ಗುರುಪ್ರಸಾದ್ ಅನಾದಿಕಾಲದಿಂದಲೂ ತಾವೊಬ್ಬ ಹತಾಶ ಪ್ರೇಕ್ಷಕ, ಆ ಹತಾಶೆಯೇ ಚಿತ್ರ ಮಾಡುವಂತೆ ಪ್ರೇರೇಪಿಸಿತು ಎಂದು ಹೇಳಿಕೊಂಡು ಬಂದಿದ್ದಾರೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ, ನಾಲ್ಕು ಚಿತ್ರಗಳು ಬಿಡುಗಡೆಯಾಗಿ, ಐದನೇ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದರೂ, ಆ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲವಂತೆ. ಅವರಿನ್ನೂ ಹತಾಶ ಪ್ರೇಕ್ಷಕರಾಗಿಯೇ ಇದ್ದಾರಂತೆ.
ಗುರುವಾರ ಸಂಜೆ, ಗುರುಪ್ರಸಾದ್ ನಿರ್ದೇಶನದ, ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರದ ಟ್ರೇಲರ್ ಬಿಡಗುಡೆಯಾಗಿದೆ. ಈ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ ಗುರುಪ್ರಸಾದ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ನಾನೊಬ್ಬ ಹತಾಶ ಪ್ರೇಕ್ಷಕ. ಕನ್ನಡ ಚಿತ್ರರಂಗದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬ ಅಷ್ಟೂ ಮಾಹಿತಿ ನನ್ನ ಬಳಿ ಇದೆ. ಕಳೆದ 38 ವರ್ಷಗಳಲ್ಲಿ ಸಾಕಷ್ಟು ರೀಸರ್ಚ್ ಮಾಡಿದ್ದೇನೆ. ಬಹಳಷ್ಟು ಸಿನಿಮಾಗಳು, ಜನ ಏನು ಮೆಚ್ಚುತ್ತಾರೋ ಅದನ್ನು ಕೊಡುವುದಷ್ಟೇ ಆಗಿದೆ. ಮಿಕ್ಕಂತೆ ಕ್ರಿಯೇಟಿವ್ ಆಗಿ ಯಾಕೆ ಏನೂ ಮಾಡುತ್ತಿಲ್ಲ ಎಂಬ ಪ್ರಶ್ನೆ ಪ್ರತಿಯೊಬ್ಬ ಪ್ರೇಕ್ಷಕನಲ್ಲೂ ಇದ್ದೇ ಇದೆ. ನಾನು ಹೊರಗೆ ಕುಳಿತು ಕಾಮೆಂಟ್ ಮಾಡೋನಲ್ಲ. ಅಡುಗೆ ಸರಿ ಇಲ್ಲ ಎಂದರೆ ನಾನೇ ಮಾಡಿ ತೋರಿಸುತ್ತೇನೆ. ಹೀಗಿರಬೇಕಿತ್ತು ಎಂದು ಹೇಳುತ್ತೇನೆ. ಅಡುಗೆ ಚೆನ್ನಾಗಿಲ್ಲ ಎಂದು ಹೇಳಿಕೊಂಡು ಓಡಾಡುವ ದರಿದ್ರ ಮನಸ್ಥಿತಿ ಇಲ್ಲ. ನಿರ್ದೇಶಕನಾಗಿ ನಾನು ಅದೇ ಚಾಲೆಂಜ್ ತೆಗೆದುಕೊಂಡು ಚಿತ್ರ ಮಾಡುತ್ತೇನೆ’ ಎಂದರು ಗುರು.
ಹತಾಶ ಪ್ರೇಕ್ಷಕನಿಗೆ ತಲೆ ಕೆಟ್ಟರೆ ಸಿನಿಮಾ ಮಾಡಿ ತೋರಿಸುತ್ತಾನೆ ಎಂದು ತೋರಿಸಿದವನು ನಾನು ಎಂದ ಅವರು, ‘ಬಹಳಷ್ಟು ಚಿತ್ರಗಳಲ್ಲಿ ಪರಿಪೂರ್ಣತೆ, ಗುಣಮಟ್ಟ, ನಾಯಕನನ್ನು ಬಳಸಿಕೊಳ್ಳುವ ವಿಧಾನ ಕಾಣುವುದಿಲ್ಲ. ಜಗ್ಗೇಶ್ ಅವರ ವೃತ್ತಿಜೀವನವನ್ನೇ ತೆಗೆದುಕೊಂಡರೆ, ಅವರು ನಟಿಸಿರುವ ಇಷ್ಟು ಚಿತ್ರಗಳಲ್ಲಿ ‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರಗಳು ಒಂದು ಕಡೆಯಾದರೆ, ಮಿಕ್ಕ ಚಿತ್ರಗಳು ಇನ್ನೊಂದು ಕಡೆ. ಹಾಗಾದರೆ, ಇಂಥ ಒಂದು ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವಾ. ಅದು ಒಬ್ಬ ನಿರ್ದೇಶಕ ಮತ್ತು ಬರಹಗಾರನ ಜವಾಬ್ದಾರಿಯಾಗಿರುತ್ತದೆ ಮತ್ತು ಅವನ ವೃತ್ತಿಜೀವನದ ಜವಾಬ್ದಾರಿಯೂ ಆಗಿರುತ್ತದೆ. ನಾನು ಇದುವರೆಗೂ ಯಾವುದೇ ಕೆಟ್ಟ ಚಿತ್ರ ಮಾಡಿಲ್ಲ. ಜೀವನಕ್ಕಾಗಿ ಸಿನಿಮಾವನ್ನು ಬಲಿ ಕೊಡುವ ಕೆಲಸವನ್ನು ನಾನು ಮಾಡಿಲ್ಲ. ನನ್ನ ಜೊತೆಗೆ ಇದ್ದವರು ಮೋಸ ಮಾಡಿರಬಹುದು. ಅದರಿಂದ ಚಿತ್ರದ ಕ್ಲೈಮ್ಯಾಕ್ಸ್ ಹಾಳಾಗಿರಬಹುದು. ಅದೆಲ್ಲವನ್ನೂ ಮೀರಿ ಒಬ್ಬ ಹತಾಶ ಪ್ರೇಕ್ಷಕ ಇವತ್ತು ಗೆದ್ದಿದ್ದಾನೆ’ ಎಂದು ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ಅವರು.
‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರಗಳಾದ ಮೇಲೆ ಗುರುಪ್ರಸಾದ್ ಕೋಟಿ ನಿರ್ದೇಶಕನಾಗಬಹುದಿತ್ತಂತೆ. ‘ಆ ಹೆಸರಿನಲ್ಲಿ ಕಿತ್ತೋದ ಸಿನಿಮಾಗಳನ್ನು ಮಾಡಿದ್ದರೆ, ಕೋಟಿ ಬರುತ್ತಿತ್ತು. ಬೇಕಾದಷ್ಟು ಆಸ್ತಿ ಮಾಡಬಹುದಿತ್ತು. ಕೆಲವು ಕೆಟ್ಟ ಚಿತ್ರಗಳನ್ನು ಕೆಲವು ಕಥಾನಾಯಕರು ಕಣ್ಣಿಗೊತ್ತಿಕೊಂಡು ಮಾಡಿದ್ದಾರೆ. ಅದು ಯಾಕೆ ಎಂಬ ಪ್ರಶ್ನೆ ಇದೆ. ಅವರು ಮಾಡಿದ 70 ಚಿತ್ರಗಳಲ್ಲಿ ಒಂದೋ, ಎರಡೋ ಸಿನಿಮಾ ಗೆದ್ದಿರತ್ತೆ. ಕಥಾನಾಯಕ ದುಡ್ಡು ಮಾಡುತ್ತಿರುತ್ತಾನೆ. ರೈತ ಮತ್ತು ಸೈನಿಕ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡುತ್ತಾರೆ. ಆದರೆ, ಕೆಲವು ಹೀರೋಗಳು ಕಲಾಸೇವೆ ಹೆಸರಿನಲ್ಲಿ ಕೋಟಿಕೋಟಿ ದುಡ್ಡು ಮಾಡುತ್ತಾರೆ. ಕಲಾಸೇವೆ ಹೇಗಾಯಿತು? ಅವರು ದುಡ್ಡು ತೆಗೆದುಕೊಂಡಿದ್ದಾರೆ ತಾನೇ? ಹಾಗಿದ್ದ ಮೇಲೆ ಅದು ಕಲಾಸೇವೆ ಹೇಗಾಯಿತು?’ ಎಂಬುದು ಗುರು ಪ್ರಶ್ನೆ.
ಕನ್ನಡ ಚಿತ್ರರಂಗವನ್ನು ಚಿತ್ರೋದ್ಯಮ ಎಂದು ಕರೆಯುವುದರನ್ನು ವಿರೋಧಿಸುವ ಅವರು, ‘ಇದು ಕನ್ನಡ ಚಿತ್ರೋದ್ಯಮ ಅಲ್ಲ. ಉದ್ಯಮ ಎಂದರೆ ಕಚ್ಚಾವಸ್ತು ಮತ್ತು ಪ್ರಾಡೆಕ್ಟ್ ಬಹಳ ಮುಖ್ಯ. ಅವೆರಡರ ಮೇಲೂ ನಮಗೆ ಹತೋಟಿ ಇರಬೇಕು. ಇದರ ಜೊತೆಗೆ ಗುಣಮಟ್ಟ ಇರಬೇಕು. ನಮಗೆ ಸಂತೋಷವಾಗದಿದ್ದರೆ ಕನ್ಸ್ಯೂಮರ್ ಕೋರ್ಟ್ಗೆ ಹೋಗುವಂತಿರಬೇಕು. ಆಗ ಅದು ಉದ್ಯಮವಾಗುತ್ತದೆ. ಇದು ಉದ್ಯಮವಲ್ಲ. ಉದ್ಯಮದ ಹೆಸರಲ್ಲಿ, ಕಲಾಸೇವೆಯ ಹೆಸರಲ್ಲಿ ಬೇಕಾದಷ್ಟು ತಪ್ಪುಗಳಾಗುತ್ತಿವೆ. ಇದನ್ನು ಕಾರಣಾಂತರಗಳಿಂದ ಜೀವನಕ್ಕಾಗಿ ಒಪ್ಪಿಕೊಂಡು ಬರಲಾಗಿದೆ. ನಾನದನ್ನು ವಿರೋಧೀಸುತ್ತೇನೆ’ ಎಂದರು.


