ಇದು ‘ಸೈಡ್‍ ಎ’ ಮಾತ್ರ; ‘ಸೈಡ್‍ ಬಿ’ ಇನ್ನೂ ಬರೋದಿದೆ!

ಚಂದನವನ, ಸಿನಿ ಸುದ್ದಿ

ಸಿನಿಮಾದಲ್ಲಿ ‘ಸೈಡ್‍ ಎ’, ‘ಸೈಡ್‍ ಬಿ’ ಅಂತ ಎರಡೆರಡು ಭಾಗಗಿರುವುದು ಮಾಮೂಲಿ. ಅದಕ್ಕೊಂದು ಉದಾಹರಣೆ ಎಂದರೆ ‘ಸಪ್ತ ಸಾಗರದಾಚೆ ಎಲ್ಲೋ’. ಈಗ ಚಿತ್ರವನ್ನು ಬೇರೆಬೇರೆ ಭಾಗಗಳಲ್ಲಿ ವಿಂಗಡಿಸಿದಂತೆ, ಟ್ರೇಲರ್ ಅನ್ನು ಸಹ ವಿಂಗಡಿಸಲಾಗಿದೆ. ಚಂದನ್‍ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೊದಲ ಟ್ರೇಲರ್‍ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಸೈಡ್‍ ಎ ಎಂದು ಕರೆಯಲಾಗಿದೆ. ಈ ಮೂಲಕ ಚಿತ್ರ ಬಿಡುಗಡೆಯ ಹೊತ್ತಿಗೆ ಇನ್ನೊಂದು ಟ್ರೇಲರ್‍ ಬಿಡುಗಡೆ ಮಾಡುವ ಮುನ್ಸೂಚನೆಯನ್ನು ಚಿತ್ರತಂಡ ನೀಡಿದೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಹೆಸರೇ ಹೇಳುವಂತೆ ಇದು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕುರುತಾದ ಚಿತ್ರ. ಕಾಲೇಜ್ ಹುಡುಗಹುಡುಗಿಯರ ಹದಿಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ. ಹಾಗಂತ ಇದು ಮಾಮೂಲಿಯಾಗೂ ಕಮರ್ಷಿಯಲ್‍ ಚಿತ್ರವಲ್ಲ. ಹೊಡೆದಾಟ, ಬಡಿದಾಟ, ragging, ಬಿಸಿ ರಕ್ತದ ಹುಡುಗರ ಪುಂಡಾಟಿಕೆ ಜೊತೆಗೆ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ. ಮೋಜು ಮಸ್ತಿಯಲ್ಲಿ ಮೈಮರೆತ ಮನಸ್ಥಿತಿಗಳ ಕುರಿತಾಗಿಯೂ ಬೆಳಕು ಚೆಲ್ಲಲಾಗಿದೆ. ಹಿಡಿತ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಯತ್ನವೂ ಇದೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಅರುಣ್‍ ಅಮುಕ್ತ, ‘ಟ್ರೇಲರ್‍ ಇಷ್ಟವಾದರೆ, ಅದನ್ನು ಕೈಲಾದಷ್ಟೂ ಶೇರ್‍ ಮಾಡಿ. ಇವತ್ತು ನಾವು ಯುವಕರನ್ನು ದೂಷಿಸುತ್ತೇವೆ. ಅದಕ್ಕಿಂತ ಮುನ್ನ ಅವರಿಗೆ ಆ ಸ್ವಾತಂತ್ರ್ಯವನ್ನು ಕೊಟ್ಟಿರುವವರು ಯಾರು ಎಂಬುದನ್ನು ನಾವು ಯೋಚಿಸಬೇಕು. ಅವರಿಗೆ ಆ ಸ್ವಾತಂತ್ರ್ಯವನ್ನು ಕೊಟ್ಟಿರುವುದು ಅವರ ತಂದೆ-ತಾಯಿ. ತಂದೆ-ತಾಯಿ ಚೆನ್ನಾಗಿ ದುಡಿಯುತ್ತಿದ್ದಾರೆ ಮತ್ತು ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದಾರೆ. ಆದರೆ, ಮಕ್ಕಳನ್ನು ಕಂಟ್ರೋಲ್‍ ಮಾಡುವುದಕ್ಕೆ ಅವರಿಂದ ಆಗುತ್ತಿಲ್ಲ. ಇವತ್ತು ಮಕ್ಕಳನ್ನು ಕಂಟ್ರೋಲ್‍ ಮಾಡುತ್ತಿರುವುದು ತಂತ್ರಜ್ಞಾನ. ಇದರಿಂದ ಏನೆಲ್ಲಾ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಚಿತ್ರ ಸೆನ್ಸಾರ್‍ ಆಗಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಿದೆ’ ಎನ್ನುತ್ತಾರೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವನ್ನು ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ., ಕುಮಾರ್ ಗೌಡ ಛಾಯಾಗ್ರಹಣ, ವಿಜೇತ್‍ ಕೃಷ್ಣ ಮತ್ತು ವಾಸು ದೀಕ್ಷಿತ್‍ ಅವರ ಸಂಗೀತ ಈ ಚಿತ್ರಕ್ಕಿದೆ.

ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ‘ಕಾಕ್ರೋಚ್’ ಸುಧಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

‘ಕೋಟಿ’ ಚಿತ್ರದ ‘ಮಾತು ಸೋತು’ ಹಾಡು ಬಿಡುಗಡೆ …

Discover more from KannadaScreens

Subscribe now to keep reading and get access to the full archive.

Continue reading