ಕಷ್ಟಗಳನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಇದು: ಅಜಯ್‍ ಪೃಥ್ವಿ

ಚಂದನವನ, ಸಂದರ್ಶನ, ಸಿನಿ ಸುದ್ದಿ

ಅಜಯ್‍ ಪೃಥ್ವಿ ಅಭಿನಯದ ಎರಡನೆಯ ಚಿತ್ರವಾದ ‘ನಾಟ್‍ ಔಟ್‍’ ಇದೇ ಶುಕ್ರವಾರ (ಜುಲೈ 19) ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಹಿಂದೆ ‘ಪುರುಷೋತ್ತಮನ ಪ್ರಸಂಗ’ ಚಿತ್ರದ ಮೂಲಕ ಹೀರೋ ಆದ ಅಜಯ್ ಪೃಥ್ವಿ, ಈ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‍ ಸಹ ಬಿಡುಗಡೆ ಆಗಿದೆ.

ಈ ಚಿತ್ರದಲ್ಲಿ ಅಜಯ್‍, ಆ್ಯಂಬ್ಯುಲೆನ್ಸ್ ಡ್ರೈವರ್‍ನ ಪಾತ್ರ ಮಾಡುತ್ತಿದ್ದಾರೆ ಮಾಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, ‘ಇದರಲ್ಲಿ ನನ್ನದು ಆ್ಯಂಬ್ಯುಲೆನ್ಸ್ ಡ್ರೈವರ್ ಪಾತ್ರ. ಕೋವಿಡ್ ಸಂದರ್ಭದಲ್ಲಿ ನಡೆಯುವ ಕಥೆ ಇದು. ಇದೊಂದು ಡಾರ್ಕ್ ಕಾಮಿಡಿ ಜಾನರ್‍ನ ಚಿತ್ರ. ಮನುಷ್ಯ ಎದುರಿಸುವ ಕಷ್ಟಗಳನ್ನು ತಮಾಷೆಯಾಗಿ ತೋರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನಾನು ಚಿತ್ರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇನೆ. ಇನ್ನೊಂದು ಕಡೆ ರವಿಶಂಕರ್‍ ಅವರಿಂದ ಫೈನಾನ್ಸ್ ಪಡೆದಿರುತ್ತೇನೆ. ಈ ಮಧ್ಯೆ, ಕೋವಿಡ್‍ ಬರುತ್ತದೆ. ಆಗ ಏನೆಲ್ಲಾ ಆಗುತ್ತದೆ ಎನ್ನುವುದು ಈ ಚಿತ್ರದ ಕಥೆ’ ಎನ್ನುತ್ತಾರೆ.

‘ನಿರ್ದೇಶಕ ಅಂಬರೀಶ್‍ ಅವರು ಕಥೆ ಹೇಳಿದಾಗಲೇ ಬಹಳ ಇಷ್ಟವಾಗಿತ್ತು. ಅವರು ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದರು ಅವರು. ಅದಕ್ಕೆ ಪೂರಕವಾಗಿ ಒಂದಿಷ್ಟು ತಯಾರಿ ನಡೆಸಿದೆ. ನಿಜವಾದ ಆ್ಯಂಬ್ಯುಲೆನ್ಸ್ ಡ್ರೈವರ್‍ ಜೊತೆಗೆ ಇದ್ದು, ಅವರನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರು ಹೇಗಿರುತ್ತಾರೆ, ಹೇಗೆ ಯೋಚಿಸುತ್ತಾರೆ, ಅವರ ಟೆಂಪರ್ಮೆಂಟ್ ಹೇಗಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಆ ನಂತರ ಒಂದಿಷ್ಟು ದಿನ ವರ್ಕ್‍ಶಾಪ್‍ ಮಾಡಿ, ಆ ನಂತರ ಚಿತ್ರೀಕರಣಕ್ಕೆ ಹೋದೆ’ ಎನ್ನುತ್ತಾರೆ ಅಜಯ್.

‘ಪುರುಷೋತ್ತಮನ ಪ್ರಸಂಗ’ನ ಪುರುಷೋತ್ತಮನಿಗೂ ‘ನಾಟ್‍ ಔಟ್‍’ ಚಿತ್ರದ ಪಾತ್ರಕ್ಕೂ ಯಾವುದೇ ಹೋಲಿಕೆಗಳಿರುವುದಿಲ್ಲ, ಎರಡೂ ಸಂಪೂರ್ಣ ವಿಭಿನ್ನವಾಗಿರುತ್ತದೆ ಎನ್ನುವ ಅವರು, ‘ಎರಡೂ ಪಾತ್ರಗಳು ಬಹಳ ವಿಭಿನ್ನವಾಗಿವೆ. ಎರಡು ದಿಕ್ಕುಗಳಲ್ಲಿವೆ. ಆತ ಒಬ್ಬ ಮುದ್ದಾದ ಮನುಷ್ಯ. ಪಕ್ಕಾ ಫ್ಯಾಮಿಲಿ ಮ್ಯಾನ್‍. ಇದರಲ್ಲಿ ಸಂಪೂರ್ಣ ಬೇರೆ ತರಹ’ ಎನ್ನುತ್ತಾರೆ.
‘ನಾಟ್‍ ಔಟ್‍’ ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ. ರವಿಕುಮಾರ್ ಹಾಗೂ ಶಂಶುದ್ದೀನ್ ನಿರ್ಮಿಸಿದ್ದಾರೆ. ಅಂಬರೀಶ್‍ ಎಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಜಯ್ ಪೃಥ್ವಿಗೆ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ ‘ಕಾಕ್ರೋಚ್‍’ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಮತ್ತು ಹಾಲೇಶ್‍ ಛಾಯಾಗ್ರಹಣವಿದೆ.

ಕಾಮಿಡಿ ಪಕ್ಕಕ್ಕಿಟ್ಟು ‘ಕರಾವಳಿ’ಯಲ್ಲಿ ವಿಲನ್‍ ಆದ ಮಿತ್ರ

Discover more from KannadaScreens

Subscribe now to keep reading and get access to the full archive.

Continue reading