತೀಚೆಗೆ ಮುದ್ಗಲ್‍, ಇಳಕಲ್‍, ಬಾಗಲಕೋಟೆ, ಕುಷ್ಟಗಿ, ಸಿಂಧನೂರು, ಮಸ್ಕಿ, ರಾಯಚೂರು, ಗೋಕಾಕ್‍, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ ಹಲವು ಕಡೆ ಚಿತ್ರದ ಪ್ರಚಾರ ಜೋರಾಗಿ ಮಾಡಿ ಬಂದಿದ್ದಾರೆ. ‘ಅಲ್ಲಿನ ಜನ ತೋರಿದ ಪ್ರೀತಿ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರೇ Bike Rally, Auto Rallyಗಳನ್ನು ಮಾಡಿ ನಮ್ಮ ಚಿತ್ರದ ಪ್ರಚಾರ ಮಾಡಿದ್ದಾರೆ. ಅವರ ಪ್ರೀತಿ ನೋಡಿ ಕಣ್ಣಲ್ಲಿ ನೀರು ಬಂತು. ಅವರಿಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಬೇಕು ಎಂದನಿಸಿತು’ ಎನ್ನುತ್ತಾರೆ ರೋಹಿತ್‍.

‘ರಕ್ತಾಕ್ಷ’ ಚಿತ್ರದಲ್ಲಿ ರೋಹಿತ್ಗೆ ನಾಯಕಿಯರಾಗಿ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್ ನಟಿಸಿದ್ದು, ಮಿಕ್ಕಂತೆ ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ಮುಂತಾದವರು ನಟಿಸಿದ್ದಾರೆ. ಪ್ರಮೋದ್‍ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಅವರ ಸಂಗೀತವಿದೆ.

ಸತೀಶ್, ‘ಅಶೋಕ ಬ್ಲೇಡ್‍’ ಚಿತ್ರಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ: ನಿರ್ಮಾಪಕ ವರ್ಧನ್‍

Discover more from KannadaScreens

Subscribe now to keep reading and get access to the full archive.

Continue reading