‘ಜೊತೆಜೊತೆಯಲಿ’ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವೇ ಉಳಿದಿದ್ದ ಅನಿರುದ್ಧ್ ಜತ್ಕರ್, ಈಗ ಹೊಚ್ಚ ಹೊಸ ಧಾರಾವಾಹಿಯ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಅವರು ‘ಸೂರ್ಯವಂಶ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಈ ಧಾರಾವಾಹಿಯು ಉದಯ ಟಿ.ವಿಯಲ್ಲಿ ಮಾರ್ಚ್ ಇಂದಿನಿಂದ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ್, ಅಶ್ವಿನಿ, ಸುಂದರರಾಜ್, ವಿಕ್ರಂ ಉದಯಕುಮಾರ್, ರಾಮಸ್ವಾಮಿ, ರವಿ ಭಟ್, ಲೋಕೇಶ್ ಬಸವಟ್ಟಿ, ಸುಂದರಶ್ರೀ ಮುಂತಾದವರು ನಟಿಸುತ್ತಿದ್ದಾರೆ. ತನ್ವಿ ಮೀಡಿಯಾದಡಿ ಪದ್ಮನಾಭ್ ನಿರ್ಮಿಸುತ್ತಿರುವ ಈ ಧಾರಾವಾಹಿಯ ಸಂಚಿಕೆ ನಿರ್ದೇಶನ ಪ್ರಕಾಶ್ ಮುಚ್ಚಳಗುಡ್ಡ.
ಈ ಧಾರಾವಾಹಿಯ ಕುರಿತು ಮಾತನಾಡುವ ಅನಿರುದ್ಧ್, ‘ಇದನ್ನು ಒಪ್ಪುವುದಕ್ಕೆ ನನ್ನದು ಒಂದು ಕಂಡೀಷನ್ ಇತ್ತು. ಉದಯ ಟಿ.ವಿಯು ಕನ್ನಡದ ಮೊದಲ ಖಾಸಗೀ ಚಾಮಲ್. ಹಲವು ವರ್ಷಗಳ ಕಾಲ ನಂ.1 ಸ್ಥಾನದಲ್ಲಿತ್ತು. ಚಾನಲ್ ಮತ್ತೆ ನಂ.1 ಆಗಬೇಕು, ಈ ಧಾರಾವಾಹಿ ಶುರುವಾಗುವಾಗ ಯಾವ ಉತ್ಸಾಹ ಇರುತ್ತದೋ, ಕೊನೆಯವರೆಗೂ ಅದನ್ನು ಮುಂದುವರೆಸಬೇಕು ಎಂದು ಹೇಳಿದೆ. ಅದಕ್ಕೆ ಅವರೂ ಒಪ್ಪಿ, ಧಾರಾವಾಹಿಯನ್ನು ಬಹಳ ಚೆನ್ನಾಗಿ ರೂಪಿಸುತ್ತಿದ್ದಾರೆ. ಪ್ರೋಮೋ ನೋಡಿದರೆ, ಧಾರಾವಾಹಿಯು ಸಿನಿಮಾ ಲೆವೆಲ್‍ಗೆ ಮೂಡಿಬರುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಧಾರಾವಾಹಿಗೂ, ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹೆಸರು ಮಾತ್ರ ಅದೇ. ಮಿಕ್ಕಂತೆ ಸಂಪೂರ್ಣ ಹೊಸ ಕಥೆ ಮಾಡಲಾಗಿದೆ’ ಎಂದು ಹೇಳಿದರು.
ಧಾರಾವಾಹಿಯಲ್ಲಿ ಸತ್ಯಮೂರ್ತಿ ಪಾತ್ರವನ್ನು ಮಾಡುತ್ತಿರುವ ಸುಂದರ್ ರಾಜ್ ಸಹ ಧಾರಾವಾಹಿಯು ಸಿನಿಮಾ ಲೆವೆಲ್‍ಗೆ ಮೂಡಿ ಬರುತ್ತಿರುವುದಾಗಿ ಹೇಳಿದರು. ‘ಟ್ರೇಲರ್‍ನಲ್ಲೇ ಇಷ್ಟೊಂದು ಗ್ರಾಂಡ್ ಆಗಿ ಕಾಣುತ್ತದೆ ಎಂದರೆ, ಧಾರಾವಾಹಿ ಹೇಗೆ ಮೂಡಿಬಂದಿರಬಹುದು ಯೋಚಿಸಿ. ಪ್ರತೀ ದೃಶ್ಯವನ್ನು ಬಹಳವಾಗಿ ಯೋಚಿಸಿ ಮಾಡಲಾಗುತ್ತಿದೆ. ಯೋಗಾನಂದ್ ಅವರ ಸಂಭಾಷಣೆ ಅದ್ಭುತವಾಗಿದೆ. ಕಳೆದ 50 ವರ್ಷಗಳಲ್ಲಿ ಹಲವರ ಸಂಭಾಷಣೆ ಹೇಳಿದ್ದೇನೆ. ಆದರೆ, ಇದು ಬೆಂಕಿ ತರಹ ಇದೆ’ ಎಂದರು.
ಆ ಕಡೆ ಸೂರ್ಯವಂಶವಾದರೆ, ಇನ್ನೊಂದು ಕಡೆ ನಾಗವಂಶವಿದೆ. ಆ ಕುಟುಂಬದ ಒಡೆಯನಾಗಿ ವಿಕ್ರಂ ಉದಯಕುಮಾರ್ ನಟಿಸುತ್ತಿದ್ದಾರೆ. ‘ನಾನಿಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ಗುರುತು ಸಿಗದ ಹಾಗಾಗಿದ್ದೇನೆ. ನನ್ನನ್ನು ನೋಡಿದ ಹಲವರು ಉದಯಕುಮಾರ್ ಅವರನ್ನು ನೋಡಿದ ಹಾಗಾಯಿತು’ ಎಂದರು.
ಕಾಡೋರು ನೂರು, ಕಾಯೋನು ಒಬ್ಬ! ಬರ್ತಿದ್ದಾನೆ ಸೂರ್ಯವಂಶದ ಕುಡಿ!
‘ಸೂರ್ಯವಂಶ’ ಇದೇ ಮಾರ್ಚ್ 11 ರಿಂದ ರಾತ್ರಿ 8 ಗಂಟೆಗೆ ನಿಮ್ಮ ಉದಯ ಟಿ.ವಿಯಲ್ಲಿ. #Suryavamsha | From March 11th | 8 PM#UdayaTV #SerialsOnUdayaTV #SonOfSuryavamsha #AniruddhaJatkar pic.twitter.com/Ni8rTmwraT
— udayaTV (@UdayaTV) February 25, 2024


