ಅಪ್ಪ-ಮಗನ ಸಂಬಂಧ ಬಣ್ಣಿಸುವ ‘ಅಪ್ಪುಗೆ’ ಬಿಡುಗಡೆ …

ಚಂದನವನ, ಸಿನಿ ಸುದ್ದಿ

ಯುವ ರಾಜಕುಮಾರ್‍ ಅಭಿನಯದ ಮೊದಲ ಚಿತ್ರ ‘ಯುವ’ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಮಾರ್ಚ್‍ 29ರಂದು ಬಿಡುಗಡೆ ಆಗಲಿದ್ದು, ಅದಕ್ಕೂ ಮೊದಲು ಚಿತ್ರದ ‘ಅಪ್ಪುಗೆ’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಅಪ್ಪ-ಮಗನ ಸಂಬಂಧ ಬಣ್ಣಿಸುವ ಹಾಡನ್ನು ಪುನೀತ್‍ ರಾಜಕುಮಾರ್ ಮಗಳು ವಂದಿತಾ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಂತೋಷ್‍ ಆನಂದರಾಮ್‍, ‘’ಯವ’ ಒಂದು ಕೌಟುಂಬಿಕ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಸಿನಿಮಾ. ತಂದೆ-ಮಗನ ಬಾಂಧವ್ಯದ ಚಿತ್ರವೂ ಹೌದು. ಒಂದು ಕುಟುಂಬಕ್ಕಾಗಿ ಅಪ್ಪ ಸಾಕಷ್ಟು ಮಾಡುತ್ತಾನೆ. ಆದರೆ, ಆತ ಯಾರಿಂದಲೂ ಏನನ್ನು ನಿರೀಕ್ಷಿಸುವುದಿಲ್ಲ. ಕುಟುಂಬದಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು. ಅಂತಹ ಅಪ್ಪನ ಗುಣಗಳನ್ನು ವರ್ಣಿಸುವ ನಮ್ಮ ಚಿತ್ರದ ‘ಅಪ್ಪುಗೆ’ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಾನೇ ಬರೆದಿದ್ದೇನೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅಪ್ಪನ ಕುರಿತಾದ ಹಾಡಾಗಿರುವುದರಿಂದ ಈ ಹಾಡನ್ನು ವಂದಿತ ಅವರಿಂದ ಬಿಡುಗಡೆ ಮಾಡಿಸೋಣ ಅಂದುಕೊಂಡೆವು‌’ ಎಂದರು.

ಇನ್ನು, ‘ಯುವ’ ಚಿತ್ರದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ‘ಮಾರ್ಚ್ 21 ರಂದು ‘ಯುವ’ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಮಾರ್ಚ್ 23 ರಂದು ಹೊಸಪೇಟೆಯಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಚಿತ್ರ ಮಾರ್ಚ್ 29ಕ್ಕೆ ತೆರೆಗೆ ಬರಲಿದೆ’ ಎಂದು ಸಂತೋಷ್‍ ತಿಳಿಸಿದರು.

ಈ ಚಿತ್ರದ ಕಥೆಗೂ ಹಾಗೂ ನನ್ನ ಜೀವನದ ಕಥೆಗೂ ಸಾಕಷ್ಟು ಸ್ವಾಮ್ಯತೆ ಇದೆ ಎಂದು ಮಾತು ಆರಂಭಿಸಿದ ನಾಯಕ ಯುವ ರಾಜಕುಮಾರ್, ‘ತಂದೆ-ಮಗನ ಸಂಬಂಧ ಬೇರೆ ರೀತಿಯದೆ ಸಂಬಂಧ. ತಂದೆಯ ಜವಾಬ್ದಾರಿ ನಮಗೆ ಅರ್ಥವಾಗುವುದೇ ಇಲ್ಲ. ನಾವು ದುಡಿಯುವುದಕ್ಕೆ ಶುರು ಮಾಡಿದಾಗ ನಮಗೆ ತಂದೆಯ ಜವಾಬ್ದಾರಿ ತಿಳಿಯುತ್ತಾ ಹೋಗುತ್ತದೆ. ಈ ಚಿತ್ರದಲ್ಲಿ ಅಚ್ಯುತ್‍ ಕುಮಾರ್ ಅವರು ನನ್ನ ತಂದೆ ಪಾತ್ರ ಮಾಡಿದ್ದಾರೆ‌. ಅವರೊಂದಿಗೆ ಕೆಲವು ಸನ್ನಿವೇಶಗಳಲ್ಲಿ ನಟಿಸಬೇಕಾದರೆ ನನಗೆ ನಮ್ಮ ಅಪ್ಪ ಕಣ್ಣ ಮುಂದೆ ಬರುತ್ತಿದ್ದರು. ಅಂತಹ ಅಪ್ಪ – ಮಗನ ನಡುವಿನ ಸಂಬಂಧವನ್ನು ಬಣ್ಣಿಸುವ ಈ ‘ಅಪ್ಪುಗೆ’ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ’

‘ಯುವ’ ಚಿತ್ರವನ್ನು ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ನಿರ್ಮಿಸಿದ್ದು, ಸಂತೋಷ್‍ ಆನಂದರಾಮ್‍ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯುವಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದು, ಮಿಕ್ಕಂತೆ ಅಚ್ಯುತ್‍ ಕುಮಾರ್‍, ಸುಧಾರಾಣಿ, ಕಿಶೋರ್‍ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ಸಂಯೋಜಿಸಿದ್ದು, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್‍ ಆಡಿಯೋ ಖರೀದಿಸಿದೆ.

ಸಿನಿಮಾ ಪಕ್ಕಕ್ಕಿಟ್ಟು ಮತ್ತೆ ರಾಜಕೀಯದತ್ತ ನಿಖಿಲ್‍?

Discover more from KannadaScreens

Subscribe now to keep reading and get access to the full archive.

Continue reading