‘ನನಗೆ ಬೇರೆ ತರಹದ ಪಾತ್ರಗಳನ್ನೂ ಮಾಡುವ ಶಕ್ತಿ ಇದೆ …’

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ನನ್ನನ್ನು ಕಾಮಿಡಿಗೆ ಬ್ರ್ಯಾಂಡ್ ಮಾಡಬೇಡಿ. ಬೇರೆ ತರಹದ ಅವಕಾಶಗಳನ್ನೂ ಕೊಡಿ. ಇದುವರೆಗೂ ಕಾಣಿಸಿಕೊಂಡಿರುವ ಚಿತ್ರಗಳೆಲ್ಲಾ ಹೆಚ್ಚಾಗಿ ಫಾರ್ಮಲ್ ಬಟ್ಟೆಗಳಲ್ಲಿ, ಸೂಟ್‍ನಲ್ಲೇ ಕಾಣಿಸಿಕೊಂಡಿದ್ದೇನೆ. ಅದರ ಹೊರತಾಗಿಯೂ ನನಗೆ ಬೇರೆ ತರಹದ ಪಾತ್ರಗಳನ್ನು ಮಾಡುವ ಶಕ್ತಿ ಇದೆ …’

ಹಾಗಂತ ಹೇಳಿದ್ದು ರಾಘು ರಾಮನಕೊಪ್ಪ. ಅವರು ಚಿತ್ರರಂಗಕ್ಕೆ ಬಂದು ಏಳೂವರೆ ವರ್ಷಗಳಾದರೂ, ನಟಿಸಿದ ಚಿತ್ರಗಳ ಸಂಖ್ಯೆ ನೂರು ದಾಟಿದರೂ, ಅವರ ಹೆಸರಿನ ಕುರಿತು ಒಂದಿಷ್ಟು ಗೊಂದಲಗಳಿವೆ. ಅವರು ರಘು ರಾಮನಕೊಪ್ಪನೋ, ರಘುರಾಮ್‍ ಕೊಪ್ಪನೋ, ರಘು ರಮಣಕೊಪ್ಪನೋ ಎಂಬ ಗೊಂದಲವಿದೆ. ಅದಕ್ಕೆ ಕಾರಣ ಒಂದೊಂದು ಚಿತ್ರತಂಡವೂ ಅವರನ್ನು ಒಂದೊಂದು ಹೆಸರಿನಲ್ಲಿ ಸಂಬೋಧಿಸುತ್ತದೆ. ಇದನ್ನು ರಾಘು ಸಹ ಕ್ಲಿಯರ್‍ ಮಾಡಿರುವುದಕ್ಕೆ ಹೋಗಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಒಂದು ವಿಶೇಷ ಸಂದರ್ಶನದಲ್ಲಿ ತಮ್ಮ ಬಗ್ಗೆ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ನಿಮ್ಮ ಸರಿಯಾದ ಹೆಸರೇನು ಎಂದರೆ, ‘ಮೇಲೆ ಹೇಳಿದ ಯಾವುದೂ ಅಲ್ಲ, , ನಾನು ರಾಘು ರಾಮನಕೊಪ್ಪ’ ಎನ್ನುತ್ತಾರೆ ಅವರು.

‘ಕಿರಿಕ್‍ ಪಾರ್ಟಿ’ ಚಿತ್ರದಲ್ಲೊಂದು ಪುಟ್ಟ ಮತ್ತುಅಷ್ಟೇ ಗಮನಸೆಳೆಯುವ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ರಾಘು ರಾಮನಕೊಪ್ಪ. ಚಿತ್ರ ಬಿಡುಗಡೆಯಾದ ಈ ಏಳೂವರೆ ವರ್ಷಗಳಲ್ಲಿ ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿರುವುದು ಲೆಕ್ಚರರ್‍ ಅಥವಾ ಪ್ರೊಫೆಸರ್‍ ಪಾತ್ರಗಳಲ್ಲೇ ಎನ್ನುವುದು ವಿಶೇಷ.

‘ನಾನು ಮೂಲತಃ ರಂಗಭೂಮಿಯವನು. ಅಲ್ಲಿ ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತಿದ್ದೆ. ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಅವನು ಶಾಯರಿ ಅವಳು ಗಜಲ್‍’ ನಾಟಕದಲ್ಲಿ ನಾನು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ‘ನಿನಗೆ ಎಲ್ಲಾ ತರಹದ ಪಾತ್ರಗಳನ್ನು ಮಾಡುವ ಸಾಮರ್ಥ್ಯ ಇದೆ. ಯಾವುದೋ ಒಂದಕ್ಕೆ ಅಂಟಿಕೊಳ್ಳಬೇಡ. ಎಲ್ಲಾ ತರಹದ ಪಾತ್ರಗಳನ್ನು ಮಾಡು’ ಎಂದು ಆ ನಾಟಕವನ್ನು ನಿರ್ದೇಶಿಸಿದ್ದ ರಾಜೇಂದ್ರ ಕಾರಂತ್ ಹೇಳಿದ್ದರು. ಆದರೆ, ನಾನು ಇದುವರೆಗೂ ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ದೇನೆ. ಕಾಮಿಡಿ ಪಾತ್ರ ಮಾಡುತ್ತಿರುವುದಕ್ಕೆ ನನಗೆ ಖುಷಿ ಇದೆ. ತೃಪ್ತಿಯೂ ಇದೆ. ಅದರ ಜೊತೆಗೆ ಬೇರೆ ತರಹದ ಪಾತ್ರಗಳನ್ನೂ ಮಾಡುವ ಆಸೆ ಇದೆ’ ಎನ್ನುತ್ತಾರೆ ರಾಘು ರಾಮನಕೊಪ್ಪ.

ರಾಘವೇಂದ್ರ ಅಲಿಯಾಸ್‍ ರಾಘು ಮೂಲತಃ ತೀರ್ಥಹಳ್ಳಿ ಬಳಿಯ ರಾಮನಕೊಪ್ಪದವರು. ಎಂಟನೇ ಕ್ಲಾಸಿನಲ್ಲಿದ್ದಾಗಲೇ ಅವರು ಬೆಂಗಳೂರಿಗೆ ಬಂದರಂತೆ. ಬೆಂಗಳೂರಿನಲ್ಲಿ ಒಂದು ಪ್ರಿಂಟಿಂಗ್‍ ಪ್ರೆಸ್‍ ನಡೆಸುತ್ತಿರುವ ಅವರಿಗೆ ಹಲವು ವರ್ಷಗಳಿಂದ ರಂಗಭೂಮಿಯ ಒಡನಾಟವಿದೆ. ‘ನಾನು ಮೂಲತಃ ರಂಗಭೂಮಿಯವನು. ಅಂಕಲ್ ಶಾಮ್ ಅವರ ಅಂತರಂಗ ತಂಡದಿಂದ ನನ್ನ ರಂಗಭೂಮಿಯ ಪಯಣ ಶುರುವಾಯಿತು. ಆನಂತರ ಕಲಾ ಗಂಗೋತ್ರಿ, ನಾಟ್ಯದರ್ಪಣ, ಚಿತ್ತಾರ ಸೇರಿದಂತೆ ಹಲವು ತಂಡಗಳ ‘ಮೈಸೂರು ಮಲ್ಲಿಗೆ’ ‘ಮರಣ ಮೃದಂಗ’, ‘ಬೀಚಿ ಹೌಸ್‍’, ‘ಮಹಾ ಯಾತ್ರೆ’, ‘ಸಮಯ ಸಾಧಕರು, ಸೇರಿದಂತೆ ಹೊಸ ತಲೆಮಾರಿನ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಅವರು.

ಚಿತ್ರರಂಗಕ್ಕೆ ಬಂದ ಕುರಿತು ಮಾತನಾಡುವ ಅವರು, ‘ಒಮ್ಮೆ ವಿಜಯ ಕಾಲೇಜಿನಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರದ ಆಡಿಷನ್ ನಡೆಯುತ್ತಿತ್ತು. ನಾನು ಸಹ ಆ ಸಂದರ್ಭದಲ್ಲಿ ಅಲ್ಲೇ ಇದ್ದೆ. ಆಡಿಷನ್‍ ನಡೆಯುವ ವಿಚಾರ ಗೊತ್ತಾಗಿ, ಯಾಕೆ ಒಂದು ಕೈ ನೋಡಬಾರದು ಎಂದು ಅತ್ತ ಹೋದೆ. ಅಲ್ಲಿ ದೊಡ್ಡ ಕ್ಯೂ ಇತ್ತು. ಸಾಕಷ್ಟು ಯುವಕರು ಇದ್ದರು. ಆಗ ನನ್ನನ್ನು ಪ್ರಮೋದ್‍ ಶೆಟ್ಟಿ ನೋಡಿದರು. ನಮ್ಮಿಬ್ಬರದ್ದು ರಂಗಭೂಮಿಯ ನಂಟು. ಏನಿಲ್ಲಿ ಎಂದು ಕೇಳಿದರು. ಆಡಿಷನ್‍ಗೆ ಬಂದಿರುವುದಾಗಿ ಹೇಳಿದೆ. ಬನ್ನಿ ನನ್ನ ಜೊತೆಗೆ ಎಂದು ಅವರು ಒಳಗೆ ಕರೆದುಕೊಂಡು ಹೋಗಿ ರಿಷಭ್‍ ಶೆಟ್ಟಿ ಮತ್ತು ರಕ್ಷಿತ್‍ ಶೆಟ್ಟಿ ಅವರನ್ನು ಪರಿಚಯಿಸಿದರು. ಆಗ ರಿಷಭ್ ಶೆಟ್ಟಿ ನನಗೆ ರಾಕೆಟ್‍ ದೃಶ್ಯ ಕೊಟ್ಟರು. ನಾನು ಅಭಿನಯಿಸಿ ತೋರಿಸಿದೆ. ನನ್ನನ್ನು ಶಾರ್ಟ್‍ಲಿಸ್ಟ್ ಮಾಡುವುದಾಗಿ ಹೇಳಿದರು. ಅದಾಗಿ 15 ದಿನಗಳ ನಂತರ ಒಮ್ಮೆ ಪ್ರಮೋದ್‍ ಶೆಟ್ಟಿ ಫೋನ್‍ ಮಾಡಿ, ತಕ್ಷಣ ಹಾಸನಕ್ಕೆ ಬರಬೇಕೆಂದು ಹೇಳಿದರು. ನಾನು ಹೋದೆ. ಮರುದಿನದಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸಿದೆ. ಕಾರ್‍ ತಳ್ಳುವ ದೃಶ್ಯದಲ್ಲಿ, Which branch are you from? ಅಂತ ಕೇಳುವ ಸಂಭಾಷಣೆ ನನ್ನ ಮೊದಲ ಸಂಭಾಷಣೆಯಾಗಿತ್ತು. ಆ ಚಿತ್ರದಲ್ಲಿ ನಟಿಸುವಾಗ ಯಾವ ಹೆಸರಿನಿಂದ ಗುರುತಿಸಿಕೊಳ್ಳಬೇಕು ಎಂದಾಗ ರಾಘು ರಾಮನಕೊಪ್ಪ ಎಂಬ ಹೆಸರಲ್ಲಿ ಚಿತ್ರಂಗಕ್ಕೆ ಪ್ರವೇಶಿಸುವುದಕ್ಕೆ ತೀರ್ಮಾನಿಸಿದೆ’ ಎನ್ನುತ್ತಾರೆ ಅವರು.

ರಾಘು ಕೈಯಲ್ಲಿ ಕೈತುಂಬಾ ಸಿನಿಮಾಗಳಿವೆಯಂತೆ. ‘ಸತತವಾಗಿ ಪಾತ್ರಗಳು ಸಿಗುತ್ತಿವೆ. ಕೋವಿಡ್ ಸಮಯ ಬಿಟ್ಟರೆ ನಾನು ಬ್ಯುಸಿಯಾಗಿಯೇ ಇದ್ದೇನೆ. ನಮ್ಮದು ಕಾಮಿಡಿ ಪಾತ್ರಗಳಾದ್ರಿಂದ ಚಿತ್ರದಲ್ಲಿ ಮೂರ್ನಾಲ್ಕು ದಿನಗಳ ಚಿತ್ರೀಕರಣವಿರುತ್ತದೆ. ಕೆಲವು ಸಿನಿಮಾಗಳಲ್ಲಿ ಜಾಸ್ತಿ ಅವಕಾಶವಿರುವಂತಹ ಪಾತ್ರಗಳು ಸಿಗುತ್ತಿವೆ. ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಅಂಥದ್ದೊಂದು ಅವಕಾಶ ಸಿಕ್ಕಿತು. ಸಿದ್ದು ಮೂಲಿಮನಿ ನಟಿಸುತ್ತಿರುವ ‘ಸೀಟ್ ಎಡ್ಜ್’, ಮಂಜು ಸ್ವರಾಜ್‍ ನಿರ್ದೇಶನದ ‘ಸರಳ ಸುಬ್ರಾಯ, ದಿನಕರ್‍ ತೂಗುದೀಪ ನಿರ್ದೇಶನದ ‘ರಾಯಲ್‍’, ಅರುಣ್‍ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’, ಶ್ರುತಿ ಹರಿಹರನ್‍ ನಿರ್ದೇಶನದ ಚಿತ್ರಗಳಲ್ಲಿ ಪ್ರಮುಖವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ‘ಬಘೀರ’ ಚಿತ್ರದ ಪೂರಾ ಪ್ರಕಾಶ್‍ ರೈ ಅವರ ಜೊತೆಗೆ ನಟಿಸಿದ್ದೇನೆ’ ಎಂದು ಖುಷಿಪಡುತ್ತಾರೆ.

ರಾಘು ಎಷ್ಟು ದುಬಾರಿ ಎಂದರೆ, ನಾನು ದುಬಾರಿಯಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ನಾನು ದುಬಾರಿಯೇನಲ್ಲ. ನಾನು ಹೆಚ್ಚಿನ ಸಂಭಾವನೆ ಕೇಳಿದರೂ ಇಲ್ಲಿ ಕೊಡುವುದಿಲ್ಲ. ನನಗೆ ಎಷ್ಟು ಕೊಡಬೇಕು ಅಂತ ಚಿತ್ರರಂಗದವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಕೊಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಬೇಸರವಿಲ್ಲ. ಇದುವರೆಗೂ ನಾನು ಚಿತ್ರರಂಗದಲ್ಲಿ ಯಾವುದೇ ಚೆಕ್ ಬೌನ್ಸ್ ನೋಡಿಲ್ಲ’ ಎಂದು ಮಾತು ಮುಗಿಸುತ್ತಾರೆ.

ಈ ಚಿತ್ರ ನೋಡಿ ನನ್ನ ಬೆನ್ನು ನಾನೇ ತಟ್ಟಿಕೊಂಡೆ: ದಿಗಂತ್‍

Discover more from KannadaScreens

Subscribe now to keep reading and get access to the full archive.

Continue reading