ವಿನೋದ್ ದೋಂಡಾಳೆ ಅವರ ಸಾವಿಗೂ, ‘ಅಶೋಕ ಬ್ಲೇಡ್’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿರ್ಮಾಪಕರಲ್ಲೊಬ್ಬರಾದ ವರ್ಧನ್ ಹರಿ ಸ್ಪಷ್ಟಪಡಿಸಿದ್ದಾರೆ.
ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸಿ-ನಿರ್ದೇಶಿಸಿರುವ ವಿನೋದ್ ದೋಂಡಾಳೆ, ಎರಡು ವರ್ಷಗಳ ಹಿಂದೆ ಸತೀಶ್ ನೀನಾಸಂ ಅಭಿನಯದ ‘ಅಶೋಕ ಬ್ಲೇಡ್’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವ ಮೂಲಕ ಹಿರಿತೆರೆಗೆ ಬಂದಿದ್ದರು. ಚಿತ್ರ ಸಾಕಷ್ಟು ವಿಳಂಬವಾಗಿದ್ದಷ್ಟೇ ಅಲ್ಲ, ಕಾರಣಾಂತರಗಳಿಂದ ಚಿತ್ರೀಕರಣ ಸಹ ಪೂರ್ತಿಯಾಗಿಲ್ಲ. ಈ ಮಧ್ಯೆ, ಸಾಲ ಹೆಚ್ಚಾಗಿ ಶನಿವಾರ, ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದರು. ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತು ಎರಡು ಭಾಗಗಳಲ್ಲಿ ಮಾಡುವುದಕ್ಕೆ ಹೋಗಿ ಚಿತ್ರದ ಖರ್ಚು ಜಾಸ್ತಿಯಾದ್ದರಿಂದ, ಸಾಲ ಮಾಡಬೇಕಾಯಿತು ಮತ್ತು ಸಾಲ ಹೆಚ್ಚಾಗಿದ್ದರಿಂದಲೇ ವಿನೋದ್ ಆತ್ಮಹತ್ಯೆಗೆ ಶರಣಾಗಬೇಕಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು, ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡುವುದಕ್ಕೆ ಪ್ರೇರೇಪಿಸಿದ್ದು ನಟ ಸತೀಶ್ ನೀನಾಸಂ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ನಿರ್ಮಾಪಕರಲ್ಲೊಬ್ಬರಾದ ವರ್ಧನ್ ಹರಿ, ‘ವಿನೋದ್ ಅವರ ಅವರ ಸಾವಿಗೂ, ‘ಅಶೋಕ ಬ್ಲೇಡ್’ ಚಿತ್ರಕ್ಕೂ ಸಂಬಂಧವಿಲ್ಲ. ಸಮಸ್ಯೆ ಇದ್ದಿದ್ದು ಹೌದು. ಚಿತ್ರ ಶುರುವಾಗಿ ಎರಡು ವರ್ಷವಾದರೂ ಇನ್ನೂ ಮುಗಿದಿಲ್ಲ, ಇನ್ನೂ ಚಿತ್ರೀಕರಣ ಬಾಕಿ ಇದೆ ಎಂಬ ಬೇಸರ ವಿನೋದ್ ಅವರಿಗೆ ಇತ್ತು. ಆದರೆ, ಅದಕ್ಕೆ ಪರಿಹಾರ ಹಿಂದಿನ ದಿನವಷ್ಟೇ ಸಿಕ್ಕಿತ್ತು. ಶುಕ್ರವಾರವಷ್ಟೇ ನಮಗೆ ಹೂಡಿಕೆದಾರರು ಸಿಕ್ಕಿದ್ದರು. ಚಿತ್ರದ ಶೋರೀಲ್ ನೋಡಿ, ಚಿತ್ರಕ್ಕೆ ಐದು ಕೋಟಿಯಷ್ಟು ಹೂಡಿಕೆ ಮಾಡುವುದಕ್ಕೆ ರೆಡಿಯಾಗಿದ್ದರು. ಇದರಿಂದ ವಿನೋದ್ ಸಹ ಬಹಳ ಖುಷಿಯಾಗಿದ್ದರು. ಖುಷಿಯಿಂದಲೇ ಮನೆಗೆ ಹೋದರು. ಪರಿಹಾರ ಸಿಗಲಿಲ್ಲ ಎಂದರೆ ಡಿಪ್ರೆಷನ್ಗೆ ಹೋದರು ಎನ್ನಬಹುದಿತ್ತು. ಆದರೆ, ಪರಿಹಾರ ಸಿಕ್ಕಿತ್ತು. ಆದರೆ, ಶನಿವಾರ ಬೆಳಿಗ್ಗೆ ಅವರು ನಿಧನರಾದ ಸುದ್ದಿ ಬಂತು’ ಎನ್ನುತ್ತಾರೆ ವರ್ಧನ್.

‘ಸತೀಶ್ ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ. ಈ ಚಿತ್ರ ಅವರ ಚಿತ್ರಜೀವನದಲ್ಲಿ ವಿಭಿನ್ನವಾದ ಚಿತ್ರವಾಗುತ್ತದೆ ಎಂದು ಬಹಳ ಖುಷಿಯಾಗಿದ್ದರು. ಕಂಟೆಂಟ್ಗಾಗಿ ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳುತ್ತಲೇ ಇದ್ದರು. ನಾವು ಕನ್ನಡ ಚಿತ್ರವೆಂದೇ ಚಿತ್ರೀಕರಣ ಶುರು ಮಾಡಿದೆವು. ಚಿತ್ರೀಕರಣ ಮುಗಿದ ಮೇಲೆ ಡಬ್ ಮಾಡುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಇತ್ತು. ಹಾಗಾಗಿ, ಅಷ್ಟೊಂದು ಖರ್ಚಾಗಿಲ್ಲ. ನಾವು ಸತೀಶ್ ಜೊತೆಗೆ ಸಿನಿಮಾ ಮಾಡಬೇಕೆಂದು ಹೊರಟಾಗ, ನಿರ್ದೇಶಕರ ಕಲ್ಪನೆಯ ಪ್ರಕಾರ ಹೋಗೋಣ, ಅದಕ್ಕೆ ನಿಮ್ಮ ಸಂಪೂರ್ಣ ಸಹಕಾರ ಬೇಕು ಎಂದಾಗ ಅವರು ಅದಕ್ಕೆ ಒಪ್ಪಿ ಬಂದರು. ಹೇಳಿದ ಸಮಯಕ್ಕೆ ಬಂದರು, ಹೇಳಿದ್ದು ಮಾಡಿದರು. ಬೇರೆ ಚಿತ್ರಗಳನ್ನೂ ಒಪ್ಪಿಕೊಳ್ಳಲಿಲ್ಲ. ಅವರು ‘ಅಯೋಗ್ಯ 2’ ಚಿತ್ರ ಮಾಡಬೇಕಿತ್ತು. ಆ ಚಿತ್ರತಂಡದವರು ಕರೆಯುತ್ತಲೇ ಇದ್ದರು. ಆದರೆ, ಇದನ್ನು ಮುಗಿಸಿಬರುತ್ತೇನೆ ಎಂದು ಅವರು ಹೋಗಲೇ ಇಲ್ಲ’ ಎನ್ನುತ್ತಾರೆ ವರ್ಧನ್.
ಒಂದು ಹಾಡು, ಫೈಟು ಸೇರಿದಂತೆ ಒಂದಿಷ್ಟು ಚಿತ್ರೀಕರಣ ಬಾಕಿ ಇರುವುದು ಬಿಟ್ಟರೆ ಮಿಕ್ಕಂತೆ ಎಲ್ಲ ಮುಗಿದಿದೆ ಎನ್ನುವ ವರ್ಧನ್, ‘ಸಮಸ್ಯೆ ಆಗಿದ್ದು ಪ್ಲಾನಿಂಗ್ನಿಂದ. ನಾವು 45 ದಿನಗಳಲ್ಲಿ ಚಿತ್ರೀಕರಣ ಮುಗಿಸಬೇಕೆಂದುಕೊಂಡಿದ್ದೆವು. ಆದರೆ, 87 ದಿನ ಆಯ್ತು. ಆರಂಭದಲ್ಲಿ ಒಂದೂವರೆ ಕೋಟಿಯಲ್ಲಿ ಮುಗಿಸಬೇಕು ಅಂತಂದುಕೊಂಡಿದ್ದು ಹೌದು. ಆದರೆ, ಚಿತ್ರ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡದಾಯ್ತು. ನಾಲ್ಕು ದಿನಗಳ ಕ್ಲೈಮ್ಯಾಕ್ಸ್ ಚಿತ್ರೀಕರಣ 14 ದಿನಗಳಾಯ್ತು, ನಾಲ್ಕು ಲಕ್ಷ ಅಂತಂದುಕೊಂಡಿದ್ದು 45 ಲಕ್ಷ ಬರೀ ಕ್ಲೈಮ್ಯಾಕ್ಸ್ ಫೈಟ್ಗಾಯ್ತು. ಚೆನ್ನಾಗಿ ಮಾಡಬೇಕು ಅಂತ ಹೋಗಿದ್ದಿಕ್ಕೆ ಹೀಗಾಯ್ತು. ಬಜೆಟ್ ಜಾಸ್ತಿಯಾದಾಗಲೂ ಸತೀಶ್ ಬೇಡ ಎಂದರು. ಇದೆಲ್ಲವೂ ವಿನೋದ್ ಸಮ್ಮುಖದಲ್ಲಿ ಆಯ್ತು. ನಾವು ಯಾವಾಗ ಸಿಕ್ಕರೂ ಸಿನಿಮಾ ಬಗ್ಗೆ ಮಾತನಾಡುತ್ತಿದ್ದೆವು. ಚಿತ್ರದ ಬಗ್ಗೆ ವಿನೋದ್ಗೆ ತುಂಬಾ ವಿಶ್ವಾಸವಿತ್ತು’ ಎನ್ನುತ್ತಾರೆ ವರ್ಧನ್.
ವಿನೋದ್ ಅವರ ಜಾಗವನ್ನು ತುಂಬಿಸೋಕೆ ಸಾಧ್ಯವೇ ಇಲ್ಲ ಎನ್ನುವ ವರ್ಧನ್, ‘ವಿನೋದ್ ಇರಬೇಕಾಗಿತ್ತು. ಈ ಸಮಸ್ಯೆಗಳಿಗೆಲ್ಲಾ ಏನಾದರೂ ಪರಿಹಾರ ಕಂಡುಕೊಳ್ಳಬಹುದಿತ್ತು. ಅವರು ಸ್ವಲ್ಪ ಧೈರ್ಯ ಮಾಡಬೇಕಿತ್ತು. ಈ ಚಿತ್ರದಿಂದ ನಿಮಗೆ ತುಂಬಾ ದೊಡ್ಡ ಹೆಸರು ಬರುತ್ತೆ ಎಂದು ಹೇಳುತ್ತಲೇ ಇದ್ದೆ. ಇದು ಅವರ ಕನಸು. ಚಿತ್ರ ಮುಗಿಯುವ ಮೊದಲೇ ಅವರಿಲ್ಲ ಎಂಬ ವಿಷಯ ತುಂಬಾ ಕಾಡುತ್ತದೆ’ ಎಂದು ಮಾತು ಮುಗಿಸುತ್ತಾರೆ.
ಅಂದಹಾಗೆ, ‘ಅಶೋಕ ಬ್ಲೇಡ್’ ಚಿತ್ರದ ಬಾಕಿ ಇರುವ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭವಾಗಲಿದೆ.


