ಮಾಯೆಯಾದ ಮಾನ್ಯ; ‘ಬ್ಯಾಕ್‍ ಬೆಂಚರ್ಸ್’ ಹುಡುಗಿಯ ಕಥೆ ಇದು

ಚಂದನವನ, ಸಂದರ್ಶನ, ಸಿನಿ ಸುದ್ದಿ

ಕನ್ನಡ ಚಿತ್ರರಂಗಕ್ಕೆ ಪ್ರತೀ ವಾರ ಅದೆಷ್ಟು ಹೊಸ ಹುಡುಗಿಯರು ನಾಯಕಿಯರಾಗಿ ಬರುತ್ತಿದ್ದಾರೋ ಲೆಕ್ಕ ಇಟ್ಟವರಿಲ್ಲ. ವರ್ಷದ ಆರಂಭದಿಂದ ಇಲ್ಲಿಯವರೆಗೂ 50ಕ್ಕೂ ಹೆಚ್ಚು ಯುವತಿಯರು ನಾಯಕಿಯರಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಈಗ ಆ ಸಾಲಿಗೆ ಮಾನ್ಯ ಸಹ ಸೇರಿದ್ದಾರೆ.

ರಾಜಶೇಖರ್ ನಿರ್ಮಿಸಿ-ನಿರ್ದೇಶಿಸಿರುವ ‘ಬ್ಯಾಕ್‍ ಬೆಂಚರ್ಸ್’ಚಿತ್ರವು ಇದೇ ಜುಲೈ 19 ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಮೂಲಕ ಸಾಕಷ್ಟು ಹೊಸ ಹುಡುಗರು-ಹುಡುಗಿಯರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಆ ಪೈಕಿ ಮಾನ್ಯ ಗೌಡ ಸಹ ಒಬ್ಬರು.

ಇಂಜಿನಿಯರಿಂಗ್‍ ಮುಗಿಸಿರುವ ಮಾನ್ಯ, ‘ಬ್ಯಾಕ್‍ ಬೆಂಚರ್ಸ್’ ಚಿತ್ರದ ನಾಯಕಿಯರಲ್ಲೊಬ್ಬರು. ಈ ಚಿತ್ರದಲ್ಲಿ ಮಾಯ ಎಂಬ ಪಾತ್ರವನ್ನು ನಿರ್ವಹಿಸಿರುವ ಅವರು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡುವ ಮಾನ್ಯ. ‘ಚಿತ್ರದಲ್ಲಿ ನಾಲ್ಕು ನಾಯಕಿಯರಿದ್ದು, ಅದರಲ್ಲಿ ನಾನೂ ಒಬ್ಬಳು. ರಿಹರ್ಸಲ್‍ ಸಮಯದಲ್ಲಿ ಈ ನಾಲ್ಕೂ ಪಾತ್ರಗಳನ್ನು ಮಾಡಿದ್ದೆ. ಅದರಲ್ಲಿ ನನಗೆ ಮಾಯ ಪಾತ್ರ ಬಹಳ ಇಷ್ಟವಾದ ಪಾತ್ರ. ಈ ಪಾತ್ರ ನನಗೆ ಸೂಟ್‍ ಆಗುತ್ತದೆ, ನಾನಿದನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆಯಿಂದ ಈ ಪಾತ್ರ ಕೊಟ್ಟಿದ್ದಾರೆ. ಬಹಳ ಬೋಲ್ಡ್ ಆದ ಪಾತ್ರ ಇದು. ನನಗಿಷ್ಟವಾದ ಪಾತ್ರ ಸಿಕ್ಕ ಖುಷಿ ಇದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಮಾನ್ಯ.

‘ಬ್ಯಾಂಕ್‍ ಬೆಂಚರ್ಸ್’ ಚಿತ್ರಕ್ಕೆ ಆಯ್ಕೆಯಾಗಿದ್ದೇ ಒಂದು ಪವಾಡ ಎನ್ನುವ ಮಾನ್ಯ, ‘ಮೂರು ವರ್ಷಗಳ ಹಿಂದೆ ನಾನು ಇಂಜಿನಿಯರಿಂಗ್‍ ಮುಗಿಸಿದೆ. ನನಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು. ಶಾಸ್ತ್ರೀಯ ನೃತ್ಯ ಕಲಿತಿದ್ದೇನೆ. ರಂಗಭೂಮಿಯಲ್ಲಿ ಸಕ್ರಿಯವಾಗಿದ್ದೆ. ಹೀಗಿರುವಾಗಲೇ ‘ಬ್ಯಾಕ್‍ ಬೆಂಚರ್ಸ್’ ಚಿತ್ರಕ್ಕೆ ಆಡಿಷನ್‍ ಆಗುತ್ತಿರುವ ವಿಷಯ ಗೊತ್ತಾಯಿತು. ಆ ಆಡಿಷನ್‍ನಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಸುಮಾರು 700 ಯುವಕ-ಯುವತಿಯರು ಭಾಗವಹಿಸಿದ್ದರು. ನಿರ್ದೇಶಕರು ಕೊಟ್ಟ ಕೆಲವು ದೃಶ್ಯಗಳನ್ನು ನಾನು ನನ್ನದೇ ರೀತಿಯಲ್ಲಿ ಅಭಿನಯಿಸಿ ತೋರಿಸಿದೆ. ಅಷ್ಟೊಂದು ಜನರ ಮಧ್ಯೆ ನಾನು ಆಯ್ಕೆಯಾಗುತ್ತೀನೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ, ಅಂತಿಮವಾಗಿ ಚಿತ್ರತಂಡಕ್ಕ ಆಯ್ಕೆಯಾದ 30 ಜನರಲ್ಲಿ ನಾನು ಒಬ್ಬಳಾಗಿದ್ದೆ’ ಎನ್ನುತ್ತಾರೆ.

ಚಿತ್ರೀಕರಣದ ಅನುಭವ ಮರೆಯಲಾಗದ್ದು ಎನ್ನುವ ಮಾನ್ಯ, ‘ನಾನು ಹೊಸಬಳು. ಹಾಗಾಗಿ ಸಹಜವಾಗಿಯೇ ನರ್ವಸ್‍ ಆಗಿದ್ದೆ. ಆದರೆ, ನಮ್ಮ ನಿರ್ದೇಶಕರಾದ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ನನಗೂ ಸೇರಿದಂತೆ ಎಲ್ಲರಿಗೂ ಬಹಳ ಚೆನ್ನಾಗಿ ಗೈಡ್‍ ಮಾಡಿದ್ದಾರೆ. ನನಗೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿರುವುದಷ್ಟೇ ಅಲ್ಲ, ನನ್ನನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಮತ್ತು ಮಾರ್ಕೆಟಿಂಗ್‍ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಒಟ್ಟಾರೆ ಈ ಚಿತ್ರದ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎನ್ನುತ್ತಾರೆ.

‘ಬ್ಯಾಕ್‍ ಬೆಂಚರ್ಸ್’, ಮಾನ್ಯ ನಾಯಕಿಯಾಗಿ ನಟಿಸಿರುವ ಮೊದಲ ಚಿತ್ರವಾದರೂ, ಈಗಾಗಲೇ ‘ಮಾನ್ಸೂನ್ ರಾಗ’ ಮತ್ತು ‘ವೀರಂ’ ಚಿತ್ರಗಳಲ್ಲೂ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನಲ್ಲಿ ‘ಮಿಸಸ್ ಕರ್ನಲ್‍’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಒಂದಿಷ್ಟು ಅವಕಾಶಗಳಿದ್ದರೂ, ಮಾನ್ಯ ಗ್ರೀನ್‍ ಸಿಗ್ನಲ್‍ ಕೊಟ್ಟಿಲ್ಲ. ‘ಬ್ಯಾಕ್‍ ಬೆಂಚರ್ಸ್‍’ ಬಿಡುಗಡೆ ನೋಡಿಕೊಂಡು ಮುಂದಿನ ಹೆಜ್ಜೆ ಇಡುವುದಕ್ಕೆ ಮಾನ್ಯ ತೀರ್ಮಾನಿಸಿದ್ದಾರೆ.

ರಾಣಾಗೆ ಇಲ್ಲದ ಹಾಡು ಜ್ಯೂಲಿಗಿದೆ; ‘ಹಿರಣ್ಯ’ದಲ್ಲಿ ದಿವ್ಯ ಸುರೇಶ್‍

Discover more from KannadaScreens

Subscribe now to keep reading and get access to the full archive.

Continue reading