ಅದೇ ಹೆಸರು, ಹೊಸ ಕಥೆ; ಮಾ.11ರಿಂದ ‘ಸೂರ್ಯವಂಶ’

ಕಿರುತೆರೆ, ಚಂದನವನ, ಸಿನಿ ಸುದ್ದಿ, ಸಿನಿ ಸ್ವಾರಸ್ಯ

ಕೆಲವು ತಿಂಗಳುಗಳ ಹಿಂದೆ ಉದಯ ಟಿ.ವಿಯಲ್ಲಿ ಎಸ್‍. ನಾರಾಯಣ್‍ ನಿರ್ದೇಶನದಲ್ಲಿ ಮತ್ತು ಅನಿರುದ್ಧ್ ಅಭಿನಯದಲ್ಲಿ ‘ಸೂರ್ಯವಂಶ’ ಎಂಬ ಧಾರಾವಾಹಿ ಬರುತ್ತದೆ ಎಂದು ಸುದ್ದಿಯಾಗಿತ್ತು. ಒಂದಿಷ್ಟು ಚಿತ್ರೀಕರಣವೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಧಾರಾವಾಹಿ ಪ್ರಸಾರವಾಗಲಿಲ್ಲ. ಅನಿರುದ್ಧ್, ‘ಚೆಫ್‍ ಚಿದಂಬರ’ ಎಂಬ ಸಿನಿಮಾ ಮಾಡಿದರು. ಹೀಗಿರುವಾಗಲೇ, ಉದಯ ಟಿವಿಯಲ್ಲಿ ‘ಸೂರ್ಯವಂಶ’ ಎಂಬ ಹೊಸ ಧಾರಾವಾಹಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ.

‘ಸೂರ್ಯವಂಶ’ ಧಾರಾವಾಹಿಯು ಉದಯ ಟಿ.ವಿಯಲ್ಲಿ ಮಾರ್ಚ್ 11ರಿಂದ ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಈ ಧಾರಾವಾಹಿಯ ಕುರಿತು ಮಾತನಾಡುವ ಅನಿರುದ್ಧ್ ಜತ್ಕರ್, ‘ಹೆಸರು, ಚಾನಲ್‍ ಮತ್ತು ನಾನು … ಈ ಮೂರು ವಿಷಯಗಳು ಬಿಟ್ಟರೆ ಮಿಕ್ಕೆಲ್ಲವೂ ಬದಲಾಗಿದೆ. ಎಸ್‍. ನಾರಾಯಣ್‍ ನಿರ್ದೇಶನದಲ್ಲಿ ನಾನು ‘ಸೂರ್ಯವಂಶ’ ಮಾಡಬೇಕಿತ್ತು. ಈ ಧಾರಾವಾಹಿಯನ್ನು ಅವರೇ ನಿರ್ಮಿಸಬೇಕಿತ್ತು. 25 ಕಂತುಗಳ ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಧಾರಾವಾಹಿ ನಿಂತು ಹೋಯಿತು. ಕಾರಣ ಏನು ಅಂತ ನನಗೂ ಗೊತ್ತಿಲ್ಲ. ಅದಕ್ಕೆ ವಿಧಿ ಕಾರಣ ಎನ್ನಬಹುದು. ಬಹುಶಃ ಇದು ಆಗಬೇಕು ಅಂತ ಬರೆದಿತ್ತೇನೋ? ಅದು ಆಗಲಿಲ್ಲ. ಎಸ್‍. ನಾರಾಯಣ್ ಅವರ ಜೊತೆಗೆ ಕೆಲಸ ಮಾಡುವುದಕ್ಕೆ ಬಹಳ ಖುಷಿ ಇತ್ತು. ಕೆಲವು ಕಂತುಗಳ ಚಿತ್ರೀಕರಣ ಸಹ ಆಗಿತ್ತು. ಆದರೆ, ಅದು ತೆರೆ ಮೇಲೆ ಬರಲಿಲ್ಲ. ಈ ಬಗ್ಗೆ ಬೇಸರ ಇದ್ದೇ ಇದೆ. ಅದೇ ಹೆಸರಿಟ್ಟುಕೊಂಢು ಈಗ ಸಂಪೂರ್ಣ ಹೊಸ ಧಾರಾವಾಹಿಯನ್ನು ಮಾಡಲಾಗುತ್ತಿದೆ. ಕಥೆ, ಪಾತ್ರವರ್ಗ ಎಲ್ಲವೂ ಬದಲಾಗಿದೆ’ ಎನ್ನುತ್ತಾರೆ.

ಇನ್ನು, ಕಳೆದ ವರ್ಷ ‘ಜೊತೆಜೊತೆಯಲಿ’ ಧಾರಾವಾಹಿಗೆ ಸಂಬಂಧಿಸಿದಂತೆ ಒಂದಿಷ್ಟು ಝಟಾಪಟಿಗಳಾಗಿದ್ದವು. ಅನಿರುದ್ಧ್ ಅವರನ್ನು ಬ್ಯಾನ್‍ ಮಾಡಬೇಕು ಎಂದು ಕಿರುತೆರೆಯ ಸಂಘವೊಂದು ಆಗ್ರಹಿಸಿತ್ತು. ಹೀಗಿರುವಾಗ, ಈ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲವೇ? ಎಂಬ ಪ್ರಶ್ನೆ ಸಹಜ.

ಈ ಕುರಿತು ಮಾತನಾಡುವ ಅವರು, ‘ನನ್ನನ್ನು ದೂರ ಇಡಿ ಎಂದು ಚಾನಲ್‍ ಆಫೀಸಿಗೆ ಕರೆ ಬಂದಿದ್ದವಂತೆ. ಆದರೆ, ಉದಯ ಟಿವಿಯವರು ನನ್ನ ಜೊತೆಗೆ ನಿಂತರು. ಬನ್ನಿ ಮಾತಾಡೋಣ ಎಂದು ಕರೆದರೂ, ಯಾರೂ ಈ ವಿಷಯವಾಗಿ ಅಲ್ಲಿಗೆ ಹೋಗಿ ಬಹಿರಂಗವಾಗಿ ಮಾತನಾಡಲಿಲ್ಲ. ಮುಂಚೆ ಎಸ್‍. ನಾರಾಯಣ್‍ ಅವರಿಗೂ ಕೆಲವರು ಕರೆ ಮಾಡಿ ನನ್ನನ್ನು ದೂರ ಇಡುವಂತೆ ಹೇಳಿದ್ದರಂತೆ. ಆದರೆ, ಎಸ್‍. ನಾರಾಯಣ್‍ ಒಪ್ಪಿಲ್ಲ. ನನ್ನ ಕಥೆಗೆ ಅವರೇ ಬೇಕು ಎಂದು ಹೇಳಿ ನನ್ನ ಜೊತೆಗೆ ನಿಂತರು. ದುರಾದೃಷ್ಟವಶಾತ್‍, ಆ ಧಾರಾವಾಹಿ ಮುಂದಕ್ಕೆ ಹೋಗಲಿಲ್ಲ’ ಎನ್ನುತ್ತಾರೆ ಅನಿರುದ್ಧ್.

‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ್, ಅಶ್ವಿನಿ, ಸುಂದರರಾಜ್‍, ವಿಕ್ರಂ ಉದಯಕುಮಾರ್‍, ರಾಮಸ್ವಾಮಿ, ರವಿ ಭಟ್‍, ಲೋಕೇಶ್‍ ಬಸವಟ್ಟಿ, ಸುಂದರಶ್ರೀ ಮುಂತಾದವರು ನಟಿಸುತ್ತಿದ್ದಾರೆ. ತನ್ವಿ ಮೀಡಿಯಾದಡಿ ಪದ್ಮನಾಭ್‍ ನಿರ್ಮಿಸುತ್ತಿರುವ ಈ ಧಾರಾವಾಹಿಯ ಸಂಚಿಕೆ ನಿರ್ದೇಶನ ಪ್ರಕಾಶ್‍ ಮುಚ್ಚಳಗುಡ್ಡ.

ಪುನೀತ್‍ಗಿಂತ ಲೋಕಲ್‍ ಆಗಿರೋರು ಸಿಗಲ್ಲ: ಸೂರಿ

Discover more from KannadaScreens

Subscribe now to keep reading and get access to the full archive.

Continue reading