ಕನ್ನಡದ ಹೀರೋಗಳು ತುಂಬಾ ನಿಧಾನ ಮಾಡುತ್ತಿದ್ದಾರೆ, ಸರಿಯಾಗಿ ಸಿನಿಮಾ ಮಾಡುತ್ತಿಲ್ಲ ಎಂಬ ಕೂಗು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ, ಚಿತ್ರಮಂದಿರಗಳಿಗೆ ಜನ ಬಾರದೇ ಇರುವುದರಿಂದ, ಅವರನ್ನು ಸೆಳೆಯುವುದಕ್ಕೆ ಸ್ಟಾರ್ ನಟರು ಹೆಚ್ಚುಹೆಚ್ಚು ಸಿನಿಮಾ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಜೊತೆಗೆ ಮುಂದಿನ ದಿನಗಳಲ್ಲಿ ಸಭೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ವರ್ಷಕ್ಕೆ 2 ಚಿತ್ರ ಮಾಡಿ ಎಂದರೆ ಹೇಗೆ?: ರವಿಚಂದ್ರನ್ ಪ್ರಶ್ನೆ
ಆದರೆ, ಸ್ಟಾರ್ ನಟರ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದು ನಟ-ನಿರ್ದೇಶಕ ರವಿಚಂದ್ರನ್ ಹೇಳಿದ್ದಾರೆ. ಇನ್ನು, ನಟ ಧ್ರುವ ಸರ್ಜಾ ಸಹ ಗುಣಮಟ್ಟದ ಚಿತ್ರಗಳನ್ನು ಕೊಡಬೇಕೆಂದರೆ, ಚಿತ್ರ ತಡವಾಗುವುದು ಸಹಜ ಎಂದಿದ್ದಾರೆ.
ಭಾನುವಾರ, ‘ಕೆಡಿ – ದಿ ಡೆವಿಲ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರರಂಗದಲ್ಲಿ ಸ್ಟಾರ್ ಅಂತ ಯಾರೂ ಇಲ್ಲ. ಒಳ್ಳೆಯ ಕಥೆಯೇ ಹೀರೋ. ಜನವರಿಯಿಂದ ಇಲ್ಲಿಯವರೆಗೂ 100 ಸಿನಿಮಾಗಳು ಬಿಡುಗಡೆ ಆಗಿವೆ. ಇಲ್ಲಿ ಸ್ಟಾರ್ ಸಿನಿಮಾಗಳು ಅನ್ನೋದಕ್ಕಿಂತ, ಸಿನಿಮಾ ಚೆನ್ನಾಗಿದ್ದರೆ ಅವರೇ ಸ್ಟಾರ್. ಎರಡನೆಯದಾಗಿ, ಚಿತ್ರ ತಡವಾಗುತ್ತಿರುವುದು ಬೇರೆ ಯಾವುದೋ ಕಾರಣಕ್ಕಲ್ಲ, ಗುಣಮಟ್ಟಕ್ಕೆ. ಯೋಚನೆ ಮಾಡಿ ಮಾಡೋಣ ಎಂದು ಎಲ್ಲರೂ ಸ್ವಲ್ಪ ನಿಧಾನ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ಸ್ಪರ್ಧೆ’ ಎಂದರು.
ಅದರ ಜೊತೆಗೆ ಜಾಸ್ತಿ ಸಿನಿಮಾ ಮಾಡಬೇಕೆನ್ನುವ ವಾದ ಸರಿ ಎನ್ನುವ ಅವರು, ‘ಕಂಟೆಂಟ್ ಎಲ್ಲರಿಗೂ ಇಷ್ಟ ಆಗಬೇಕು ಎನ್ನುವ ಕಾರಣಕ್ಕೇ ನಾವು ಏನೇನೋ ಪ್ರಯತ್ನಗಳನ್ನು ಮಾಡುತ್ತಿರುವುದು. ಸುಮ್ಮನೆ ಏನೋ ಮಾಡಿದರೆ, ‘ನೋಡು ಕಿತ್ತೋದ್ ಸಿನಿಮಾ ಮಾಡಿದ್ದಾನೆ’ ಎಂದು ನೀವೇ ಕೇಳುತ್ತೀರಾ. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ, ನಮ್ಮಿಂದ ಬೇರೆ ಕಡೆ ಹೋಗಬೇಕು. ಆಗ ಏನಾದರೂ ವಿಶೇಷವಾಗಿರಬೇಕು ಮತ್ತು ಯೂನಿವರ್ಸಲ್ ಆಗಿರಬೇಕು. ಬರೀ ಕನ್ನಡಕ್ಕೆ ಮಾಡುವುದಾಗಿದ್ದರೆ ಓಕೆ. ಬೇರೆಯವರಿಗೂ ಒಪ್ಪಿಸಬೇಕು ಎಂದರೆ ಸಹಜವಾಗಿಯೇ ಸಮಯ ಆಗುತ್ತದೆ. ಇದೆಲ್ಲವನ್ನೂ ಹೊರತುಪಡಿಸಿದರೆ, ನೀವು ಹೇಳುವುದರಲ್ಲಿ ಅರ್ಥವಿದೆ. ಜಾಸ್ತಿ ಸಿನಿಮಾ ಮಾಡಬೇಕು. ಖಂಡಿತಾ ಮಾಡುತ್ತೇನೆ’ ಎಂದರು.
ಇದನ್ನೂ ಓದಿ: ಕ್ಲಾಸ್‍ರೂಂನಲ್ಲಿ ‘ಐ ಲವ್ ಯೂ ಸಮಂತಾ’ ಎಂದ ಸಮರ್ಜಿತ್
ಇನ್ನು, ಇತ್ತೀಚೆಗೆ ನಡೆದ ‘ಮಾರ್ಟಿನ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ‘ದೂರದ ಬೆಟ್ಟ ನುಣ್ಣಗೆ ಎಂಬ ಮಾತಿದೆ. ದೂರದಿಂದ ನೋಡಿದರೆ ಎಲ್ಲವೂ ಚೆನ್ನಾಗಿರುತ್ತದೆ. ಹತ್ತಿರ ಹೋಗಿ ನೋಡಿದರೆ, ಅಲ್ಲಿ ಕಲ್ಲಿರುವುದು ಗೊತ್ತಾಗುತ್ತದೆ. ಚಿತ್ರ ತಡವಾಗುವುದಕ್ಕೆ ನಮ್ಮದೇ ಆದ ಹಲವು ಕಾರಣಗಳಿವೆ. ಅವರ ದೃಷ್ಟಿಯಲ್ಲಿ ನೋಡಿದರೆ ಅದು ಸರಿ. ಇಷ್ಟು ತಡ ಮಾಡುವುದು ತಪ್ಪು. ನಮ್ಮ ದೃಷ್ಟಿಕೋನದಲ್ಲಿ ಸರಿ ಇರಬಹುದು. ಇನ್ನು ಮುಂದೆ ಹೆಚ್ಚು ತಡ ಮಾಡುವುದಿಲ್ಲ’ ಎಂದು ಹೇಳಿದ್ದರು.


