ಈ ಚಿತ್ರ ನೋಡಿ ನನ್ನ ಬೆನ್ನು ನಾನೇ ತಟ್ಟಿಕೊಂಡೆ: ದಿಗಂತ್‍

ಚಂದನವನ, ಸಿನಿ ಸುದ್ದಿ

ದಿಗಂತ್‍ ಮತ್ತು ಸಂಗೀತಾ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್’ ಚಿತ್ರವು ಇದೇ ಏಪ್ರಿಲ್‍ 05ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು, ಸೋಮವಾರ ಸಂಜೆ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ. ಚಿನ್ನದ ಬಿಸ್ಕಟ್ ಮಾರಲು ಹೋದ ನಾಲ್ವರ ಕಥೆ ಇರುವ ಈ ಚಿತ್ರದ ಟ್ರೇಲರ್‍ ಜಂಕಾರ್ ಮ್ಯೂಸಿಕ್‍ನಲ್ಲಿ ಬಿಡುಗುಡೆಯಾಗಿದೆ.

‘ಮಾರಿಗೋಲ್ಡ್’ ಕುರಿತು ಮಾತನಾಡುವ ದಿಗಂತ್‍, ‘ಈ ಸಿನಿಮಾ ಮಾಡುವಾಗ ನಾವೆಲ್ಲಾ ಬಹಳ ಕಷ್ಟಪಟ್ಟಿದ್ದೇವೆ. ಇದುವರೆಗೂ ಚಿತ್ರೀಕರಣ ಮಾಡದ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಬಿಸಿಲು, ಧೂಳು, ಹೊಗೆ ಲೆಕ್ಕಿಸದೆ ಶೂಟ್ ಮಾಡಿದ್ದೇವೆ. ನಿರ್ದೇಶಕ ರಘು ನನಗೆ ಹಳೆಯ ಪರಿಚಯ. ನಾವಿಬ್ಬರೂ ಈ ಹಿಂದೆ ಸಿನಿಮಾ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಇದು ಕಥೆ ಕೇಳುತ್ತಲ್ಲೇ ಒಪ್ಪಿಕೊಂಡೆ. ಕಥೆಯೂ ಚೆನ್ನಾಗಿತ್ತು. ಟೈಟಲ್‍ ಸಹ ಕ್ಯಾಚಿಯಾಗಿತ್ತು. ರಾಘು ಇದಕ್ಕೂ ಮುನ್ನ ಯಾವುದೇ ಸಿನಿಮಾ ಮಾಡದಿದ್ದರೂ, ಹಲವು ಚಿತ್ರಗಳಿಗೆ ಆರಂಭಿಕ ಹಂತಗಳಿಂದ ಕೆಲಸ ಮಾಡಿದ ಅನುಭವವಿತ್ತು. ಹಾಗಾಗಿ, ಈ ಚಿತ್ರವನ್ನು ಒಪ್ಪಿಕೊಂಡೆ ಎಂದರು.

ಇನ್ನು, ನಿರ್ದೇಶಕರನ್ನು ಒಪ್ಪಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಎಂದ ದಿಗಂತ್, ‘ಕೆಲವೊಮ್ಮೆ ಏಳೆಂಟು ಟೇಕ್‍ ಆದರೂ ಅವರನ್ನು ಒಪ್ಪಿಸುವುದು ಕಷ್ಟವಾಗುತ್ತಿತ್ತು. ಏನಪ್ಪಾ, ನನಗೆ ನಟನೆ ಮಾಡೋಕೆ ಬರಲ್ವಾ ಅಂದುಕೊಂಡೆ. ಸಿನಿಮಾ ನೋಡಿದ ಮೇಲೆ ಚೆನ್ನಾಗಿ ಮಾಡಿದ್ದೇನೆ ಅನಿಸಿತು. ಸಾಮಾನ್ಯವಾಗಿ ನನಗೆ ಹಾಗನಿಸುವುದಿಲ್ಲ. ಈ ಚಿತ್ರ ನೋಡಿ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಸಂಪೂರ್ಣ ಕ್ರೆಡಿಟ್‍ ರಾಘುಗೆ ಸಲ್ಲಬೇಕು. ಇದೇ ತರಹ ಬೇಕು, ಬಾಡಿ ಲಾಂಗ್ವೇಜ್‍ ಹೀಗೇ ಇರಬೇಕು ಎಂದು ಮಾಡಿಸಿದರು. ಅದು ನನಗೆ ಭವಿಷ್ಯದಲ್ಲೂ ಬಹಳ ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ. ಒಟ್ಟಾರೆ, ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿಯಾಯಿತು’ ಎಂದರು.

ನಾಯಕಿ ಸಂಗೀತಾ ಶೃಂಗೇರಿ ಕುರಿತು ಮಾತನಾಡಿದ ದಿಗಂತ್‍, ಸಂಗೀತಾ ಅವರ ಅಭಿಮಾನಿಗಳು ಈ ಚಿತ್ರವನ್ನು ನೋಡಿದರೆ, ಚಿತ್ರ ಹಿಟ್‍ ಆಗುತ್ತದೆ ಎಂದರು. ‘ಅಭಿಮಾನಿಗಳಲ್ಲೂ, ಮಹಿಳಾ ಅಭಿಮಾನಿಗಳು ಸಿನಿಮಾ ನೋಡಿದರೂ ಸಾಕು, ಚಿತ್ರ ಹಿಟ್‍ ಆಗೋದು ಗ್ಯಾರಂಟಿ. ಅವರಿಗೆ ಸಿಕ್ಕ ಖ್ಯಾತಿ ಬಗ್ಗೆ ಖುಷಿಯಾಗುತ್ತದೆ. ಸಂಗೀತಾ ಅಭಿಮಾನಿಗಳ ಅವರ ಕೈಹಿಡಿದುಕೊಂಡು ಅಳುತ್ತಾರೆ. ಅದು ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ಭಯದ ಅಳು ಅಲ್ಲ, ಖುಷಿಯ ಅದು. ಅವರು ಇನ್ನಷ್ಟು ಹೆಚ್ಚೆಚ್ಚು ಬೆಳೆಯಲಿ. ಅವರದ್ದು ಈ ಚಿತ್ರದಲ್ಲಿ ಬೋಲ್ಡ್ ಪಾತ್ರ. ಕಲೆಗಾಗಿ ಏನು ಬೇಕಾದರೂ ಮಾಡುತ್ತೀನಿ ಎಂದು ಈ ಪಾತ್ರ ಮಾಡಿದ್ದಾರೆ. ಅವರ ಜೊತೆಗೆ ಪಾತ್ರ ಮಾಡೋಕೆ ಅವಕಾಶ ಸಿಕ್ಕಿದ್ದಕ್ಕೆ ಥ್ಯಾಂಕ್ಸ್’ ಎಂದರು.

ಈ ಹಿಂದೆ, ‘ಗುಣವಂತ’ ಚಿತ್ರವನ್ನು ನಿರ್ದೇಶಿಸಿದ್ದ ರಘುವರ್ಧನ್‍, ಈ ಚಿತ್ರವನ್ನು ಆ‌ರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ‌  ಮಾಡಿದ್ದಾರೆ.  ರಾಘವೇಂದ್ರ ಎಂ. ನಾಯ್ಕ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ದಿಗಂತ್‍, ಸಂಗೀತಾ ಶೃಂಗೇರಿ, ಸಂಪತ್‍ ಮೈತ್ರೇಯ, ಯಶ್‍ ಶೆಟ್ಟಿ, ಗಣೇಶ್‍ ರಾವ್ ಸಾವರ್ಕರ್‍, ಮಹಾಂತೇಶ್‍, ‘ಕಾಕ್ರೋಚ್’ ಸುಧಿ, ಬಲ ರಾಜವಾಡಿ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ವೀರ್‍ ಸಮರ್ಥ್‍ ಅವರ ಸಂಗೀತ ಮತ್ತು ಕೆ.ಎಸ್‍. ಚಂದ್ರಶೇಖರ್‍ ಅವರ ಛಾಯಾಗ್ರಹಣವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ನಮ್ಮ ಫ್ಯಾಮಿಲಿ ನಡೀತಿರೋದೇ ನಿಮ್ಮಿಂದ: ಯುವ

Discover more from KannadaScreens

Subscribe now to keep reading and get access to the full archive.

Continue reading